ಬೆಂಗಳೂರು: ಯುಎಸ್ ಕಾನ್ಸುಲೇಟ್ ಕಚೇರಿಯು ಬೆಂಗಳೂರಿನಲ್ಲಿ ಕಾರ್ಯಾರಂಭಿಸಲು, ಕಾರಣೀಕರ್ತರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಗುರುವಾರ ಧನ್ಯವಾದ ಅರ್ಪಿಸಿದ್ದಾರೆ.
ಪ್ರಧಾನಿ ಮೋದಿಯವರ ಅಮೆರಿಕ ಭೇಟಿ ಹಿನ್ನೆಲೆಯಲ್ಲಿ ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಇಂದು ಅಮೆರಿಕವು ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಎರಡು ಹೊಸ ಕಾನ್ಸುಲೇಟ್‌ಗಳನ್ನು ಕಚೇರಿಗಳು ತೆರೆಯಲಿದ್ದು, ಭಾರತವು ಸಿಯಾಟಲ್‌ನಲ್ಲಿ ಮಿಷನ್ ಸ್ಥಾಪಿಸಲಿದೆ ಎಂದು ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಕಾನ್ಸುಲೇಟ್ ಕಚೇರಿಯ ಸ್ಥಾಪನೆಯ ವಿಚಾರವಾಗಿ ಸೂರ್ಯ ಅವರು, ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಮತ್ತು ಯುಎಸ್ ಕಾನ್ಸುಲೇಟ್ ಕಚೇರಿಯ ಅಧಿಕಾರಿಗಳಿಗೆ ಹಲವು ಬಾರಿ ಒತ್ತಾಯಿಸಿದ್ದರು.
'ಇದೀಗ ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಕಚೇರಿಯನ್ನು ಸ್ಥಾಪಿಸುತ್ತಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಧನ್ಯವಾದಗಳು. ಸಾವಿರಾರು ಅಂತರಾಷ್ಟ್ರೀಯ ಕಂಪನಿಗಳೊಂದಿಗೆ ವೇಗವಾಗಿ ಬೆಳೆಯುತ್ತಿರುವ ಮತ್ತು IT ಶಕ್ತಿ ಕೇಂದ್ರವಾಗಿರುವ ಬೆಂಗಳೂರಿಗೆ, ಇದು ದೀರ್ಘ ಕಾಲದ ಬೇಡಿಕೆಯಾಗಿತ್ತು. ಇದು ಲಕ್ಷಾಂತರ ಕನ್ನಡಿಗರಿಗೆ ಮತ್ತು ನಮ್ಮ ನಗರಕ್ಕೆ ಸಹಾಯ ಮಾಡುತ್ತದೆ' ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.
ಈ ವರ್ಷದ ಮಾರ್ಚ್ 24 ರಂದು, ಯುನೈಟೆಡ್ ಸ್ಟೇಟ್ಸ್ ವಿದೇಶಾಂಗ ಇಲಾಖೆಯೊಂದಿಗೆ ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಕಚೇರಿಯನ್ನು ಸ್ಥಾಪಿಸಲು ಸೂರ್ಯ ಅವರು ವಿದೇಶಾಂಗ ಸಚಿವ ಜೈಶಂಕರ್ ಅವರ ಬಳಿ ಮನವಿ ಮಾಡಿದ್ದರು. ಆಗ, ಜೈಶಂಕರ್ "ಮುಂದಿನ ಬಾರಿ ನಾನು ಆಂಥೋನಿ ಬ್ಲಿಂಕನ್ ಅವರನ್ನು ಭೇಟಿಯಾದಾಗ, ನಿಮ್ಮ ಈ ಮನವಿಯನ್ನು, ನಿಮ್ಮಷ್ಟೇ ಬಲವಾಗಿ ಅವರ ಬಳಿ ಇಡುತ್ತೇನೆ ಎಂದು ನಿಮಗೆ ಭರವಸೆ ನೀಡುತ್ತೇನೆ." ಎಂದು ಹೇಳಿದ್ದರು.
ನವೆಂಬರ್ 2019 ರಲ್ಲಿ, ಸೂರ್ಯ ಅವರು ಬೆಂಗಳೂರಿನಲ್ಲಿ ಯುಎಸ್ನ ಕಾನ್ಸುಲೇಟ್ ಕಚೇರಿಗಾಗಿ ಲಿಖಿತ ಮನವಿಯೊಂದಿಗೆ ಜೈಶಂಕರ್ ಅವರನ್ನು ಭೇಟಿಯಾಗಿದ್ದರು." ಬೆಂಗಳೂರಿನಲ್ಲಿ ಸುಮಾರು 750 ಬಹು-ರಾಷ್ಟ್ರೀಯ ಕಂಪನಿಗಳಿವೆ ಮತ್ತು ಅವುಗಳಲ್ಲಿ ಸುಮಾರು 370 ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿವೆ. ಬೆಂಗಳೂರು ಮತ್ತು ಕರ್ನಾಟಕ ಒಟ್ಟಾಗಿ ಯುನೈಟೆಡ್ ಸ್ಟೇಟ್ಸ್‌ಗೆ ಪ್ರಯಾಣಿಸುವ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳ ದೊಡ ಸಂಖ್ಯೆ ಇದೆ. ಅಸ್ತಿತ್ವದಲ್ಲಿರುವ ವರ್ಚುವಲ್ ಕಾನ್ಸುಲೇಟ್‌ಗಿಂತ ಹೆಚ್ಚಾಗಿ ಬೆಂಗಳೂರಿನಲ್ಲಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿರುವ ಯುಎಸ್ ಕಾನ್ಸುಲೇಟ್ ಅನ್ನು ಹೊಂದಿದ್ದರೆ ಕರ್ನಾಟಕದ ಕನಿಷ್ಠ ಅರ್ಧ ಮಿಲಿಯನ್ ಜನರಿಗೆ ಅನುಕೂಲಕರವಾಗಿರುತ್ತದೆ ಮತ್ತು ಚೆನ್ನೈ ಮತ್ತು ಹೈದರಾಬಾದ್‌ನಲ್ಲಿರುವ ಕಾನ್ಸುಲೇಟ್‌ಗಳ ಮೇಲಿನ ಹೊರೆಯೂ ಕಡಿಮೆಯಾಗುತ್ತದೆ," ಎಂದು ಅವರು ನವೆಂಬರ್ 18 2019 ರ ಪತ್ರದಲ್ಲಿ ಬರೆದಿದ್ದರು.
ತೇಜಸ್ವಿ ಸೂರ್ಯ ಅವರು ಮಾರ್ಚ್ 2020 ರಲ್ಲಿ ಭಾರತದಲ್ಲಿನ ಯುಎಸ್ ರಾಯಭಾರಿ ಡಾ. ಕೆನ್ನೆತ್ ಜಸ್ಟರ್ ಅವರ ಬಳಿಯೂ ತಮ್ಮ ಮನವಿಯನ್ನು ಸಲ್ಲಿಸಿದ್ದರು. ಗುರುವಾರ ಬೆಂಗಳೂರಿನಲ್ಲಿ ಕಾನ್ಸುಲೇಟ್‌ನ ಘೋಷಣೆಯಾದಾಗ, ಇದರಿಂದ ಬೆಂಗಳೂರು ನಗರವು ಮಹತ್ತರವಾದ ಪ್ರಯೋಜನ ಪಡೆಯುತ್ತದೆ ಮತ್ತು ಉಭಯ ದೇಶಗಳ ನಡುವಿನ ಬಾಂಧವ್ಯವು ಗಟ್ಟಿಗೊಳ್ಳುತ್ತದೆ ಎಂದು ಸೂರ್ಯ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
"ಬೆಂಗಳೂರಿನಲ್ಲಿರುವ ಯುಎಸ್ ಕಾನ್ಸುಲೇಟ್ ಕಛೇರಿ, ನಗರದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾಡುವುದರ ಜೊತೆಗೆ, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ವಾಣಿಜ್ಯ ಮತ್ತು ಸಹಕಾರವನ್ನು ಹೆಚ್ಚಿಸುತ್ತದೆ. ಬೆಂಗಳೂರಿನ ಹಿತಾಸಕ್ತಿಗಳನ್ನು ಉತ್ತೇಜಿಸಲು ಮತ್ತು ಬಹುಕಾಲದಿಂದ ಉಳಿದಿರುವ ಬೇಡಿಕೆಯನ್ನು ಈಡೇರಿಸಿರುವುದಕ್ಕಾಗಿ ನಾನು ಮತ್ತೊಮ್ಮೆ ಮೋದಿ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.
ಇದನ್ನೂ ಓದಿ:ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹತೆಗೆ ಅಮೆರಿಕ, ಜರ್ಮನಿ ಸ್ಪಂದನೆ ಅನಗತ್ಯ : ವಿದೇಶಾಂಗ ಸಚಿವ ಜೈಶಂಕರ್