ಪಕ್ಷ ತೊರೆಯುವ ವಿಚಾರಕ್ಕೆ ಸೋಮಣ್ಣ ಸ್ಪಷ್ಟನೆ ಬೆಂಗಳೂರು: ನಾನು ನಿಂತ ನೀರಲ್ಲ, ಹರಿಯುವ ನೀರು. ಹೊಟ್ಟೆಪಾಡಿಗೆ ನಾನೇನೂ ಮಾಡಬೇಕಿಲ್ಲ. ವದಂತಿಗಳನ್ನು ಯಾರು ಹಬ್ಬಿಸಿದ್ದಾರೋ, ಅದಕ್ಕೆ ಉಪ್ಪುಖಾರ ಹಾಕುತ್ತಿದ್ದಾರೋ ಅವರನ್ನೇ ಈ ಬಗ್ಗೆ ಕೇಳಬೇಕು. ನನ್ನ ವಿಚಾರಗಳನ್ನು ನಾನು ರಾಜ್ಯ ನಾಯಕರಿಗೆ ಹೈಕಮಾಂಡ್ಗೆ ಹೇಳಿದ್ದೇನೆ ಎಂದು ಪಕ್ಷ ತೊರೆಯುವ ವಿಚಾರದ ಕುರಿತು ಸ್ಪಷ್ಟವಾದ ನಿಲುವು ವ್ಯಕ್ತಪಡಿಸದೇ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಸಚಿವ ವಿ.ಸೋಮಣ್ಣ ಉತ್ತರಿಸಿದ್ದಾರೆ.
ಗೋವಿಂದರಾಜನಗರ ಕ್ಷೇತ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ದೇವಸ್ಥಾನಗಳಿಗೆ ರಾಜಕಾರಣ ಮಾಡಲು ಹೋಗುವುದಿಲ್ಲ. ಅಲ್ಲಿ ಒಂದೇ ಒಂದು ರಾಜಕೀಯ ಸಭೆಯನ್ನೂ ನಾನು ಮಾಡುವುದಿಲ್ಲ. ಇಲ್ಲಿಗೆಲ್ಲ ಸಾವಿರಾರು ಜನ ಬರುತ್ತಾರೆ ಹೋಗುತ್ತಾರೆ, ನಾವು ಇಲ್ಲೆಲ್ಲಾ ರಾಜಕಾರಣ ಮಾಡುವುದು ಸರಿಯಲ್ಲ. ಚುನಾವಣೆಗೂ ದೇವಾಲಯ ಉದ್ಘಾಟನೆಗೂ ಸಂಬಂಧ ಕಲ್ಪಿಸಬೇಡಿ ಎಂದು ಮನವಿ ಮಾಡಿದರು.
ಪಕ್ಷ ತೊರೆಯುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸೋಮಣ್ಣ ಒಂದು ರೀತಿಯಲ್ಲಿ ನಿಂತ ನೀರಲ್ಲ, ಹರಿಯುವ ನೀರು. ಸಾಮಾನ್ಯರಿಗೆ ನಾವು ಮಾಡುವ ಕೆಲಸ ತಲುಪಬೇಕು, ಸಾಮಾನ್ಯರಿಗೆ ದನಿಯಾಗಬೇಕು, ಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಬೇಕು ಇದು ನನ್ನ ಪ್ರಾಮುಖ್ಯತೆ. ಇದನ್ನು ಬಿಟ್ಟು ನಾನು ಎಲ್ಲಿಯೂ ಪಕ್ಷ ತೊರೆಯುವ ಕುರಿತು ಸಣ್ಣ ವಿಚಾರವನ್ನೂ ನಾನು ಮಾತನಾಡಿಲ್ಲ. ಇದನ್ನೆಲ್ಲ ಯಾರು ಸೃಷ್ಟಿ ಮಾಡಿದ್ದಾರೋ? ಯಾರು ಅದಕ್ಕೆ ರೂಪ ಕೊಡುತ್ತಿದ್ದಾರೋ? ಅದಕ್ಕೆ ಉಪ್ಪು ಖಾರ ಹಾಕುತ್ತಾರೋ ಅವರನ್ನೇ ಕೇಳಿ ಎಂದರು.
ಕೆಲವು ವಿಚಾರಗಳಲ್ಲಿ ಮುಖ್ಯಮಂತ್ರಿಗಳ ಜೊತೆ, ರಾಜ್ಯಾಧ್ಯಕ್ಷರ ಜೊತೆ ಮಾತನಾಡಿದ್ದೇನೆ. ಪಕ್ಷದ ವರಿಷ್ಠರ ಜೊತೆಯೂ ಮಾತನಾಡಿದ್ದೇನೆ. ಅವರು ಏನು ಹೇಳಿದ್ದಾರೆ ಎನ್ನುವುದು ನನಗೆ ಮಾತ್ರ ಗೊತ್ತಿದೆ. ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡು ಮುಂದುವರೆಯುತ್ತಿದ್ದೇನೆ. ನಾನು ನನ್ನ ಹೊಟ್ಟೆಪಾಡಿಗಾಗಿ ಈಗ ನಾನೇನೂ ಮಾಡಬೇಕಿಲ್ಲ. ನನಗೀಗ 72 ವರ್ಷ. ಕ್ಷೇತ್ರದ ಜನ ಮನೆ ಮಗನಾಗಿ, ಸೇವಕನಾಗಿ, ಆತ್ಮೀಯನಾಗಿ ನನ್ನನ್ನು ಕಂಡಿದ್ದಾರೆ. ಅವರ ಋಣ ತೀರಿಸಲು ಎಲ್ಲಿವರೆಗೂ ಆಗುತ್ತದೆಯೋ ಅಲ್ಲಿವರೆಗೂ ಈ ಸೋಮಣ್ಣ ಇರುತ್ತಾನೆ ಎಂದರು. ಬಿಜೆಪಿ ಪ್ರಚಾರ ಸಮಿತಿಯಲ್ಲಿ ಅವಕಾಶ ನೀಡದಿರುವ ಕುರಿತು ಸೋಮಣ್ಣ ಪ್ರತಿಕ್ರಿಯೆಗೆ ನಿರಾಕರಿಸಿದರು.
ಸಚಿವ ಆರ್.ಅಶೋಕ್ ಸ್ಪಷ್ಟನೆ: ಮಂಗಳವಾರ ಗೋವಿಂದರಾಜನಗರದಲ್ಲಿ ನಡೆದ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಚಿವ ಆರ್.ಅಶೋಕ್ ಅವರು ಸೋಮಣ್ಣ ಪಕ್ಷ ತೊರೆಯುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದರು. ಸೋಮಣ್ಣಗೆ ಯಾವುದೇ ಅಸಮಾಧಾನ ಇಲ್ಲ. ನಾನು ಸೋಮಣ್ಣ ಅವರ ಸಂಪರ್ಕದಲ್ಲಿ ಸತತವಾಗಿದ್ದೇನೆ. ಕಾಂಗ್ರೆಸ್‌ಗೆ ಹೋಗ್ತಾರೆ ಅಂತ ಇಲ್ಲ ಸಲ್ಲದ ಆರೋಪ ಮಾಡ್ತಿದಾರೆ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾವೆಲ್ಲ ಒಟ್ಟಾಗಿ ಇದ್ದೇವೆ ಸೋಮಣ್ಣ ನಮ್ಮ ನಾಯಕ. ಕರ್ನಾಟಕ ದಕ್ಷಿಣ ಭಾರತಕ್ಕೆ ಹೆಬ್ಬಾಗಿಲು. ಕರ್ನಾಟಕವನ್ನು ನಾವೆಲ್ಲ ಸೇರಿ ಗೆಲ್ಲಿಸುತ್ತೇವೆ ಎಂದು ಹೇಳಿದ್ದರು.
ಇದನ್ನೂ ಓದಿ:ನಾವೆಲ್ಲಾದರೂ ಕಾಂಗ್ರೆಸ್‌ಗೆ ಹೋಗುತ್ತೇನೆ ಅಂತ ಹೇಳಿದ್ದೇನಾ?: ಸಚಿವ ವಿ ಸೋಮಣ್ಣ ಪ್ರಶ್ನೆ