ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಮಾಜಿ ಸಂಸದ ವಿ ಎಸ್ ಉಗ್ರಪ್ಪ ತುಂಗಭದ್ರಾ ಜಲಾಶಯದಲ್ಲಿ ತುಂಬಿಕೊಂಡಿರುವ ಹೂಳನ್ನು ತೆಗೆಯುವಂತೆ ಮನವಿ ಮಾಡಿದ್ದಾರೆ. ಡ್ಯಾಂನಲ್ಲಿ ಮಣ್ಣು ತುಂಬಿದ್ದರಿಂದ ನೀರಿನ ಸಂಗ್ರಹ ಕಡಿಮೆ ಆಗುತ್ತಿದೆ. ಕೇಂದ್ರದಿಂದ ರಚನೆ ಆಗಿರುವ ತುಂಗಭದ್ರಾ ಮಂಡಳಿಯ ಸದಸ್ಯರು ಹೂಳು ತೆಗೆಯಲು ಆಸಕ್ತಿ ವಹಿಸುತ್ತಿಲ್ಲ. ಜಲಾಶಯದಲ್ಲಿ ಮಣ್ಣು ತುಂಬಿರುವುದರಿಂದ ಸಂಗ್ರಹ ಸಾಮರ್ಥ್ಯ ಕಡಿಮೆ ಆಗಿ ನೀರು ಸಮುದ್ರದ ಪಾಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ಹೆಬ್ಬಾಳ ಸೇತುವೆ, ಕಪ್ಪೆ ಶಂಕರ ದೇಗುಲ ಮುಳುಗಡೆ.. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಭದ್ರಾ ನದಿ
ತುಂಗಾಭದ್ರಾ ಮಂಡಳಿಯಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ಸದಸ್ಯರು ಹೆಚ್ಚಿದ್ದು, ಆ ರಾಜ್ಯಗಳಿಗೆ ಪೂರಕವಾದ ನಿರ್ಧಾರ ತೆಗೆದುಕೊಳ್ಳಲು ಮುಂದಾಗುತ್ತಿದ್ದಾರೆ. ರಾಜ್ಯ ಸರ್ಕಾರ ಕಳೆದ ಬಜೆಟ್ ನಲ್ಲಿ ಹೂಳು ತೆಗೆಯಲು ಹಣ ಮೀಸಲಿಟ್ಟಿದೆ. ಇದು ನ್ಯಾಷನಲ್ ಪ್ರಾಜೆಕ್ಟ್ ಆಗಿರುವುದರಿಂದ ಕೇಂದ್ರ ಸರ್ಕಾರ ಅಗತ್ಯ ಸಹಕಾರ ನೀಡಬೇಕು ಎಂದು ಪತ್ರದಲ್ಲಿ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ :ರಾಜ್ಯಾದ್ಯಂತ ವ್ಯಾಪಕ ಮಳೆ.. ತುಂಗಭದ್ರಾ ಜಲಾಶಯಕ್ಕೆ ಹರಿದು ಬಂದ 18 ಟಿಎಂಸಿ ನೀರು , ರೈತರಿಗೆ ಸಂತಸ
ಇನ್ನು ಹೂಳು ತೆಗೆಯುವುದರಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಅನುಕೂಲವಾಗಲಿದೆ. ಕಳೆದ ಒಂಬತ್ತು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ತುಂಗಭದ್ರಾ ಡ್ಯಾಂ ಹೂಳು ಎತ್ತುವ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.