ಬೆಂಗಳೂರುಬೆಂಗಳೂರು ನಗರ ವಿಶ್ವವಿದ್ಯಾಲಯದ, ಸೆಂಟ್ರಲ್ ಕಾಲೇಜು ಆವರಣದಲ್ಲಿ ವಿದೇಶಗಳಲ್ಲಿ ವ್ಯಾಸಂಗ ಹಾಗೂ ಉದ್ಯೋಗ ಮಾಡುತ್ತಿರುವ ಬೆಂಗಳೂರಿಗರಿಗಾಗಿ ಮಂಗಳವಾರದಿಂದ ವಿಶೇಷ ಲಸಿಕೆ ಅಭಿಯಾನವನ್ನು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾಮಾನ್ಯವಾಗಿ ಲಸಿಕೆ ಕೇಂದ್ರಗಳ ಮುಂದೆ ತಾಸುಗಟ್ಟಲೆ ಸಾಲು ನಿಲ್ಲುವ ಅಗತ್ಯ ಇಲ್ಲಿಲ್ಲ. ಜತೆಗೆ, ಬಿಸಿಲಿನಲ್ಲಿ ನಿಂತು ಬಸವಳಿಯುವ ಪ್ರಮೇಯವೂ ಇಲ್ಲ. ಅಚ್ಚುಕಟ್ಟಾಗಿ ಸಾಲುಸಾಲು ಕುರ್ಚಿಗಳನ್ನು ಹಾಕಲಾಗಿದೆ. ಅದೃಷ್ಟಕ್ಕೆ ಮೈ ತುಂಬಾ ಹಸಿರು ಹೊದ್ದುಕೊಂಡ ಮರಗಳಿವೆ. ತಂಪಾದ ನೆರಳಿದೆ. ಲಸಿಕಾಂಕ್ಷಿಗಳಿಗೆ ಕೂರಲು ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬರು ತಾಳ್ಮೆಯಿಂದ ಸರದಿ ಸಾಲಿನಲ್ಲಿ ಬಂದು ಲಸಿಕೆ ಹಾಕಿಸಿಕೊಂಡು ಮನೆಗಳಿಗೆ ತೆರಳುತ್ತಿರುವುದು ಕಂಡುಬಂತು.
ಸದ್ಯಕ್ಕೆ ರಾಜ್ಯದಲ್ಲಿ ಕೋವಿಡ್ ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತಾ ಗುಂಪಿನ ಜನರಿಗೆ ಮಾತ್ರ ಲಸಿಕೆ ಕೊಡಲಾಗುತ್ತಿದೆ. ವಿದೇಶಕ್ಕೆ ತೆರಳುವವರನ್ನು ಆದ್ಯತಾ ಗುಂಪಿಗೆ ಸೇರಿಸಲಾಗಿದೆ. ಇವೆಲ್ಲರೂ ಅತ್ಯಂತ ಶಿಸ್ತುಬದ್ಧರಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಾ ಲಸಿಕೆ ಪಡೆಯುತ್ತಿದ್ದಾರೆ.
" ಯಾವ ಸಣ್ಣ ಸಮಸ್ಯೆಯೂ ಇಲ್ಲದೆ ಇಲ್ಲಿ ಲಸಿಕೀಕರಣ ನಡೆಯುತ್ತಿದ್ದು, ವಿವಿ ಮತ್ತು ಪಾಲಿಕೆ ಸಿಬ್ಬಂದಿಯ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದಾರೆ. ನಮಗೆ ಆದಷ್ಟು ಬೇಗ ಲಸಿಕೆ ಕೊಡಿ ಎಂದು ವಿವಿಧ ದೇಶಗಳಲ್ಲಿ ಕೆಲಸ ಮಾಡುತ್ತಿರುವವರು, ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಬೇಡಿಕೆ ಇಡುತ್ತಿದ್ದರು. ಮನವಿಗಳಿಗೆ ಪುರಸ್ಕಾರ ಕೊಟ್ಟು ಈ ಶಿಬಿರವನ್ನು ನಡೆಸಲಾಗುತ್ತಿದೆ. ಮಂಗಳವಾರ 275 ಜನ ಲಸಿಕೆ ಪಡೆದಿದ್ದರು. ಬುಧವಾರ ಕೂಡ 200ಕ್ಕೂ ಹೆಚ್ಚು ಜನರು ಪಡೆದಿದ್ದಾರೆ " ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.
ವಿದೇಶಿ ಪ್ರಯಾಣಿಕರಿಗೆ ಕೋವಿಶೀಲ್ಡ್:
ಲಸಿಕೆ ಪಡೆಯದೇ ವಿದೇಶಕ್ಕೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ಇವರೆಲ್ಲರಿಗೂ ಆದ್ಯತಾ ಗುಂಪಿನ ಕೋಟಾದಲ್ಲಿ ಲಸಿಕೆ ಕೊಡಲಾಗುತ್ತಿದೆ. ಆರು ವಾರಗಳ ಅಂತರದಲ್ಲಿ ಎರಡನೇ ಡೋಸ್ ನೀಡಿ, ವ್ಯಾಕ್ಸಿನ್ ಪಡೆದ ಬಗ್ಗೆ ಅಧಿಕೃತ ʼಸರ್ಟಿಫಿಕೇಟ್ʼ ನೀಡಲಾಗುವುದು. ಎಲ್ಲರಿಗೂ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆ ನೀಡಿರುವ ʼಕೋವಿಶೀಲ್ಡ್ʼ ಲಸಿಕೆ ಕೊಡಲಾಗುತ್ತಿದೆ ಎಂದು ಡಿಸಿಎಂ ತಿಳಿಸಿದ್ದಾರೆ.
ವಿದೇಶಕ್ಕೆ ಹೋಗುವ ಕನ್ನಡಿಗರಿಗೆ ವ್ಯಾಕ್ಸಿನ್ ಅಭಿಯಾನ ಯಶಸ್ವಿ: ಡಿಸಿಎಂ ಅಶ್ವಥ್ ನಾರಾಯಣ
ರಾಜ್ಯದಲ್ಲಿ ಕೋವಿಡ್ ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತಾ ಗುಂಪಿನ ಜನರಿಗೆ ಮಾತ್ರ ಲಸಿಕೆ ಕೊಡಲಾಗುತ್ತಿದೆ. ವಿದೇಶಕ್ಕೆ ತೆರಳುವವರನ್ನು ಆದ್ಯತಾ ಗುಂಪಿಗೆ ಸೇರಿಸಲಾಗಿದೆ. ಇವೆಲ್ಲರೂ ಅತ್ಯಂತ ಶಿಸ್ತುಬದ್ಧರಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಾ ಲಸಿಕೆ ಪಡೆಯುತ್ತಿದ್ದಾರೆ.
ವಿದೇಶಕ್ಕೆ ಹೋಗುವ ಕನ್ನಡಿಗರಿಗೆ ವ್ಯಾಕ್ಸಿನ್ ಲಸಿಕೆ ಅಭಿಯಾನ ಯಶಸ್ವಿ