ಬೆಂಗಳೂರು: ರಾಜ್ಯದಲ್ಲಿ ಈವರೆಗೆ ಮೊದಲ ಡೋಸ್ ಪಡೆಯದ 45 ವಯೋಮಿತಿಯ ನಾಗರಿಕರು ಕೂಡಲೇ ಮುಂದೆ ಬಂದು ಲಸಿಕೆ ಪಡೆಯಬೇಕು. ಡಿಸೆಂಬರ್ ಒಳಗೆ ರಾಜ್ಯದಲ್ಲಿ ಎಲ್ಲರಿಗೂ ಲಸಿಕೆ ಹಾಕುವ ಸರಕಾರದ ಉದ್ದೇಶಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ವೋಟರ್ ಐಡಿ, ಬಿಪಿಎಲ್ ಕಾರ್ಡ್ ಹೊಂದಿರುವವರನ್ನು ಹುಡುಕಿ ನಾವೇ ಅವರನ್ನು ತಲುಪಿ ಲಸಿಕೆ ನೀಡುವ ಪ್ರಯತ್ನ ಮಾಡುತ್ತೇವೆ. ಮಹಾಮಾರಿಯನ್ನು ಎದುರಿಸಲು ಲಸಿಕೆ ಒಂದೇ ಪರಿಹಾರ. ಇದರ ಜತೆಗೆ ಹೆಚ್ಚು ಜನರ ಸಂಪರ್ಕದಲ್ಲಿರುವ ಆದ್ಯತಾ ಗುಂಪು ಅಥವಾ ಮುಂಚೂಣಿ ಕಾರ್ಯಕರ್ತರಿಗೆ ದೊಡ್ಡ ಪ್ರಮಾಣದಲ್ಲಿ ಲಸಿಕೆ ಹಾಕಲಾಗುತ್ತಿದೆ. ಈ ಅಭಿಯಾನವೂ ಅತ್ಯಂತ ಯಶಸ್ವಿಯಾಗಿ ಸಾಗುತ್ತಿದೆ. ಈಗಾಗಲೇ ಈ ವರ್ಗಕ್ಕೆ ಸೇರಿದ 17 ಲಕ್ಷಕ್ಕೂ ಹೆಚ್ಚು ಜನರಿಗೆ ರಾಜ್ಯವ್ಯಾಪಿ ಲಸಿಕೆ ಕೊಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಲಸಿಕೆ ಕೊರತೆ ಇಲ್ಲ, ಬಂದು ಹಾಕಿಸಿಕೊಳ್ಳಿ :
ಇಂದು ಡೆಲ್ ಸಂಸ್ಥೆ, ಶಿಕ್ಷಣ ಫೌಂಡೇಶನ್ ಹಾಗೂ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಫೌಂಡೇಶನ್ ಸಹಯೋಗದಲ್ಲಿ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ, ಖಾಸಗಿ ಸಂಸ್ಥೆಗಳ ಜತೆ ಸೇರಿಕೊಂಡು ಲಸಿಕೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿ ವಿದ್ಯಾರ್ಥಿ ಸಮೂಹಕ್ಕೆ ನೀಡುತ್ತಿರುವುದು ಖುಷಿಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಡೆಲ್ ಕಂಪನಿಯು ವಿದ್ಯಾರ್ಥಿಗಳಿಗೆ ಲಸಿಕೆಯನ್ನು ಪ್ರಾಯೋಜಿಸಿದ್ದು, ಮೊದಲ ದಿನವೇ ಒಂದು ಸಾವಿರ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಸರ್ಕಾರಿ ಕಾಲೇಜುಗಳ 525 ವಿದ್ಯಾರ್ಥಿಗಳು, ಖಾಸಗಿ ಕಾಲೇಜುಗಳ 475 ವಿದ್ಯಾರ್ಥಿಗಳು ಲಸಿಕೆ ಪಡೆದರು ಎಂದು ತಿಳಿಸಿದರು.
ಲಸಿಕೆ ಬೇಡಿಕೆ ಹೆಚ್ಚುತ್ತಿರುವಂತೆ ಖಾಸಗಿ ಕಂಪನಿಗಳಿಂದ ಸುಮಾರು 3.5 ಲಕ್ಷಕ್ಕೂ ಹೆಚ್ಚು ಲಸಿಕೆಗಳನ್ನು ಮುಖ್ಯಮಂತ್ರಿಯವರ ಸಲಹೆಗಾರ ಪ್ರಶಾಂತ್ ಪ್ರಕಾಶ್ ಅವರು ಕೊಡುಗೆಯಾಗಿ ಕೊಡಿಸುತ್ತಿದ್ದಾರೆ. ಇದನ್ನು ಅಗತ್ಯ ಇರುವವರಿಗೆ ನೀಡಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಲಸಿಕೆ ನೀಡುವ ಕಾರ್ಯವನ್ನು ಮತ್ತಷ್ಟು ವೇಗಗೊಳಿಸಲಾಗುವುದು. ಕೇಂದ್ರ ಸಚಿವ ಸದಾನಂದಗೌಡರು ಹೇಳಿರುವಂತೆ ಈ ತಿಂಗಳು ದೇಶದಲ್ಲಿ 20 ಕೋಟಿ ಲಸಿಕೆ ತಯಾರಾಗುತ್ತಿದೆ. ಅದರ ನಂತರ ಈ ಪ್ರಮಾಣ ಮತ್ತೂ ಹೆಚ್ಚಲಿದೆ. ಆಗಸ್ಟ್ ಹೊತ್ತಿಗೆ 40 ಕೋಟಿ ಲಸಿಕೆ ತಯಾರಾಗಲಿದೆ. ಅದಾದ ಮೇಲೆ ನಮ್ಮ ದೇಶದಲ್ಲಿ ಲಸಿಕೆಯ ಬೇಡಿಕೆಗಿಂತ ಪೂರೈಕೆಯೇ ಜಾಸ್ತಿಯಾಗಲಿದೆ ಎಂದು ಅವರು ತಿಳಿಸಿದರು.