ಬೆಂಗಳೂರು: ಯಡಿಯೂರಪ್ಪ ನಮಗೆಲ್ಲ ಪ್ರಶ್ನಾತೀತ ನಾಯಕರು, ನಮ್ಮಲ್ಲಿನ ಗೊಂದಲವನ್ನು ಪಕ್ಷದ ವರಿಷ್ಠರು ನಿವಾರಿಸಿದ್ದಾರೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ ಬಗ್ಗೆ ನಾನು ಏನನ್ನೂ ಹೇಳಲ್ಲ. ಆದರೆ ಅವರಿನ್ನು ಯುವಕ, ಬೆಳೆಯಬೇಕಾದವರು. ಅವರು ಕಂಡ ಕನಸ್ಸಿನತ್ತ ಗಮನ ಹರಿಸಿದರೆ ಒಳ್ಳೆಯದು ಎಂದು ಪರೋಕ್ಷವಾಗಿ ವಿಜಯೇಂದ್ರಗೆ ವಸತಿ ಸಚಿವ ವಿ. ಸೋಮಣ್ಣ ಟಾಂಗ್ ನೀಡಿದ್ದಾರೆ.
ಗೋವಿಂದರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಏನೇನ್ ಆಗಬೇಕೋ ಅದೆಲ್ಲವೂ ಆಗಿದೆ. ಚುನಾವಣೆ ಇರುವ ಕಾರಣ ಗೊಂದಲ ನಿವಾರಣೆ ಮಾಡಿದ್ದಾರೆ, ಎಲ್ಲವೂ ಸುಖಾಂತ್ಯವಾಗಿದೆ. ವಿಜಯೇಂದ್ರ ಮಾತನಾಡಿರೋದಕ್ಕೂ ನನಗೆ ಸಂಬಂಧ ಇಲ್ಲದೆ ಇರೋದು, ಯಡಿಯೂರಪ್ಪ ಈ ರಾಜ್ಯದ ನಾಯಕರು ಗಣ್ಯರ ಸಾಲಿನಲ್ಲಿ ಅವರು ಕೂಡ ಒಬ್ಬರು, ನಾನು ಕೂಡ ಅವರ ಗರಡಿಯಲ್ಲಿ ಬೆಳೆದಿದ್ದೇನೆ. ನಾನು ಯಡಿಯೂರಪ್ಪ ಜೊತೆ ಕಳೆದ ಸಮಯ ಕಡಿಮೆ, ಸ್ವಲ್ಪ ದಿನ ಅವರ ಗರಡಿಯಲ್ಲಿ ಇದ್ದೆ. ಆದರೆ, ನಾನು ಜೆ ಹೆಚ್ ಪಟೇಲ್, ಹೆಚ್ ಡಿ ದೇವೇಗೌಡ, ರಾಮಕೃಷ್ಣ ಹೆಗಡೆ ಅವರ ಗರಡಿಯಲ್ಲಿ ಪಳಗಿದವನು ಎಂದು ತಮ್ಮದೇ ಆದ ರಾಜಕೀಯ ಅನುಭವ ಇದೆ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದರು.
ಸೋಮಣ್ಣಗೆ ಸೋಮಣ್ಣನೇ ಸರಿಸಾಟಿ:ನಾನು ಏನು ಮಾಡಬೇಕೋ ಅದರ ಕಡೆ ಅಷ್ಟೇ ಗಮನ ಕೊಟ್ಟಿದ್ದೇನೆ. ವಿಜಯೇಂದ್ರ ಕೂಡ ಏನು ಮಾಡಬೇಕೋ ಅದರ ಕಡೆ ಗಮನ ಕೊಡಲಿ. ನಾನು ಅವರಿಗೆ ಏನು ಹೇಳೋಕೆ ತಯಾರಿಲ್ಲ, ಯಡಿಯೂರಪ್ಪ ನಿಮಗೆ ಒಬ್ಬರಿಗೆ ನಾಯಕರಲ್ಲ, ನಮಗೂ ನಾಯಕರು, ಅವರು ನನಗೆ ತಂದೆ ಸಮಾನರು. ವಿಜಯೇಂದ್ರ ಅವರು ಬೆಳೆಯೋದಕ್ಕೆ ಅವಕಾಶ ಇದೆ. ಅದರ ಕಡೆ ಅವರು ಗಮನ ಕೊಟ್ಟರೆ ಅವರು ಬೆಳೆಯಬಹುದು, ಯಡಿಯೂರಪ್ಪಗೆ ಸರಿಸಾಟಿ ಯಡಿಯೂರಪ್ಪನವರೇ. ಅದೇ ರೀತಿ ಸೋಮಣ್ಣಗೆ ಸರಿಸಾಟಿ ಸೋಮಣ್ಣನೇ ಎಂದರು.