ಬೆಂಗಳೂರು:ಕೊರೊನಾ ಎರಡನೇ ಅಲೆಯ ಅಬ್ಬರ ಕಡಿಮೆಯಾಗುತ್ತಿದ್ದ ಹಾಗೇ ಇದೀಗ ಮೂರನೇ ಅಲೆಯ ಭೀತಿ ಎದುರಾಗುತ್ತಿದೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಮತ್ತೆ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಾಣುತ್ತಿದೆ. ಈ ಮಧ್ಯೆ ರಾಜ್ಯಾದ್ಯಂತ ಲಸಿಕಾಕರಣ ಪ್ರಗತಿಯಲ್ಲಿದೆ. ಮೊನ್ನೆಯಷ್ಟೇ ರಾಜ್ಯದಲ್ಲಿ ಕೋವಿಡ್ ಲಸಿಕಾಕರಣ ಮೂರು ಕೋಟಿಯ ಗಡಿ ದಾಟಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಲಸಿಕಾಕರಣ ಆಮೆ ವೇಗದಲ್ಲಿಯೇ ಇದೆ.
ಎರಡನೇ ಅಲೆಗೆ ಅಕ್ಷರಶಃ ಮಂಡಿಯೂರಿದ್ದ ಕರುನಾಡು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇದೀಗ ಮೂರನೇ ಅಲೆಯ ಭೀತಿ ಎದುರಾಗಿದೆ. ಪಕ್ಕದ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಮೂರನೇ ಅಲೆಯ ಮುನ್ಸೂಚನೆ ನೀಡುತ್ತಿದೆ. ವೈರಾಣುಗಳು ಅಗಾಗ ಅಲೆಗಳ ಮೂಲಕ ವಕ್ಕರಿಸುವುದು ಸಹಜ ಪ್ರಕ್ರಿಯೆ. ಸದ್ಯಕ್ಕಿರುವ ಎಲ್ಲ ರೂಪಾಂತರಿ ಕೊರೊನಾ ವೈರಸ್ಗೆ ರಾಮಬಾಣ ಲಸಿಕೆ.
ಕೋವಿಡ್ ಎರಡನೇ ಅಲೆ ಅಬ್ಬರ ಹೆಚ್ಚಾಗುತ್ತಿದ್ದ ಹಾಗೇ ರಾಜ್ಯದ ಜನರು ಲಸಿಕಾ ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಲಸಿಕೆ ಕೊರತೆಯ ಮಧ್ಯೆ ರಾಜ್ಯದಲ್ಲಿ ಲಸಿಕಾಕರಣ ನಡೆಯುತ್ತಿದೆ. ದಕ್ಷಿಣ ಭಾರತ ರಾಜ್ಯಗಳಲ್ಲಿ ಲಸಿಕೆ ಹಾಕಿಸುವುದರಲ್ಲಿ ನಮ್ಮ ಕರ್ನಾಟಕ ಮೊದಲಿದೆ. ಮೊನ್ನೆಯಷ್ಟೇ 3 ಕೋಟಿ ಜನರು ಲಸಿಕೆ ಹಾಕಿಸಿದ ಮೈಲಿಗಲ್ಲು ದಾಟಿತ್ತು.
ನಗರ ಪ್ರದೇಶಗಳಲ್ಲಿ ಲಸಿಕೆ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದ್ದು, ಇತ್ತ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿದ್ದ ಆರಂಭಿಕ ಲಸಿಕಾಕರಣದ ಗತಿ ಕಳೆದುಕೊಳ್ಳುತ್ತಿದೆ. ಲಸಿಕೆ ಕೊರತೆ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕಾಕರಣ ಅಭಿಯಾನಕ್ಕೆ ದೊಡ್ಡ ಅಡ್ಡಗಾಲಾಗಿ ಪರಿಣಮಿಸಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ಗ್ರಾಮ ಪಂಚಾಯಿತಿಗಳಲ್ಲಿ ಲಸಿಕಾಕರಣ ಪ್ರಗತಿ ಕುಂಠಿತ:
ಕೋವಿಡ್ ಲಸಿಕಾಕರಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎರಡರಲ್ಲೂ ಲಸಿಕಾಕರಣ ವೇಗದಲ್ಲಿ ನಡೆಯುವ ಅನಿವಾರ್ಯತೆ ಇದೆ. ಮೂರನೇ ಅಲೆ ಅಬ್ಬರಿಸುವ ಲಕ್ಷಣ ಗೋಚರವಾಗುವ ಹಿನ್ನೆಲೆ ಸರ್ಕಾರ ಲಸಿಕಾಕರಣಕ್ಕೆ ಹೆಚ್ಚಿನ ಒತ್ತು ನೀಡುವ ಅನಿವಾರ್ಯತೆ ಇದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಲಸಿಕಾಕರಣ ನಡೆಯುತ್ತಿಲ್ಲ. ಆರಂಭದಲ್ಲಿ ಕಂಡ ವೇಗ ಈಗ ಮರೆಯಾದಂತೆ ಕಂಡು ಬರುತ್ತಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ನೀಡಿರುವ ಅಂಕಿ- ಅಂಶದಲ್ಲಿ ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಕೋವಿಡ್ ಲಸಿಕೆ ಇನ್ನೂ ನಿಧಾನಗತಿಯಲ್ಲಿ ನಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ.