ಕರ್ನಾಟಕ

karnataka

ETV Bharat / state

ಹಿಂದಿನ‌ ಸರ್ಕಾರದ ಧೋರಣೆಗೆ ಬೇಸರ: ಬಿಎಸ್​ವೈ ಸರ್ಕಾರದ ಸ್ಪಂದನೆಗೆ ಉತ್ತರಾಖಂಡ್​​ ಸಿಎಂ ಸಂತಸ - Trivendra singh Ravath

ಉತ್ತರಾಖಂಡ್​​ ಮತ್ತು ಕರ್ನಾಟಕ ನಡುವೆ ಉತ್ತಮ ಸಂಬಂಧವಿದ್ದು, ಇಲ್ಲಿನ ಅಧಿಕಾರಿಗಳು ಅಲ್ಲಿಗೆ ಹಾಗೂ ಅಲ್ಲಿನವರು ಇಲ್ಲಿಗೆ ಅಧ್ಯಯನಕ್ಕಾಗಿ ಬರುತ್ತಾ ಇರುತ್ತಾರೆ. ಫೆಬ್ರುವರಿಯಲ್ಲಿ ಉತ್ತರಾಖಂಡ್​​​ನಲ್ಲಿ ಕ್ರೀಡೆಗಳು ನಡೆಯುತ್ತವೆ. ಹಿಮದಲ್ಲಿ ಕ್ರೀಡೆಗಳು ನಡೆಯುವುದು ವಿಶೇಷ. ಅಂತಾರಾಷ್ಟ್ರೀಯ ಯೋಗ ಕೇಂದ್ರ ಹೃಷಿಕೇಶಿಯಲ್ಲಿದ್ದು, ಯೋಗಪಟುಗಳಿಗೆ ಉತ್ತಮ ತರಬೇತಿ ನೀಡಲಾಗುತ್ತದೆ ಎಂದು ಉತ್ತರಾಖಂಡ್​ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.

Trivendra singh Ravath
ತ್ರಿವೇಂದ್ರ ಸಿಂಗ್ ರಾವತ್

By

Published : Jan 2, 2020, 10:02 PM IST

ಬೆಂಗಳೂರು: ಪ್ರವಾಸೋದ್ಯಮ ಒಡಂಬಡಿಕೆ ವಿಚಾರದಲ್ಲಿ ಹಿಂದಿನ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸಿತ್ತು. ಆದರೆ ಯಡಿಯೂರಪ್ಪ ನೇತೃತ್ವದ ಈಗಿನ ಬಿಜೆಪಿ ಸರ್ಕಾರ ಉತ್ತಮವಾಗಿ ಸ್ಪಂದಿಸುತ್ತಿದೆ. ಆದಷ್ಟು ಬೇಗ ಉಭಯ ರಾಜ್ಯಗಳ ನಡುವೆ ಪ್ರವಾಸೋದ್ಯಮ ಯೋಜನೆಗಳಿಗೆ ಅಂತಿಮ ರೂಪ ನೀಡಲಾಗುತ್ತದೆ ಎಂದು ಉತ್ತರಾಖಂಡ್​​​ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.

ಉತ್ತರಾಖಂಡ್​​​ ಸಿಎಂ ತ್ರಿವೇಂದ್ರ ಸಿಂಗ್ ರಾವತ್

ನಗರದ ಖಾಸಗಿ ಹೋಟೆಲ್​​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗ ಈ ವಿಷಯ ಮಾತನಾಡುವುದು ಸರಿಯಲ್ಲ ಎನ್ನುತ್ತಲೇ ಹಿಂದಿನ ಸರ್ಕಾರದ ಅಸಹಕಾರ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದರು. ಯೋಜನೆಗಳ ಸಂಬಂಧ ಹಿಂದಿನ ಸರ್ಕಾರದ ಜೊತೆ ಮಾತುಕತೆ ನಡೆಸಿದ್ದರೂ ಸರಿಯಾದ ಸ್ಪಂದನೆ ಸಿಕ್ಕಿರಲಿಲ್ಲ. ಹಾಗಾಗಿ ನಮ್ಮ ಯೋಜನೆಗಳು ಅನುಷ್ಠಾನಕ್ಕೆ ಬರಲಿಲ್ಲ. ಆದರೆ ಈಗಿನ ಸರ್ಕಾರ ನಮ್ಮ ರಾಜ್ಯದ ಜೊತೆ ಪ್ರವಾಸೋದ್ಯಮ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಉತ್ಸುಕತೆ ತೋರಿದೆ. ಹಾಗಾಗಿ ಯೋಜನೆಗಳ ಸಂಬಂಧ ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲಿ ಅಂತಿಮ ರೂಪ ನೀಡಲಾಗುತ್ತದೆ ಎಂದರು.

2000ನೇ ವರ್ಷದಲ್ಲಿ ಅಸ್ತಿತ್ವಕ್ಕೆ ಬಂದ ರಾಜ್ಯ ಉತ್ತರಾಖಂಡ್​​​ ಈಗ ಸುಂದರ ರಾಜ್ಯವಾಗಿದ್ದು, 45 ಸಾವಿರ ಚದರ ಕಿಲೋ ಮೀಟರ್ ವಿಸ್ತೀರ್ಣ ಹೊಂದಿದ ರಾಜ್ಯವಾಗಿದೆ. ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಉತ್ತರಾಖಂಡ್​​ ರಾಜ್ಯ 1 ಕೋಟಿ ಜನಸಂಖ್ಯೆ ಹೊಂದಿದ್ದು, 4 ಕೋಟಿ ಪ್ರವಾಸಿಗರು ರಾಜ್ಯಕ್ಕೆ ಭೇಟಿ ಕೊಡುತ್ತಾರೆ. ಕರ್ನಾಟಕ ಹೊರತುಪಡಿಸಿ ಹುಲಿಗಳು ಹೆಚ್ಚು ನಮ್ಮ ರಾಜ್ಯದಲ್ಲಿಯೇ ಇವೆ ಎಂದರು.

ಸಿನಿಮಾ ಶೂಟಿಂಗ್​ಗೆ ಉತ್ತರಾಖಂಡ್​​ ಉತ್ತಮ ತಾಣವಾಗಿದೆ. ರಜನಿಕಾಂತ್​, ಮಹೇಶ್​ ಬಾಬು, ಅಮಿತಾ ಬಚ್ಚನ್ ಸಿನಿಮಾ ಶೂಟಿಂಗ್​​ಗೆ ಬರುತ್ತಿರುತ್ತಾರೆ ಎಂದು ದಕ್ಷಿಣ ಭಾರತ ರಾಜ್ಯಗಳ ಸಿನಿಮಾ ಶೂಟಿಂಗ್​ಗೆ ಉತ್ತರಾಖಂಡ್​ ನೆಚ್ಚಿನ ತಾಣವಾಗುತ್ತಿದೆ ಎಂದರು.

ಉತ್ತರಾಖಂಡ್​ ಮತ್ತು ಕರ್ನಾಟಕ ನಡುವೆ ಉತ್ತಮ ಸಂಬಂಧವಿದ್ದು, ಇಲ್ಲಿನ ಅಧಿಕಾರಿಗಳು ಅಲ್ಲಿಗೆ ಹಾಗೂ ಅಲ್ಲಿನವರು ಇಲ್ಲಿಗೆ ಅಧ್ಯಯನಕ್ಕಾಗಿ ಬರುತ್ತಾ ಇರುತ್ತಾರೆ. ಫೆಬ್ರುವರಿಯಲ್ಲಿ ಉತ್ತರಾಖಂಡ್​​ನಲ್ಲಿ ಕ್ರೀಡೆಗಳು ನಡೆಯುತ್ತವೆ. ಹಿಮದಲ್ಲಿ ಕ್ರೀಡೆಗಳು ನಡೆಯುವುದು ವಿಶೇಷ. ಅಂತಾರಾಷ್ಟ್ರೀಯ ಯೋಗ ಕೇಂದ್ರ ಹೃಷಿಕೇಶಿಯಲ್ಲಿದ್ದು, ಯೋಗಪಟುಗಳಿಗೆ ಉತ್ತಮ ತರಬೇತಿ ನೀಡಲಾಗುತ್ತದೆ ಎಂದರು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನ ನಾನು ಸ್ವಾಗತಿಸುತ್ತೇನೆ. ಕಾಯ್ದೆ ತಿದ್ದುಪಡಿ ವೇಳೆ ನಮ್ಮ ರಾಜ್ಯದಲ್ಲಿ ಯಾವುದೇ ಹಿಂಸಾಚಾರದ ಘಟನೆ ನಡೆದಿಲ್ಲ. ದೇಶದ ಹಿತವನ್ನ ಗಮನಿಸಬೇಕು. ತಿದ್ದುಪಡಿ ವಿರೋಧಿಸುವುದು ದೌರ್ಭಾಗ್ಯದ ಸಂಗತಿ. ಯಹೂದಿಗಳನ್ನ ಇಡೀ ದೇಶವೇ ಹೊರ ಹಾಕಲು ನೋಡಿದಾಗ ಭಾರತ ಅವರಿಗೆ ರಕ್ಷಣೆ ಕೊಟ್ಟಿತ್ತು. ಪಾಕ್​​ನಿಂದ 200 ಕುಟುಂಬಗಳು ರಾಜ್ಯಕ್ಕೆ ಬಂದಿವೆ. ಈ ಕಾಯ್ದೆ ಜಾರಿಯಿಂದ ದೇಶ ಬಲಿಷ್ಠವಾಗಲಿದೆ ಎಂದು ಕಾಯ್ದೆಯನ್ನು ಸಮರ್ಥಿಸಿಕೊಂಡರು.

2021ರ ಜನವರಿಯಲ್ಲಿ ಕುಂಭಮೇಳ ನಡೆಯಲಿದ್ದು, ಅದಕ್ಕೆ ಸಕಲ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನಾಗಾ ಸಾಧುಗಳನ್ನು ನೋಡಲು ದೊಡ್ಡ ಸಂಖ್ಯೆಯ ಜನರು ಬರುತ್ತಾರೆ. ಹಾಗಾಗಿ ನಾಗಾ ಸಾಧುಗಳನ್ನು ನೋಡಲು ಅನುಕೂಲವಾಗುವಂತೆ ನದಿ ತೀರದುದ್ದಕ್ಕೂ ಎತ್ತರದ ವೇದಿಕೆ ನಿರ್ಮಿಸಿ ವೀಕ್ಷಣೆಗೆ ಅನುವು ಮಾಡಿಕೊಡಲಾಗುತ್ತದೆ ಎಂದರು.

ಉತ್ತಾರಾಖಂಡ್​ನಲ್ಲಿ ಬಿಜೆಪಿ ಬಲಿಷ್ಠವಾಗಿದೆ. 5 ಲೋಕಸಭಾ ಕ್ಷೇತ್ರಗಳೂ ಬಿಜೆಪಿ ಪಾಲಾಗಿವೆ. 70 ವಿಧಾನಸಭಾ ಕ್ಷೇತ್ರಗಳಲ್ಲಿ 57 ಬಿಜೆಪಿ ಗೆದ್ದಿದ್ದು, ಪ್ರತಿಪಕ್ಷ ಕಾಂಗ್ರೆಸ್ 10, ಪಕ್ಷೇತರ 3 ಸದಸ್ಯರಿದ್ದಾರೆ. ಜಿಲ್ಲಾ ಪಂಚಾಯತ್​​ನಲ್ಲಿಯೂ ಬಿಜೆಪಿ ಪ್ರಾಬಲ್ಯ ಮೆರೆದಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ ಜಿಎಸ್​​ಟಿ ಸಂಗ್ರಹ ಉತ್ತಮವಾಗಿದೆ. ಕೇಂದ್ರ ಸರ್ಕಾರದಿಂದಲೂ ರಾಜ್ಯದ ಪಾಲಿನ ಜಿಎಸ್​​ಟಿ ಹಣ ರಾಜ್ಯಕ್ಕೆ ಬಂದಿದೆ. ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ತಲಾ ಆದಾಯ 2 ಲಕ್ಷವಿದೆ ಎಂದು ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಸಮರ್ಥಿಸಿಕೊಂಡರು.

ABOUT THE AUTHOR

...view details