ಬೆಂಗಳೂರು :ಬಿಜೆಪಿ ಸರ್ಕಾರವು ಕುತಂತ್ರ ರಾಜಕಾರಣದ ಮೂಲಕ ಮಹಿಳಾ ಶಾಸಕಿ ಸೌಮ್ಯರೆಡ್ಡಿ ಅವರ ಮೇಲೆ ಸುಳ್ಳು ದೂರನ್ನು ದಾಖಲಿಸಿ ಎಫ್.ಐ.ಆರ್ ನಮೂದಿಸಿದೆ ಎಂದು ಕರ್ನಾಟಕ ರೆಡ್ಡಿ ಜನ ಸಂಘ ಆರೋಪಿಸಿದೆ. ಉನ್ನತ ಮಟ್ಟದ ತನಿಖೆ ನಡೆಸಿ ಘಟನೆಗೆ ಕಾರಣರಾದ ಪೊಲೀಸ್ ಸಿಬ್ಬಂದಿ ಮೇಲೆ ಕ್ರಮ ಜರುಗಿಸಿ ಎಂದು ಒತ್ತಾಯಿಸಿದೆ.
ರೈತರ ಹೋರಾಟದ ಸಂದರ್ಭದಲ್ಲಿ ನಡೆದ ತಳ್ಳಾಟದಲ್ಲಿ ಮಹಿಳಾ ಶಾಸಕಿ ಸೌಮ್ಯರೆಡ್ಡಿ ಮತ್ತು ಇತರ ಶಾಸಕರು ಪ್ರತಿಭಟನೆಯಲ್ಲಿ ಮುನ್ನಡೆಯುತ್ತಿದ್ದಾಗ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ಗಳು ಹಾಗೂ ಪೊಲೀಸ್ ಸಿಬ್ಬಂದಿ ಅತ್ಯಂತ ಕೆಟ್ಟ ರೀತಿಯಲ್ಲಿ ವರ್ತಿಸಿದ್ದಾರೆ. ನೆಲಕ್ಕೆ ತಳ್ಳಿ ಎಳೆದಾಡಿ ಅವಮಾನಿಸಿರುವ ಚಿತ್ರಗಳು ಲಭ್ಯವಿದ್ದರೂ ಸಂಬಂಧಪಟ್ಟ ಅಧಿಕಾರಿಯ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ. ಅಲ್ಲದೆ, ಹೋರಾಟ ನಡೆದ 2 ದಿನಗಳ ನಂತರ ಎಫ್.ಐ.ಆರ್ ದಾಖಲಿಸಿ ಕುತಂತ್ರ ರಾಜಕಾರಣ ಮಾಡುವ ಮೂಲಕ ಮಹಿಳಾ ಶಾಸಕಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಸುಳ್ಳ ಎಫ್‌ಐಆರ್ ದಾಖಲಿಸಲಾಗಿರುವುದು ಸರಿಯಲ್ಲ ಎಂದು ಕರ್ನಾಟಕ ರೆಡ್ಡಿ ಜನ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣಾ ರೆಡ್ಡಿ ಕೆ.ಎನ್ ಪತ್ರದಲ್ಲಿ ತಿಳಿಸಿದ್ದಾರೆ.