ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ರಾಜ್ಯದಲ್ಲಿ ಹೊಸ ಮತಯಂತ್ರಗಳನ್ನು ಬಳಕೆ ಮಾಡಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದರು.
ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ‘‘ಹೈದರಾಬಾದ್ ಮೂಲದ ಸಂಸ್ಥೆ ಹೊಸದಾಗಿ ತಯಾರು ಮಾಡಿದ ಮತಯಂತ್ರಗಳನ್ನು ಮೇ 10ರಂದು ನಡೆಯಲಿರುವ ಮತದಾನದಲ್ಲಿ ಬಳಸಲಾಗುವುದು. ಎಲ್ಲಾ ಮತಯಂತ್ರಗಳು ಹೊಸದಾಗಿರಲಿದೆ. ಒಟ್ಟು ಬ್ಯಾಲೆಟ್ ಯನಿಟ್ 1,15,709, ಕಂಟ್ರೋಲ್ ಯುನಿಟ್ 82,543, ವಿವಿಪ್ಯಾಟ್ 89,379 ಬಳಸಲಾಗುವುದು ಎಂದು ವಿವರಿಸಿದರು.
ರಾಜಕೀಯ ಪಕ್ಷಗಳು ಇತರ ರಾಜ್ಯಗಳಲ್ಲಿ ಬಳಸಿದ ಮತಯಂತ್ರಗಳನ್ನು ರಾಜ್ಯ ಚುನಾವಣೆಯಲ್ಲಿ ಉಪಯೋಗಿಸದಂತೆ ಚುನಾವಣಾ ಆಯೋಗ ಆಯುಕ್ತರಿಗೆ ಮನವಿ ಮಾಡಿದ್ದರು. ಅದರಲ್ಲೂ ಬಿಜೆಪಿ ಗೆದ್ದ ರಾಜ್ಯಗಳಲ್ಲಿ ಬಳಸಿದ ಇವಿಎಂಗಳನ್ನು ರಾಜ್ಯದಲ್ಲಿ ಬಳಸದಂತೆ ಮನವಿ ಮಾಡಿದ್ದರು. ಅದರಂತೆ ಇದೀಗ ರಾಜ್ಯದ ಚುನಾವಣೆಯಲ್ಲಿ ಹೊಸದಾಗಿ ಉತ್ಪಾದಿಸಲ್ಪಟ್ಟ ಮತಯಂತ್ರಗಳನ್ನೇ ಬಳಸಲು ಚುನಾವಣಾ ಆಯೋಗ ನಿರ್ಧರಿಸಿದೆ.
ಮಾದರಿ ನೀತಿ ಸಂಹಿತೆ ಇಂದಿನಿಂದಲೇ ಜಾರಿ:ಮಾದರಿ ನೀತಿ ಸಂಹಿತೆ ಇಂದಿನಿಂದಲೇ ಜಾರಿಯಾಗಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದರು. ಈ ಸಂಬಂಧ 2,040 ಫ್ಲೈಯಿಂಗ್ ಸ್ಕ್ವೇಡ್, 2605 ಸ್ಟಾಟಿಕ್ ಪರಿವೀಕ್ಷಣಾ ತಂಡ, 266 ವಿಡಿಯೋ ವೀಕ್ಷಣಾ ತಂಡ, 631 ವಿಡಿಯೋ ಪರಿವೀಕ್ಷಣಾ ತಂಡ ರಚಿಸಲಾಗಿದೆ ಎಂದರು. ಒಟ್ಟು 942 ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಈ ಪೈಕಿ 171 ಅಂತರ ರಾಜ್ಯ ಗಡಿ ಚೆಕ್ ಪೋಸ್ಟ್ಗಳು ಸ್ಥಾಪನೆಯಾಗಿವೆ ಎಂದು ಇದೇ ವೇಳೆ ವಿವರಿಸಿದರು.
ಅಕ್ರಮ ಮದ್ಯ, ನಗದು ಜಪ್ತಿ ಎಷ್ಟು?:ಒಟ್ಟು ಒಂದು ವಾರದಲ್ಲಿ 57.72 ಕೋಟಿ ರೂ. ಮೌಲ್ಯದ ಮದ್ಯ, ನಗದು, ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು. ಪೊಲೀಸ್ ಇಲಾಖೆ ವಶಪಡಿಸಿದ ಅಕ್ರಮ ನಗದು, ಮದ್ಯ, ಇತರೆ ವಸ್ತುಗಳ ಮೌಲ್ಯ 34.36 ಕೋಟಿ ರೂ., ಈ ಪೈಕಿ ನಗದು 14.24 ಕೋಟಿ, ಡ್ರಗ್ಸ್ ಮೌಲ್ಯ 530 ಗ್ರಾಂ, 15 ಕೆಜಿ ಚಿನ್ನ, 135 ಕೆಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ ಎಂದರು.