ಬೆಂಗಳೂರು: ಉರಿಗೌಡ, ನಂಜೇಗೌಡ ಉಲ್ಲೇಖಿಸಿರುವ ಸುವರ್ಣ ಮಂಡ್ಯ ಅವರ ಪುಸ್ತಕವನ್ನು ಮರುಮುದ್ರಿಸಿ, ಹಂಚಿಕೆ ಮಾಡುತ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಟಿಪ್ಪುವನ್ನು ಕೊಂದರೂ ಅಂತ ಹೇಳಿ ಒಕ್ಕಲಿಗ ಸಮುದಾಯಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಜೆಡಿಎಸ್ ನಾಯಕರು ವಾದಿಸುತ್ತಿದ್ದಾರೆ. ಆದರೆ 2006ರಲ್ಲಿ ಸುವರ್ಣ ಮಂಡ್ಯ ಪುಸ್ತಕವನ್ನು ದೇವೇಗೌಡರೇ ಬಿಡುಗಡೆ ಮಾಡಿದ್ದರು ಎಂದು ಹೇಳಿದರು.
ಆಗ ಸಿಎಂ ಆಗಿದ್ದವರು ಕುಮಾರಸ್ವಾಮಿ. ಆ ಪುಸ್ತಕಕ್ಕೆ ಮುನ್ನಡಿ ಬರೆದಿದ್ದು ಆಗ ಸಚಿವರಾಗಿದ್ದ ಚೆಲುವರಾಯಸ್ವಾಮಿ. ಮೈಸೂರಿನ ವಿಸಿಯಾಗಿದ್ದ ಜವರೇಗೌಡರು ಈ ಪುಸ್ತಕ ಬರೆದಿದ್ದರು.ಆಗ ಪುಸ್ತಕ ಬಿಡುಗಡೆಗೆ ಜೆಡಿಎಸ್ ನಾಯಕರು ಏಕೆ ಹೋಗಿದ್ದರು ?. ಆವತ್ತು ಕುಮಾರಸ್ವಾಮಿ ವಿರೋಧ ಏಕೆ ಮಾಡಿಲ್ಲ?. ಟಿಪ್ಪು ಹಿಂದೂ ವಿರೋಧಿ, ಧರ್ಮ ವಿರೋಧಿಯಾಗಿದ್ದಾರೆ. ಅವರು ಚರಿತ್ರೆಯನ್ನು ಓದಬೇಕಲ್ಲ. ಜಾತಿ ಹೆಸರಲ್ಲಿ, ಧರ್ಮದ ಹೆಸರಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಉರಿಗೌಡ, ನಂಜೇಗೌಡ ಉಲ್ಲೇಖಿಸಿರುವ ಸುವರ್ಣ ಮಂಡ್ಯ ಪುಸ್ತಕವನ್ನು ಮರು ಮುದ್ರಿಸಿ, ಹಂಚಿಕೆ ಮಾಡುತ್ತೇವೆ. ಪುಸ್ತಕ ಲಭ್ಯವಿದ್ದರೆ ಅದನ್ನು ಖರೀದಿಸಿ, ಹಂಚಿಕೆ ಮಾಡುತ್ತೇವೆ. ಆ ಮೂಲಕ ರಾಜ್ಯದ ಜನರಿಗೆ ಇತಿಹಾಸ ಸತ್ಯವನ್ನು ಹೇಳುತ್ತೇವೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಹೋರಾಟಗಾರರು ಕೆಟ್ಟದ್ದನ್ನು ಕಂಡಾಗ ಸಿಡಿದೆದ್ದ ಉರಿಗೌಡ ಹಾಗೂ ನಂಜೇಗೌಡರು. ನಂಜೇಗೌಡರು ಹಾಗೂ ಉರಿಗೌಡರು ಇರಲೇ ಇಲ್ಲ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ಅಂತಿದ್ದಾರೆ. ಸಿದ್ದರಾಮಯ್ಯ ಅವರು ಕಪೋಕಲ್ಪಿತ ಪಾತ್ರವನ್ನು ಸೃಷ್ಟಿಸಲಾಗಿದೆ ಎಂದು ಟೀಕಿಸಿದ್ದರು. ಸಿದ್ದರಾಮಯ್ಯಗೆ ಹೇಳ್ತೀನಿ ಉರಿಗೌಡ, ನಂಜೇಗೌಡ ನಮ್ಮ ಸ್ವಾಭಿಮಾನ. ಮಂಡ್ಯದ ಸ್ವಾಭಿಮಾನ, ಮೈಸೂರಿನ ಸ್ವಾಭಿಮಾನ, ಇಡೀ ರಾಜ್ಯದ ಸ್ವಾಭಿಮಾನ. ಇಡೀ ದೇಶದ ಸ್ವಾಭಿಮಾನ ಎಂದು ತಿರುಗೇಟು ನೀಡಿದರು.