ಬೆಂಗಳೂರು:ವಿಧಾನಸಭೆಸಭಾಧ್ಯಕ್ಷ ಯು.ಟಿ. ಖಾದರ್ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ವಿಷಯ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಇಂದು ಸದನ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ವಿಷಯ ಪ್ರಸ್ತಾಪಿಸಿ, "ಪಕ್ಷಕ್ಕೆ ಸೀಮಿತರಲ್ಲದ ನೀವು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಹೋಗಿದ್ದು ನಿಜವೇ? ಅಥವಾ ಇದು ಮಾಧ್ಯಮಗಳ ಸೃಷ್ಟಿಯೇ?, ನೀವೇ ಸ್ಪಷ್ಟನೆ ನೀಡಿ" ಎಂದು ಕೇಳಿದರು.
ಇದಕ್ಕೆ ಉತ್ತರಿಸಿದ ಸಭಾಧ್ಯಕ್ಷರು, "ಮುಖ್ಯಮಂತ್ರಿಗಳು ಔತಣಕೂಟಕ್ಕೆ ಕರೆದಿದ್ದರು. ಅದಕ್ಕೆ ಹೋಗಿದ್ದೆ. ಔತಣಕೂಟಕ್ಕೆ ಹೋಗುವುದು ತಪ್ಪಲ್ಲವಲ್ಲ. ನಾಳೆ ನೀವು (ವಿಪಕ್ಷ) ಕರೆದರೂ ಔತಣಕೂಟಕ್ಕೆ ಬರುವೆ. ಸಭಾಧ್ಯಕ್ಷರಾಗಿದ್ದರೂ ಮನುಷ್ಯನೇ ಅಲ್ಲವೇ?" ಎಂದರು.
ಇದಕ್ಕೂ ಮುನ್ನ ಬಿಜೆಪಿಯ ಶಾಸಕ ಸುರೇಶ್ ಕುಮಾರ್ ಮಾತನಾಡಿ, "ಆಡಳಿತ ಪಕ್ಷದ ಮೊದಲ ಸಾಲಿನಲ್ಲಿ 9 ಸಚಿವರು ಇಲ್ಲ. ಎಲ್ಲರೂ ತಾರಾ ಹೋಟೆಲ್‍ನಲ್ಲಿ ಇದ್ದಂತೆ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ಒಂದು ದಿನದ ಮಟ್ಟಿಗಾದರೂ ಅಧಿವೇಶನವನ್ನು ತಾರಾ ಹೋಟೆಲ್ಗೆ ಸ್ಥಳಾಂತರಿಸಿ ಬಿಡಿ" ಎಂದು ಹೇಳುವ ಮೂಲಕ ಸದನದಲ್ಲಿ ನಗೆಯುಕ್ಕಿಸಿದರು. ಇದಕ್ಕೆ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ನೀವು ಸಲಹೆ ಕೊಟ್ಟಿದ್ದೀರಿ. ಆದರೆ, ನಿಯಮಾವಳಿಯಲ್ಲಿ ಅವಕಾಶವಿಲ್ಲ ಎಂದು ಅಷ್ಟೇ ತೀಕ್ಷ್ಣವಾಗಿ ಉತ್ತರಿಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, "ಮೊದಲ ಸಾಲಿನ ಪ್ರಮುಖ ಖಾತೆಗಳನ್ನು ನಿರ್ವಹಿಸುವ ಒಂಬತ್ತು ಸಚಿವರು ಗೈರು ಹಾಜರಾಗಿದ್ದಾರೆ. ಸದನದ ಕಾರ್ಯಕಲಾಪಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ" ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, "ನಾನು ಸೇರಿದಂತೆ ಮೂವರು ಸಚಿವರು ಸದನದಲ್ಲಿ ಇದ್ದೇವೆ. ನೀವು ಹೇಳುವ ವಿಚಾರವನ್ನು ನಾವು ದಾಖಲಿಸಿಕೊಂಡು ಸಂಬಂಧಪಟ್ಟ ಸಚಿವರ ಗಮನಕ್ಕೆ ತರುತ್ತೇವೆ" ಎಂದು ಸಮಜಾಯಿಷಿ ನೀಡಿದರು.