ಬೆಂಗಳೂರು: ಬಿಜೆಪಿ ಕರಾವಳಿ ಭಾಗದಲ್ಲಿ ಮಾಡಿಸಿರುವ ಆಂತರಿಕ ಸಮೀಕ್ಷೆಯ ವರದಿ ನಮಗೆ ನಾಲ್ಕು ತಿಂಗಳು ಮುನ್ನವೇ ತಿಳಿದಿದೆ ಎಂದು ಮಾಜಿ ಸಚಿವ ಯುಟಿ ಖಾದರ್ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿ, ಕರಾವಳಿ ಭಾಗದಲ್ಲಿ ಬಿಜೆಪಿ 3-4 ಸ್ಥಾನಗಳನ್ನ ಕಳೆದುಕೊಳ್ಳುವ ವಿಚಾರ ನಮಗೆ ತಿಳಿದಿದೆ. ಬಿಜೆಪಿ ಪಕ್ಷದ ಆಂತರಿಕ ಸಮೀಕ್ಷೆ ಇದೆ ಇದು ನಾಲ್ಕು ತಿಂಗಳ ಮುಂಚಿತವಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಬಂದಿದೆ. ನಮ್ಮ ವರದಿಯಲ್ಲಿ ಇನ್ನೂ ಹೆಚ್ಚಿನ ಸೀಟ್ಗಳನ್ನ ಕರಾವಳಿ ಭಾಗದಲ್ಲಿ ಗೆಲ್ಲುತ್ತೇವೆ ಎಂದು ಇದೆ.
ಎಂಟಕ್ಕೆ ಎಂಟು ಸೀಟುಗಳನ್ನು ಗೆಲ್ಲೋದಕ್ಕೆ ನಮ್ಮ ಪ್ರಯತ್ನವನ್ನ ಮಾಡ್ತೇವೆ. ಕರಾವಳಿ ಜನತೆ ಈ ಬಾರಿ ತಿರ್ಮಾನ ಮಾಡಿದ್ದಾರೆ. ಒಂದು ಕಾಂಗ್ರೆಸ್ ಪಕ್ಷವನ್ನ ಗೆಲ್ಲಿಸುವ ಮೂಲಕ ಈ ದೇಶಕ್ಕೆ ಕರಾವಳಿ ಜನತೆ ಒಂದು ಸಂದೇಶವನ್ನ ಕೊಡಲಿದ್ದಾರೆ ಎಂದರು. ಕೋಮುವಾದ, ದ್ವೇಷ ಬಿತ್ತುವುದು ಹಾಗೂ ಸಮಾಜದ ಅಭಿೃದ್ಧಿಯನ್ನ ನಿರ್ಲಕ್ಷಿಸಿದರೆ ಕರಾವಳಿ ಭಾಗದ ಜನರು ಅದನ್ನು ಒಪ್ಪೋದಿಲ್ಲ. ನಮಗೆ ಒಗ್ಗಟ್ಟು, ಪ್ರೀತಿ ಮತ್ತು ಜನರ ಅಭಿವೃದ್ಧಿಯೇ ಮುಖ್ಯ ಅಂತ ಹೇಳಿ ಈ ಚುನಾವಣೆಯಲ್ಲಿ ತೋರಿಸ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲಿಂಗಾಯತ ಸಮುದಾಯದ ಮುಖಂಡರ ಸಭೆ:ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತರಿಗೆ ಹೆಚ್ಚಿನ ಸೀಟು ಬೇಡಿಕೆ ವಿಚಾರವಾಗಿ ಫೆ.13 ರಂದು ಸಮುದಾಯದ ನಾಯಕರು ವಿಶೇಷ ಸಭೆ ಕರೆದಿದ್ದಾರೆ. ಮಾಜಿ ಗೃಹ ಸಚಿವ ಹಾಗೂ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಬೆಂಗಳೂರಿನ ಬಸವಭವನದಲ್ಲಿ ನಡೆಯುವ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಅಲ್ಲಮ ಪ್ರಭುಪಾಟೀಲ್, ಬಸವರಾಜ ರಾಯರೆಡ್ಡಿ, ಅಮರೇಗೌಡ ಬಯ್ಯಾಪೂರ, ಬಸನಗೌಡ ಬಾದರ್ಲಿ,ಅನಿಲ್ ಕುಮಾರ್ ತಡಕಲ್, ನಾಗರಾಜ ಚಬ್ಬಿ ಸೇರಿದಂತೆ ಹಲವರು ಭಾಗಿ ಸಾಧ್ಯತೆ ಇದೆ.