ಬೆಂಗಳೂರು: ಕಾನೂನು ಮಾಪನಶಾಸ್ತ್ರ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಶೀಘ್ರ ಖಾಲಿಯಿರುವ ಸಿಬ್ಬಂದಿಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ ಕೆ ಎಚ್ ಮುನಿಯಪ್ಪ ಹೇಳಿದ್ದಾರೆ.
ವಿಕಾಸೌಧದಲ್ಲಿ ಇಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾನೂನು ಮಾಪನಶಾಸ್ತ್ರ ಇಲಾಖೆಯಲ್ಲಿ ಒಟ್ಟು 500 ಹುದ್ದೆಗಳಲ್ಲಿ 200 ಜನರು ಮಾತ್ರ ಕಾರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ 300 ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳನ್ನು ಕೆಪಿಎಸ್ಸಿ ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ತಿಂಗಳೊಳಗೆ ನೇಮಕ ಮಾಡಿಕೊಳ್ಳಲಾಗುವುದು. ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಿಯಮಾನುಸಾರ ಬಡ್ತಿ ನೀಡಲಾಗುವುದು ಎಂದರು.
ದೈನಂದಿನ ವ್ಯವಹಾರದಲ್ಲಿನ ತೂಕ ಮತ್ತು ಅಳತೆಯಲ್ಲಿ ನಿಖರತೆಯನ್ನು ಕಾಪಾಡುವ ಮೂಲಕ ಗ್ರಾಹಕರ ಹಿತರಕ್ಷಣೆ ಮಾಡುತ್ತಿರುವ ಕಾನೂನು ಮಾಪನಶಾಸ್ತ್ರ ಇಲಾಖೆಯ ಸದೃಢಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು. ಇಲಾಖೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವುದರ ಮೂಲಕ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಿ ಸಾರ್ವಜನಿಕರಿಗೆ ನ್ಯಾಯ ಒದಗಿಸಲಾಗುವುದು ಎಂದು ತಿಳಿಸಿದರು.
500 ಕೋಟಿ ರಾಜಸ್ವ ಸಂಗ್ರಹ ಗುರಿ:ಕಾನೂನು ಮಾಪನಶಾಸ್ತ್ರ ಇಲಾಖೆಯ ಮೂಲಕ 100 ಕೋಟಿ ರಾಜಸ್ವ ಸಂಗ್ರಹಿಸಲಾಗುತ್ತಿದೆ. ಪ್ರಸಕ್ತ ವರ್ಷ 500 ಕೋಟಿ ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದೆ ಎಂದು ಸಚಿವ ಮುನಿಯಪ್ಪ ಅವರು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವ್ಯಾಪಾರ ವಹಿವಾಟು ಮತ್ತು ಕೈಗಾರಿಕೆಗಳು, ಪೆಟ್ರೋಲ್ ಬಂಕ್ಸ್, ವೇ ಬ್ರಿಡ್ಜ್, ತಾರಾ ಹೋಟೆಲ್ಸ್, ಟರ್ಮಿನಲ್ಸ್, FCI, KFCSC, CWC, SWC, Airports, APMC, ಆಭರಣದ ಅಂಗಡಿಗಳು ಸೇರಿದಂತೆ ಇನ್ನಿತರ ದೈನಂದಿನ ವ್ಯವಹಾರದಲ್ಲಿ ಉಪಯೋಗಿಸುತ್ತಿರುವ ತೂಕ ಮತ್ತು ನಿಖರತೆಯನ್ನು ಕಾಪಾಡುವ ಮೂಲಕ ಗ್ರಾಹಕರ ಹಿತರಕ್ಷಣೆಯನ್ನು ಕಾಯ್ದುಕೊಳ್ಳಲು ಹಾಗೂ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಮೂಲಕ ಸರಿಸುಮಾರು ಸಾವಿರ ಕೋಟಿ ರಾಜಸ್ವವನ್ನು ಸಂಗ್ರಹಿಸಲು ಸಭೆಯಲ್ಲಿ ಸೂಚಿಸಿದ್ದೇನೆ ಎಂದರು.