ಬೆಂಗಳೂರು :ವ್ಯಾಕ್ಸಿನೇಷನ್ ವಿಷಯದಲ್ಲಿ ಚರ್ಚೆ ನಡೆದಿದೆ. ಕೋವಿಶೀಲ್ಡ್ ಮೊದಲ ಡೋಸ್, ಎರಡನೇ ಡೋಸ್ ನಡುವಿನ ಅಂತರವನ್ನು 12ರಿಂದ 16 ವಾರಕ್ಕೆ ಹೆಚ್ಚಿಸಿರುವ ಹಿನ್ನೆಲೆ ಅವಧಿ ಮೀರಿದವರಿಗೆ ಆದ್ಯತೆ ಮೇರೆಗೆ ಎರಡನೇ ಡೋಸ್ ಕೊಡಬೇಕು ಎಂದು ಡಿಸಿಎಂ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಲಸಿಕೆ ನೀಡುವುದರ ಕುರಿತಂತೆ ಡಿಸಿಎಂ ಅಶ್ವತ್ಥ್ ನಾರಾಯಣ ಮಾಹಿತಿ.. ಕೋವಿಡ್ ಟಾಸ್ಕ್ ಫೋರ್ಸ್ ಸಭೆ ನಡೆಸಿ ನಂತರ ಮಾತನಾಡಿದ ಅವರು, 45 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್ ಕೊಡಬೇಕೆಂಬುದು ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕೋವ್ಯಾಕ್ಸಿನ್‌ಗೆ 45 ವರ್ಷ ಮೇಲ್ಪಟ್ಟವರಿಗೆ ಎರಡನೆ ಡೋಸ್ ಪೂರ್ಣವಾದ ಮೇಲೆ ಉಳಿದವರಿಗೆ ಮೊದಲ ಡೋಸ್ ಕೊಡಬೇಕು.
18 ವರ್ಷ ಮೇಲ್ಪಟ್ಟವರಿಗೆ ಕೋವಿನ್ ಪೋರ್ಟಲ್ ಜತೆಯಲ್ಲಿ ಪ್ರತ್ಯೇಕ ಆ್ಯಪ್ ರೂಪಿಸಲಾಗುತ್ತಿದೆ. ಆ್ಯಪ್ ರಚನೆ ಪೂರ್ಣಗೊಂಡ ಮೇಲೆ ಲಸಿಕೆ ಅಭಿಯಾನ ಪ್ರಾರಂಭಿಸಲಾಗುತ್ತದೆ. ವ್ಯಾಕ್ಸಿನೇಶನ್ ಪ್ರಕ್ರಿಯೆಯನ್ನು ಆಸ್ಪತ್ರೆಯಿಂದ ಹೊರಗೆ ಶಾಲಾ- ಕಾಲೇಜುಗಳ ಆವರಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಶವಾಗಾರದ ಸಿಬ್ಬಂದಿಗೆ ವಿಮಾ ಯೋಜನೆ : ಶವ ಸಂಸ್ಕಾರದಲ್ಲಿ ತೊಡಗುವ ಸಿಬ್ಬಂದಿಯನ್ನು ಫ್ರಂಟ್ಲೈನ್ ವಾರಿಯರ್ಸ್ ಎಂದು ಪರಿಗಣಿಸಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ವಿಮಾ ಯೋಜನೆಗೆ ಸೇರಿಸಲು ಶಿಫಾರಸು ಮಾಡಲಾಗುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಕೇರ್ ಸೆಂಟರ್ಗಳನ್ನು ಪ್ರಾರಂಭಿಸಲು ಹಾಗೂ ಗ್ರಾಮೀಣ ಭಾಗದ ಖಾಸಗಿ ವೈದ್ಯರಿಗೆ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಅನುಮತಿ ನೀಡಲಾಗಿದೆ.
ಕೋವಿಡ್ ಕೇರ್ ಆಸ್ಪತ್ರೆಗಳ ವೇಸ್ಟ್ ಮ್ಯಾನೇಜ್ಮೆಂಟ್ ನಿರ್ವಹಣೆ ಮಾಡುವವರಿಗೆ ಪ್ರತಿ ಬೆಡ್ಗೆ ಹತ್ತು ರೂ.ನಂತೆ ದರ ನಿಗದಿ ಮಾಡಲಾಗಿದೆ. ಹೋಂ ಐಸೋಲೇಷನ್ನಲ್ಲಿ ಇರುವ ಕೋವಿಡ್ ಸೋಂಕಿತರಿಗೆ ಉಚಿತವಾಗಿ 30 ಲಕ್ಷ ಮೆಡಿಕಲ್ ಕಿಟ್ ವಿತರಿಸಲು ನಿರ್ಧರಿಸಲಾಗಿದೆ.
ಜಿಲ್ಲೆಗಳಲ್ಲಿ ಆಕ್ಸಿಜನ್ ಬಳಕೆ ಮತ್ತು ಉತ್ಪಾದನೆ ಕುರಿತಂತೆ ಮೂರ್ನಾಲ್ಕು ದಿನಗಳಲ್ಲಿ ಪ್ರತ್ಯೇಕ ಆಕ್ಸಿಜನ್ ಪಾಲಿಸಿ ರೂಪಿಸಲಾಗುತ್ತಿದೆ. ಬ್ಲಾಕ್ ಫಂಗಸ್ ವೈರಸ್ ನಿಯಂತ್ರಣಕ್ಕೆ 20 ಸಾವಿರ ವಯಲ್ ಇಂಜೆಕ್ಷನ್ ಕಳುಹಿಸಲು ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದರು.
ಓದಿ: ಕೋವಿಡ್ ಚಿಕಿತ್ಸೆ ಸಿಗದೆ ಸಾವನ್ನಪ್ಪಿದರೆ ಕಾನೂನಾತ್ಮಕ ಪರಿಹಾರವೇನು? ಇಲ್ಲಿದೆ ಮಾಹಿತಿ
ಲಾಕ್ಡೌನ್ ಇನ್ನು ಹತ್ತು ದಿನ ಬಾಕಿ ಇದೆ. ಈಗಲೇ ಅದರ ವಿಸ್ತರಣೆ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ. ಈಗ ಲಾಕ್ಡೌನ್ ಅವಧಿಯಲ್ಲಿ ಸೌಲಭ್ಯಗಳ ವಿಸ್ತರಣೆ ಮಾಡಲು ಹೆಚ್ಚಿನ ಗಮನ ಕೊಡಲಾಗುತ್ತಿದೆ. ಈಗಲೂ ದಿನಕ್ಕೆ ಒಂದೂಕಾಲು ಲಕ್ಷ ಆರ್ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆ.
ರ್ಯಾಂಡಮ್ ಟೆಸ್ಟ್ 50 ಸಾವಿರಕ್ಕೆ ಹೆಚ್ಚಿಸಲಾಗುತ್ತಿದೆ. ಲಾಕ್ಡೌನ್ ನಿಯಮಾವಳಿಯಿಂದಾಗಿ ಟೆಸ್ಟಿಂಗ್ಗೆ ಬರುತ್ತಿರುವವರ ಸಂಖ್ಯೆ ಕಡಿಮೆಯಾಗಿದೆ ಅಷ್ಟೇ.. ಸರ್ಕಾರ ಟೆಸ್ಟ್ ಸಂಖ್ಯೆ ಕಡಿಮೆಗೆ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ತಜ್ಞರ ಸಮಿತಿ ನೇಮಕ ವಿಷಯದಲ್ಲಿ ಶೀತಲಸಮರ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ನಮ್ಮ ನಡುವೆ ಅಂತಾದ್ದೇನಿಲ್ಲ, ನಾವೆಲ್ಲ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ತಂಡವನ್ನು ಸಚಿವ ಡಾ.ಸುಧಾಕರ್ ನೇಮಕ ಮಾಡುತ್ತಾರೆ. ಮುಖ್ಯಮಂತ್ರಿಗಳು ಅದರ ಅವಕಾಶ ಸುಧಾಕರ್ಗೆ ಕೊಟ್ಟಿದ್ದಾರೆ ಎಂದರು.