ಕರ್ನಾಟಕ

karnataka

ETV Bharat / state

ದೇಶದಲ್ಲೇ ಮಾದರಿ ಸಾರಿಗೆ ವ್ಯವಸ್ಥೆ: KSRTC ಉಪಕ್ರಮಗಳ ಅಧ್ಯಯನಕ್ಕೆ ಆಗಮಿಸಿದ ಉತ್ತರ ಪ್ರದೇಶ ನಿಯೋಗ - ಕೆಎಸ್ಆರ್​ಟಿಸಿ ವ್ಯವಸ್ಥಾಪ ನಿರ್ದೇಶಕ ವಿ ಅನ್ಬುಕುಮಾರ್

ಉತ್ತರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ತಂಡ ಬೆಂಗಳೂರಿಗೆ ಆಗಮಿಸಿ ಕೆಎಸ್​ಆರ್​ಟಿಸಿ ಅನುಷ್ಠಾನಗೊಳಿಸಿರುವ ಉಪಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡಿದೆ.

uttar-pradesh-delegation-arrived-to-study-the-initiatives-of-ksrtc
ಇತರೆ ರಾಜ್ಯಗಳಿಗೆ ಮಾದರಿಯಾದ ರಾಜ್ಯ ಸಾರಿಗೆ ಸಂಸ್ಥೆ: ಕೆಎಸ್ಆರ್​ಟಿಸಿಯ ಉಪಕ್ರಮಗಳ ಅಧ್ಯಯನಕ್ಕೆ ಆಗಮಿಸಿದ ಉತ್ತರ ಪ್ರದೇಶ ನಿಯೋಗ!

By ETV Bharat Karnataka Team

Published : Sep 1, 2023, 7:56 PM IST

ಬೆಂಗಳೂರು: ಹೊಸ ಹೊಸ ಪ್ರಯೋಗಗಳು, ಡೀಸೆಲ್ ಜೊತೆ ಬಯೋಡೀಸೆಲ್ ವಾಹನ, ವಿದ್ಯುತ್ ವಾಹನ ಪರಿಚಯಿಸಿ ದೇಶದ ಅತ್ಯುತ್ತಮ ಸಾರಿಗೆ ನಿಗಮಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಕ್ರಮಗಳ ಅನುಷ್ಠಾನಗಳ ಅಧ್ಯಯನಕ್ಕೆ ಉತ್ತರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ತಂಡ ಆಗಮಿಸಿದೆ. ಎರಡು ದಿನಗಳ ಕಾಲ ಕೆಎಸ್ಆರ್​ಟಿಸಿಯ ಸಮಗ್ರ ಕಾರ್ಯಾಚರಣೆ, ನಿರ್ವಹಣಾ ವಿಧಾನವನ್ನು ಈ ತಂಡ ಅಧ್ಯಯನ ಮಾಡಿದೆ.

ಹೆಚ್ಚುವರಿ ವ್ಯವಸ್ಥಾಪಕ ನಿರ್ದೇಶಕಿ ಅನ್ನಪೂರ್ಣ ಗರ್ಗ್ ನೇತೃತ್ವದಲ್ಲಿ ಅಧಿಕಾರಿಗಳು ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-4, ಪ್ರಾದೇಶಿಕ ಕಾರ್ಯಾಗಾರ, ಕೆಂಗೇರಿ ಬಸ್ ನಿಲ್ದಾಣ, ಕೆಂಪೇಗೌಡ ಬಸ್‌ ನಿಲ್ದಾಣ, ಮೈಸೂರು ರಸ್ತೆ ಸ್ಯಾಟಲೈಟ್‌ ಬಸ್‌ ನಿಲ್ದಾಣದ ನಿಯಂತ್ರಣ ಕೊಠಡಿಗಳಿಗೆ ಭೇಟಿ ನೀಡಿದರು.

ವಾಹನಗಳ ತಾಂತ್ರಿಕ ನಿರ್ವಹಣೆ ಮತ್ತು ಕಾರ್ಯಾಚರಣೆ, ಡ್ಯೂಟಿ ರೋಟಾ ವ್ಯವಸ್ಥೆ, ಮುಂಗಡ ಆಸನ ಕಾಯ್ದಿರಿಸುವಿಕೆ, ಕಾರ್ಮಿಕರ ಕಲ್ಯಾಣಕ್ಕಾಗಿ ಕೈಗೊಂಡಿರುವ ವಿನೂತನ ಕ್ರಮಗಳು, ಮಾಹಿತಿ ತಂತ್ರಜ್ಞಾನ ಉಪಕ್ರಮಗಳು, ಬಸ್‌ ನಿಲ್ದಾಣ/ಘಟಕಗಳ ಕಾಮಗಾರಿ ಪದ್ಧತಿ, ಬಸ್ಸುಗಳ ಬ್ರ್ಯಾಂಡಿಂಗ್, ಬಸ್ಸುಗಳ ಪುನಶ್ಚೇತನ ಕಾರ್ಯ, ಬಸ್‌ ನಿಲ್ದಾಣದ ಸ್ವಚ್ಛತೆ ಬಗ್ಗೆ ಮಾಹಿತಿ ಪಡೆದರು.

ಕೆಎಸ್ಆರ್​ಟಿಸಿ ಬಗ್ಗೆ ಮಾಹಿತಿ ಪಡೆದ ಉತ್ತರ ಪ್ರದೇಶ ಸರ್ಕಾರದ ಅನ್ನಪೂರ್ಣ ಗರ್ಗ್ ನೇತೃತ್ವದ ಅಧಿಕಾರಿಗಳ ತಂಡ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸದ್ಯ ಗ್ರಾಮೀಣ ಸಾರಿಗೆ, ನಗರ ಸಾರಿಗೆ, ವೇಗದೂತ, ರಾಜಹಂಸ, ಹವಾನಿಯಂತ್ರಣ ರಹಿತ ಸ್ಲೀಪರ್, ಎಸಿ ಸ್ಲೀಪರ್, ವೋಲ್ವೋ, ಮಲ್ಟಿ ಆಕ್ಸಲ್ ವೋಲ್ವೋ, ಮಲ್ಟಿ ಆಕ್ಸಲ್ ಸ್ಲೀಪರ್ ಜೊತೆಗೆ ಅಂತರ್ ಜಿಲ್ಲೆಗಳಿಗೆ ಎಸಿ ವಿದ್ಯುತ್ ಚಾಲಿತ ಬಸ್​ಗಳನ್ನು ಕಾರ್ಯಾಚರಿಸುತ್ತಿದೆ. ಇವುಗಳ ಬಗ್ಗೆಯೂ ಯುಪಿ ನಿಯೋಗ ಮಾಹಿತಿ ಪಡೆದುಕೊಂಡಿತು. ನಿನ್ನೆ ಮತ್ತು ಇಂದು ಎರಡು ದಿನಗಳ ಕಾಲ ನಗರದಲ್ಲೇ ಇದ್ದು ಸಂಪೂರ್ಣವಾಗಿ ಕೆಎಸ್ಆರ್​ಟಿಸಿಯ ಸೇವೆ, ನಿರ್ವಹಣೆ ಎಲ್ಲವನ್ನೂ ಅವಲೋಕನ ಮಾಡಿದರು.

ಕೆಎಸ್ಆರ್​ಟಿಸಿ ವ್ಯವಸ್ಥಾಪ ನಿರ್ದೇಶಕ ವಿ ಅನ್ಬುಕುಮಾರ್, ಯುಪಿ ಸಾರಿಗೆ ನಿಗಮದ ಹೆಚ್ಚುವರಿ ವ್ಯವಸ್ಥಾಪಕ ನಿರ್ದೇಶಕಿ ಅನ್ನಪೂರ್ಣ ಗರ್ಗ್ ಅವರಿಗೆ ಕೆಎಸ್ಆರ್​ಟಿಸಿಯ ಸಮಗ್ರ ಉಪಕ್ರಮಗಳ ಕುರಿತು ವಿವರ ನೀಡಿದರು. ಕೆಲ ಕಾಲ ಸಾರಿಗೆ ಸಂಸ್ಥೆಯ ನಿರ್ವಹಣೆ ಕುರಿತು ಚರ್ಚಿಸಿದರು. ರಾಜ್ಯದಲ್ಲಿನ ಸಾರಿಗೆ ಸೇವೆ ಮತ್ತು ಉತ್ತರ ಪ್ರದೇಶದಲ್ಲಿನ ಸಾರಿಗೆ ಸೇವೆ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡರು.

ಕೆಎಸ್ಆರ್​ಟಿಸಿ ಮುಡಿಗೆ 4 ಪ್ರಶಸ್ತಿ:ಇತ್ತೀಚಿಗೆ, ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿ ಪಡೆದ ಬೆನ್ನಲ್ಲೇ ಕೆಎಸ್ಆರ್​ಟಿಸಿ ಮುಡಿಗೆ ಮತ್ತೆ ನಾಲ್ಕು ಪ್ರಶಸ್ತಿಗಳು ಲಭಿಸಿದ್ದವು. ಈ ಪ್ರಶಸ್ತಿಗಳನ್ನು ನಿಗಮದ ಸಮಸ್ತ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕ ಪ್ರಯಾಣಿಕರಿಗೆ ಕೆಎಸ್ಆರ್​ಟಿಸಿ ಸಮರ್ಪಿಸುವ ಮೂಲಕ ಪ್ರಶಸ್ತಿಯ ಗೌರವವನ್ನು ಹೆಚ್ಚುವಂತೆ ಮಾಡಿತ್ತು. ವಿ ಕನೆಕ್ಟ್ ಇಂಡಿಯಾ ಮೀಡಿಯಾ ಅಂಡ್ ರಿಸರ್ಚ್​ನಿಂದ ಕೊಡಲಾಗುವ ಏಷ್ಯಾದ ಬ್ಯುಸಿನೆಸ್ ಕ್ವಾಲಿಟಿ ಪ್ರಶಸ್ತಿಗಳಲ್ಲಿ ನಾಲ್ಕು ವರ್ಗದಲ್ಲಿ ಕೆಎಸ್ಆರ್​ಟಿಸಿಗೆ ಪ್ರಶಸ್ತಿಗಳು ಬಂದಿದ್ದವು. ಕಾರ್ಮಿಕ ಕಲ್ಯಾಣ ಉಪಕ್ರಮದ ಉತ್ಕೃಷ್ಟ ಸಾಧನೆಗೆ, ಸಾರಿಗೆ ಸುರಕ್ಷತಾ ಕ್ಷೇತ್ರದಲ್ಲಿ ಅತ್ಯುನ್ನತ ಕಾರ್ಯಸಾಧನೆಗೆ, ಅತ್ಯುನ್ನತ ಬ್ರ್ಯಾಂಡಿಂಗ್ & ಮಾರ್ಕೆಟಿಂಗ್, ಅತ್ಯುನ್ನತ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಗಾಗಿ ಕೆಎಸ್ಆರ್​ಟಿಸಿ ಪ್ರಶಸ್ತಿ ಪಡೆದುಕೊಂಡಿತ್ತು.

ಇದನ್ನೂ ಓದಿ:ಕಾರ್ಗೋ ಸೇವೆಗೆ ಮುಂದಾದ ಸಾರಿಗೆ ನಿಗಮ: ರಸ್ತೆಗಿಳಿಯಲಿವೆ ಕೆಎಸ್ಆರ್​ಟಿಸಿ ಟ್ರಕ್​ಗಳು...!

ABOUT THE AUTHOR

...view details