ಕರ್ನಾಟಕ

karnataka

ETV Bharat / state

ಕೆಲ ತಿಂಗಳಲ್ಲೇ ಮಾಸಿಕ 17 ಕೋಟಿ ಕೋವಿಡ್​ ಲಸಿಕೆ ತಯಾರಿ : ಡಿಸಿಎಂ ‌ಅಶ್ವತ್ಥನಾರಾಯಣ - ಡಿಸಿಎಂ ಅಶ್ವತ್ಥನಾರಾಯಣ,

ಕೆಲ ತಿಂಗಳಲ್ಲೇ ಮಾಸಿಕ 17 ಕೋಟಿ ಕೋವಿಡ್​ ಲಸಿಕೆ ತಯಾರಿ ಮಾಡಲಾಗುತ್ತದೆ ಎಂದು ಡಿಸಿಎಂ ‌ಅಶ್ವತ್ಥನಾರಾಯಣ ಹೇಳಿದ್ದಾರೆ.

Vaccine Revolution in India, Vaccine Revolution in India news, DCM Aswathanarayana, DCM Aswathanarayana news, ಭಾರತದಲ್ಲಿ ವ್ಯಾಕ್ಸಿನ್‌ ಕ್ರಾಂತಿ, ಭಾರತದಲ್ಲಿ ವ್ಯಾಕ್ಸಿನ್‌ ಕ್ರಾಂತಿ ಸುದ್ದಿ, ಡಿಸಿಎಂ ಅಶ್ವತ್ಥನಾರಾಯಣ, ಡಿಸಿಎಂ ಅಶ್ವತ್ಥನಾರಾಯಣ ಸುದ್ದಿ,
ಡಿಸಿಎಂ ‌ಅಶ್ವತ್ಥನಾರಾಯಣ

By

Published : Apr 16, 2021, 4:19 AM IST

ಬೆಂಗಳೂರು :ಕೋವಿಡ್‌ ಮಹಾಮಾರಿಯಿಂದ ನಮ್ಮ ಜನರನ್ನು ರಕ್ಷಣೆ ಮಾಡಿಕೊಳ್ಳಲು ಭಾರತವು ಲಸಿಕೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಇನ್ನು ಕೆಲ ತಿಂಗಳಲ್ಲೇ ಮಾಸಿಕ 17 ಕೋಟಿ ಲಸಿಕೆಗಳನ್ನು ಉತ್ಪಾದನೆ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ‌ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರಿನಲ್ಲಿ ಶುಕ್ರವಾರ ಕರ್ನಾಟಕ ಆವಿಷ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆ (KITS) ಮತ್ತು ಇಂಡೋ- ಫ್ರೆಂಚ್‌ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟ (IFCCI) ನಡುವೆ ಏರ್ಪಟ್ಟ ಒಪ್ಪಂದದ ವೇಳೆ ಮಾತನಾಡಿದ ಅವರು, ಸದ್ಯಕ್ಕೆ ಮಾಸಿಕ 7 ಕೋಟಿ ಕೋವಿಡ್‌ ಲಸಿಕೆಯನ್ನು ಉತ್ಪಾದನೆ ಮಾಡುತ್ತಿದೆ. ಇದಕ್ಕೆ ಇನ್ನೂ 10 ಕೋಟಿ ಲಸಿಕೆ ಸೇರಲಿದೆ. ತದ ನಂತರ ಕರ್ನಾಟಕವೂ ಸೇರಿ ದೇಶಾದ್ಯಂತ ಲಸಿಕೆ ಅಭಿಯಾನ ಮತ್ತಷ್ಟು ವೇಗಗೊಳ್ಳಲಿದೆ. ಇದರ ಜತೆ ಮತ್ತಷ್ಟು ಹೊಸ ಲಸಿಕೆಗಳು ಕೂಡ ಬರಲಿವೆ. ಅವು ರಾಜ್ಯಕ್ಕೂ ಲಭ್ಯವಾಗಲಿವೆ ಎಂದರು.

ಕೋವಿಡ್‌ ಮತ್ತಿತರೆ ಜಾಗತಿಕ ಸವಾಲುಗಳ ನಡುವೆಯೂ ಕರ್ನಾಟಕದಲ್ಲಿ ವಿದೇಶಿ ಹೂಡಿಕೆಗೆ ಮೇಲ್ಮುಖವಾಗಿಯೇ ಇದೆ. ಅದಕ್ಕೂ ಮೊದಲು, ಅಂದರೆ 2000 ರಿಂದ 2019ರವರೆಗೆ ರಾಜ್ಯಕ್ಕೆ 49.7 ಶತಕೋಟಿ ಡಾಲರ್‌ ವಿದೇಶಿ ಹೂಡಿಕೆ ಹರಿದುಬಂದಿದೆ. ವಿದೇಶಿ ಹೂಡಿಕೆ ಒಳಹರಿವಿನಲ್ಲಿ ರಾಜ್ಯವು ಮಹಾರಾಷ್ಟ್ರ ಮತ್ತು ನವದೆಹಲಿಯ ನಂತರ ಮೂರನೇ ಅಗ್ರರಾಜ್ಯವಾಗಿದೆ ಎಂದು ಡಿಸಿಎಂ ನುಡಿದರು.

ಕೋವಿಡ್‌ಗೂ ಮೊದಲು ಕರ್ನಾಟಕ ಹೂಡಿಕೆ ಅತ್ಯುತ್ತಮ ತಾಣವಾಗಿತ್ತು. ಅದೇ ರೀತಿ ಕೋವಿಡ್ಡೋತ್ತರ ಕಾಲದಲ್ಲಿಯೂ ಹೂಡಿಕೆಗೆ ಪ್ರಶಸ್ತ್ಯ ನೆಲೆಯಾಗಿದೆ ಎಂದು ಅವರು ಒತ್ತಿ ಹೇಳಿದರು.

ಮಾಹಿತಿ ತಂತ್ರಜ್ಞಾನ (ಐಟಿ) ಉತ್ಪನ್ನಗಳ ರಫ್ತು ವಹಿವಾಟಿನಲ್ಲಿ ಕರ್ನಾಟಕ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಭಾರತದ ಐಟಿ ರಫ್ತಿಗೆ ಕರ್ನಾಟಕ ಅತಿದೊಡ್ಡ ಕೊಡುಗೆ ಶೇ.40ರಷ್ಟಿ ಇದೆ. ಇದು ತೆಲಂಗಾಣ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಿಗಿಂತ ಹೆಚ್ಚು ಹಾಗೂ ಅದರಲ್ಲಿ ಕರ್ನಾಟಕ ಮತ್ತಿತರೆ ರಾಜ್ಯಗಳ ನಡುವೆ ಭಾರೀ ಅಂತರವಿದೆ ಎಂದು ಅವರು ಹೇಳಿದರು.

ಕೈಗಾರಿಕೆ, ಆವಿಷ್ಕಾರ, ಸಂಶೋಧನೆ, ಅಭಿವೃದ್ಧಿ ಇತ್ಯಾದಿ ಕ್ಷೇತ್ರಗಳಲ್ಲಿ ಕರ್ನಾಟಕವು ಅತ್ಯಂತ ಸಮೃದ್ಧ ರಾಜ್ಯವಾಗಿದೆ. ಒಟ್ಟು ದೇಶಿಯ ಉತ್ಪನ್ನದಲ್ಲಿ (GSDP) 220 ಶತಕೋಟಿ ಡಾಲರ್‌ ಹೊಂದಿದೆ. ಮುಖ್ಯವಾಗಿ ಐಟಿ, ಬಿಟಿ, ಇಎಸ್‌ಡಿಎಂ (ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆ) ಮತ್ತು ಎವಿಜಿಸಿ (ಆನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್) ಮುಂತಾದ ಕ್ಷೇತ್ರಗಳಿಗಾಗಿ ಪ್ರತ್ಯೇಕ ನೀತಿಗಳನ್ನೂ ರೂಪಿಸಿರುವ ಏಕೈಕ ರಾಜ್ಯ ಕರ್ನಾಟಕವಾಗಿದೆ ಎಂದು ಅವರು ತಿಳಿಸಿದರು.

ಈ ಒಪ್ಪಂದ ಬಹಳ ಮಹತ್ವದ್ದು...

ಮೊದಲಿನಿಂದಲೂ ಭಾರತ ಮತ್ತು ಫ್ರಾನ್ಸ್‌ ಸಹಜ ಪಾಲುದಾರ ದೇಶಗಳಾಗಿವೆಯಲ್ಲದೆ ಸಾಂಸ್ಕೃತಿಕ, ಆರ್ಥಿಕ, ವಿಜ್ಞಾನ-ತಂತ್ರಜ್ಞಾನ, ಶಿಕ್ಷಣ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಎರಡೂ ದೇಶಗಳು ನಿಕಟವಾಗಿ ಕೆಲಸ ಮಾಡುತ್ತಿವೆ. ಈ ಹಿನ್ನೆಲೆ ಭಾರತ ಮತ್ತು ಫ್ರಾನ್ಸ್‌ ಬಹಳ ನಿಕಟವಾಗಿ ಕೆಲಸ ಮಾಡುತ್ತಿವೆ. ಕರ್ನಾಟಕ ಆವಿಷ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆ (KITS)ಮತ್ತು ಇಂಡೋ-ಫ್ರೆಂಚ್‌ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟ (IFCCI) ನಡುವೆ ಏರ್ಪಟ್ಟ ಒಪ್ಪಂದ ಅತ್ಯಂತ ಮಹತ್ವಪೂರ್ಣವಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಈ ಒಪ್ಪಂದದ ಮೂಲಕ ಭಾರತ ಮತ್ತು ಫ್ರಾನ್ಸ್‌ ಬಾಂಧವ್ಯ ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಕರ್ನಾಟಕದ ಪಾತ್ರ ಮುನ್ನೆಲೆಗೆ ಬಂದಂತೆ ಆಗಿದೆ. ತಂತ್ರಜ್ಞಾನ, ಸ್ಟಾರ್ಟ್ ಅಪ್‌ ಇನ್ನಿತರೆ ಕ್ಷೇತ್ರಗಳಲ್ಲಿ ರಾಜ್ಯವು ಫ್ರಾನ್ಸ್‌ ಜತೆ ಮತ್ತಷ್ಟು ನಿಕಟವಾಗಿ ಕೆಲಸ ಮಾಡಲಿದೆ. ಒಪ್ಪಂದವು ಎರಡೂ ದೇಶಗಳ ನಡುವಿನ ನಾವೀನ್ಯತಾ ಸಹಯೋಗದ ಬೆಳವಣಿಗೆಗೆ ಪ್ರಮುಖ ಮೈಲಿಗಲ್ಲು. ಈ ಒಪ್ಪಂದವು ಎರಡೂ ದೇಶಗಳ ಉದ್ಯಮಶೀಲತೆ ಮತ್ತು ಆವಿಷ್ಕಾರದ ಹಿನ್ನೆಲೆ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು.

ಒಪ್ಪಂದಕ್ಕೆ ಐಟಿ ಇಲಾಖೆ ನಿರ್ದೇಶಕ ಗೋಪಾಲಕೃಷ್ಣ ಮತ್ತು ಇಂಡೋ-ಫ್ರೆಂಚ್‌ ಕೈಗಾರಿಕಾ ಮತ್ತು ವಾಣಿಜ್ಯ ಒಕ್ಕೂಟದ ಯಹೋನನ್‌ ಸ್ಯಾಮ್ಯುಯಲ್‌ ಅಂಕಿತ ಹಾಕಿದರು. ಒಪ್ಪಂದ ಏರ್ಪಡುವುದಕ್ಕೂ ಮುನ್ನ ಡಿಸಿಎಂ ಡಾಅಶ್ವತ್ಥನಾರಾಯಣ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಫ್ರಾನ್ಸ್‌ನ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಜೀನ್‌ ವಿಯಾಸ್‌ ಲೆ ಡ್ರಿಯಾನ್‌ ಹಾಗೂ ಭಾರತದಲ್ಲಿರುವ ಫ್ರಾನ್ಸ್‌ ರಾಯಭಾರಿ ಇಮ್ಯಾನ್ಯುಯಲ್‌ ಲೆನಿಯಾನ್‌, ಬೆಂಗಳೂರು ಫ್ರಾನ್ಸ್‌ ರಾಯಭಾರ ಕಚೇರಿಯ ಕಾನ್ಸುಲೇಟ್‌ ಜನರಲ್‌ ಮಾರ್ಜೋರಿ ವ್ಯಾನ್‌ಬೆಲಿಂಗ್ಹೆಮ್ ಜತೆ ಮಾತುಕತೆ ನಡೆಸಿದರು.

ABOUT THE AUTHOR

...view details