ಬೆಂಗಳೂರು: ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಯಲವನಾಥ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಆನೆ ಹಾಗೂ ಮಾನವ ಸಂಘರ್ಷ ತಡೆಯಲು ಒಂದು ಕಿ.ಮೀ. ವ್ಯಾಪ್ತಿಯಲ್ಲಿ “ಎಲಿಫೆಂಟ್ ಪ್ರೊಫ್ ಸ್ಟೀಲ್ ವೈರ್ ರೋಪ್ ಫೆನ್ಸ್” ಅಳವಡಿಸಬೇಕೆಂದು ವಸತಿ ಸಚಿವ ವಿ. ಸೋಮಣ್ಣ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಪತ್ರ ಬರೆದಿದ್ದಾರೆ.
ಯಲವನಾಥ ಗ್ರಾಮದ ಗ್ರಾಮಸ್ಥರು ವಸತಿ ಸಚಿವರಿಗೆ ಮಾಡಿಕೊಂಡ ಮನವಿಯ ಮೇರೆಗೆ ಈ ಪತ್ರ ಬರೆಯಲಾಗಿದೆ. ಯಲವನಾಥ ಗ್ರಾಮವು ಬಿಳಿಕಲ್ ದಟ್ಟ ಅರಣ್ಯ ಪ್ರದೇಶದಿಂದ ಆವೃತವಾಗಿದೆ. ಈ ಗ್ರಾಮದಲ್ಲಿ ಪರಿಶಿಷ್ಟ ಜಾತಿ/ಪಂಗಡ ಹಾಗೂ ಹಿಂದುಳಿದ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ.
ಇಲ್ಲಿರುವವರು ವೃತ್ತಿಯಲ್ಲಿ ಹಲವಾರು ವರ್ಷಗಳಿಂದ ವ್ಯವಸಾಯವನ್ನೇ ಅವಲಂಬಿಸಿದ್ದಾರೆ. ಭೂಮಿಯ ಫಲವತ್ತತೆಯಿಂದ ರೈತರು ಸಮೃದ್ಧವಾಗಿ ಬೆಳೆಯುವ ರಾಗಿ, ಹಿಪ್ಪುನೇರಳೆ ಹಾಗೂ ತರಕಾರಿ ಬೆಳೆಗಳನ್ನು ತಿನ್ನಲು ಮತ್ತು ಬಾಯಾರಿಕೆ ತಣಿಸಿಕೊಳ್ಳಲು ಅರಣ್ಯ ಪ್ರದೇಶದಿಂದ ಆನೆಗಳು ಹಿಂಡು ಹಿಂಡಾಗಿ ರೈತರ ಜಮೀನುಗಳಿಗೆ ಲಗ್ಗೆ ಇಡುವುದರ ಮೂಲಕ ಬೆಳೆ ನಾಶಪಡಿಸುತ್ತಿವೆ. ಇದು ಮಾನವ-ಆನೆ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ ಎಂದು ವಸತಿ ಸಚಿವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.