ಪರಪ್ಪನ ಅಗ್ರಹಾರ/ಬೆಂಗಳೂರು :ಖೈದಿಗಳಿಗೂ ಕೊರೊನಾ ಲಸಿಕೆ ನೀಡುವ ಅಭಿಯಾನಕ್ಕೆ ನ್ಯಾಯಾಧೀಶರು ಮತ್ತು ಜೈಲಿನ ಅಧಿಕಾರಿಗಳಿಂದ ಚಾಲನೆ ದೊರೆಯಿತು.
ಕಾರಾಗೃಹದ ಖೈದಿಗಳಿಗೆ ಕೊರೊನಾ ಲಸಿಕೆ ನೀಡಿಕೆ ಆರಂಭ - ಪರಪ್ಪನ ಅಗ್ರಹಾರ
ಜೈಲುಗಳಲ್ಲಿ ಕೊರೊನಾ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗೆ ಲಸಿಕೆ ಅಭಿಯಾನ ಆರಂಭಿಸಲಾಗಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸುಮಾರು 4600 ಖೈದಿಗಳಿದ್ದಾರೆ. ಅವರಲ್ಲಿ ಈಗಾಗಲೇ 580 ಜನ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗಿದೆ. 4120 ವಿಚಾರಣಾಧೀನ ಮತ್ತು ಸಜಾ ಬಂಧಿಗಳಿಗೆ ಇಂದಿನಿಂದ ಲಸಿಕೆ ನೀಡಿಕೆ ಆರಂಭವಾಗಿದೆ.
18 ರಿಂದ ಮೇಲ್ಪಟ್ಟು ಮತ್ತು 44ರ ಕೆಳಗಿನ ವಯೋಮಾನದವರಿಗೆ ಲಸಿಕೆ ನೀಡುವ ಕಾರ್ಯ ನಡೆಯಿತು. ಈಗಾಗಲೇ ಸಾಮರ್ಥ್ಯಕ್ಕೂ ಮೀರಿ ಖೈದಿಗಳನ್ನು ಹೊಂದಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ, ಕಳೆದ ವರ್ಷದ ಮೊದಲನೇ ಅಲೆಯ ಕೊರೊನಾ ಸೋಂಕಿಗೆ ತತ್ತರಿಸಿತ್ತು. ಇದೀಗ ಎರಡನೇ ಅಲೆಯ ಕೋವಿಡ್-19 ಸೋಂಕಿನ ಮುನ್ನೆಚ್ಚರಿಕಾ ಕ್ರಮವಾಗಿ ಸನ್ನಡತೆಯ ಖೈದಿಗಳನ್ನ ಬಿಡುಗಡೆಗೊಳಿಸುವ ಮೂಲಕ ಸ್ವಲ್ಪ ಮಟ್ಟಿಗೆ ಖೈದಿಗಳ ದಟ್ಟಣೆಯನ್ನು ಕಡಿಮೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಕಡ್ಡಾಯವಾಗಿ ಲಸಿಕೆ ಪಡೆಯುವ ಯೋಜನೆ ಜೈಲಾಧಿಕಾರಿಗಳ ಸಮ್ಮುಖದಲ್ಲಿ ಆರಂಭವಾಗಿದೆ.