ಬೆಂಗಳೂರು:ಸೋತ ಮೇಲೆ ಮಾತನಾಡುವುದು ಏನೂ ಉಳಿದಿಲ್ಲ. ಚಿನ್ನದಂತಹ ಕ್ಷೇತ್ರ ಬಿಟ್ಟು ಪಕ್ಷ ಹೇಳಿತು ಎಂದು ಬೇರೆ ಕಡೆ ಹೋದರೆ ಜನ ಆಶೀರ್ವಾದ ಮಾಡಲಿಲ್ಲ. ನಾನು ಈ ಸೋಲನ್ನು ಸ್ವೀಕರಿಸುತ್ತೇನೆ. ಆದರೆ ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ಪಡೆಯಲ್ಲ. ಸಾಯುವವರೆಗೂ ರಾಜಕಾರಣದಲ್ಲೇ ಇರುವುದಾಗಿ ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು.
ವಿಜಯನಗರ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಿವೃತ್ತಿ ಅನ್ನೋ ಪದವೇ ನನಗೆ ಗೊತ್ತಿಲ್ಲ. ಎಷ್ಟು ಜನ ನಿವೃತ್ತಿ ತೆಗೆದುಕೊಂಡಿದ್ದಾರೆ ಹೇಳಿ?. ನಿವೃತ್ತಿ ಅನ್ನೋದೆಲ್ಲ ಒಂದು ನಾಟಕ. ಇನ್ನೇನು ಸೋತಾಗಿದೆ, ನಾನು ಏನು ಮಾತನಾಡಲಿ. ಹೈಕಮಾಂಡ್ ಸೂಚನೆ ಮೇರೆಗೆ ಹೋಗಿ ಸ್ಪರ್ಧಿಸಿದೆ. ಚಾಲೆಂಜ್ ಆಗಿ ತಗೊಂಡೆ. ಪ್ರತಿಯೊಂದಕ್ಕೂ ಕಾಲ ಅಂತಾ ಇರುತ್ತದೆ. ನನ್ನ ಈ ಕ್ಷೇತ್ರ ಚಿನ್ನದಂತೆ ಇತ್ತು. ಕ್ಷೇತ್ರಕ್ಕಿಂತ ಪಕ್ಷ ದೊಡ್ಡದು. ಪಕ್ಷದ ಮಾತು ಕೇಳಿದೆ ಅಷ್ಟೇ" ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸಿದ್ದು, ಡಿಕೆಶಿ ಕಟ್ಟಿ ಹಾಕುವ ಕೇಸರಿ ಪಡೆ ತಂತ್ರ ವಿಫಲ: ಪದ್ಮನಾಭನಗರ ಗೆದ್ದು ಅಶೋಕ್ ನಿಟ್ಟುಸಿರು!
ಸೋಲಿಗೆ ಯಡಿಯೂರಪ್ಪ ಫ್ಯಾಕ್ಟರ್ ಅಲ್ಲ:ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಮೂಲೆ ಗುಂಪು ಮಾಡಿದ್ದೇ ಮುಳುವಾಯ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಮಣ್ಣ, "ಅವರನ್ನು ಪಕ್ಷ ಮೂಲೆಗುಂಪು ಮಾಡಲಿಲ್ಲ. ಅವರ ನಾಯಕತ್ವದಲ್ಲಿಯೇ ಚುನಾವಣೆ ಮಾಡಿದ್ದೇವೆ. ಸೋತ ತಕ್ಷಣ ಎಲ್ಲ ಮುಗಿದು ಹೋಯ್ತಾ? ಸೋಲಿಗೆ ಯಡಿಯೂರಪ್ಪ ಫ್ಯಾಕ್ಟರ್ ಕಾರಣ ಅಲ್ಲ. ಆದರೂ ಪಕ್ಷಕ್ಕೂ ಹಿನ್ನಡೆ ಆಗಿದ್ದು ನಮಗೆಲ್ಲ ಒಂದು ಎಚ್ಚರಿಕೆಯ ಗಂಟೆ. ಜನರ ತೀರ್ಮಾನ ಇದು. ಈ ಜನಾದೇಶಕ್ಕೆ ಬದ್ಧರಾಗಬೇಕು" ಎಂದರು.