ಬೆಂಗಳೂರು: ಕೋರ್ಟ್ ನಿರ್ದೇಶನದಂತೆ ಅಗ್ರಹಾರ ದಾರಸಹಳ್ಳಿಯಲ್ಲಿ ಮನೆಗಳನ್ನು ತೆರವು ಮಾಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಅಗ್ರಹಾರ ದಾಸರಹಳ್ಳಿ ಮನೆ ತೆರವು ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೊದಲು ನಮ್ಮ ಅಧಿಕಾರಾವಧಿಯಲ್ಲಿ ಮನೆ ಕಟ್ಟಲಾಗಿತ್ತು. ಬಳಿಕ 20 ಕುಟುಂಬಗಳು ಇಂದಿಗೂ ಅಲ್ಲಿ ಅಕ್ರಮವಾಗಿ ನೆಲೆಸಿವೆ. ಈ ಸಂಬಂಧ ನಾನು ತಪಾಸಣೆ ಮಾಡಿ, ತೆರವು ಮಾಡಲು ಹೇಳಿದ್ದೆ. ಆಗ ಸಿದ್ದರಾಮಯ್ಯ ಅವರು ಕರೆ ಮಾಡಿ ತೆರವು ಮಾಡದಂತೆ ಹೇಳಿದರು. ಬಳಿಕ ಅವರು ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಜನವರಿ ಒಳಗೆ ವರದಿ ನೀಡುವಂತೆ ನಿರ್ದೇಶನ ನೀಡಿತ್ತು. ಕೋರ್ಟ್ ನಿರ್ದೇಶನದಂತೆ ಅಧಿಕಾರಿಗಳು ಮನೆಗಳನ್ನು ತೆರವು ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಇವತ್ತು 17 ಮನೆಗಳನ್ನು ತೆರವು ಮಾಡಿದ್ದಾರೆ. ಅನರ್ಹರ ಮನೆಗಳನ್ನು ತೆರವು ಮಾಡಲಾಗಿದೆ. ಬರೀ ಬಿಜೆಪಿಯವರಿಗೆ ಮನೆಗಳನ್ನು ಕೊಡಲಾಗಿದ್ಯಾ?. ಅಲ್ಲಿ ಪಾಲಿಟಿಕ್ಸ್ ಮಾಡೋದು ಸರಿಯಲ್ಲ. ಏನಾದರೂ ಇದ್ದರೆ ಮಾಹಿತಿ ತೆಗೆದುಕೊಳ್ಳಿ. ಹಲವು ವರ್ಷಗಳಿಂದ ಪರಿಶಿಷ್ಟ ವರ್ಗದ ಹೆಣ್ಣು ಮಕ್ಕಳು ರಸ್ತೆಯಲ್ಲಿ ಇದ್ದಾರೆ. ಅವರಿಗೆ ಸಿಗುವ ಮನೆಯಲ್ಲಿ ಅನರ್ಹರು ವಾಸವಾದರೆ ಹೇಗೆ ಎಂದು ಪ್ರಶ್ನಿಸಿದರು.
ಯಾರೋ ಜನರನ್ನ ಕೂರಿಸಿ ಸೀನ್ ಕ್ರಿಯೇಟ್ ಮಾಡ್ತಾರೆ. ನೀವು ಅದನ್ನ ತೋರಿಸ್ತಿದ್ದೀರಿ. ವಾಸ್ತವವೇ ಅಲ್ಲಿ ಬೇರೆಯಿದೆ. ಒಳ್ಳೆಯ ಕೆಲಸ ಮಾಡೋಕೂ ಬಿಡಲ್ಲ ಅಂದರೆ ಹೇಗೆ?. ಯಾರ್ಯಾರು ಎಷ್ಟು ಪ್ರಭಾವ ಮಾಡ್ತಾರೋ ಬಿಡ್ತಾರೋ ಗೊತ್ತಿಲ್ಲ. ಅಲ್ಲಿ ವಾಸ್ತವ ನೋಡಿ ನೀವೇ ಹೇಳಿ. ಎಲ್ಲೆಲ್ಲಿಂದಲೋ ತಂದು ಅಲ್ಲಿ ಹಾಕಿದ್ದಾರೆ ಎಂದು ಶಾಸಕ ಎಂ.ಕೃಷ್ಣಪ್ಪ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.