ಬೆಂಗಳೂರು:ರಾಜಧಾನಿಯಲ್ಲಿ 20 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಲ್ಲೇಶ್ವರಂ ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಿಸಿರುವ ದೇಶದ ಪ್ರಪ್ರಥಮ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಹೈಟೆಕ್ ಡಯಾಗ್ನಾಸ್ಟಿಕ್ ಸೇವೆಗಳ ಎಕ್ಸ್‌ಪ್ರೆಸ್ ಕ್ಲಿನಿಕ್ ಮತ್ತು ಎಸ್ಕಲೇಟರ್ ಸಹಿತ ಸ್ಕೈವಾಕ್ ಸೌಲಭ್ಯಗಳಿಗೆ ಚಾಲನೆ ನೀಡಿ ಸಿಎಂ ಮಾತನಾಡಿದರು.
ಮಲ್ಲೇಶ್ವರಂನ ಈ ಮಾದರಿಯು ದೇಶ ಮತ್ತು ರಾಜ್ಯಕ್ಕೆ ಒಂದು ಮೇಲ್ಪಂಕ್ತಿ ಆಗಿದೆ. ಈ ವರ್ಷ ನಗರದಲ್ಲಿ 20 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೀಗೆಯೇ ನಿರ್ಮಿಸಲಾಗುವುದು. ಜೊತೆಗೆ, ಮುಂದಿನ ಮೂರು ತಿಂಗಳಲ್ಲಿ ನಗರದ 243 ವಾರ್ಡ್ಗಳಲ್ಲೂ ನಮ್ಮ ಕ್ಲಿನಿಕ್ಗಳನ್ನು ಆರಂಭಿಸಲಾಗುವುದು ಎಂದರು.
ಜಯದೇವ ಆಸ್ಪತ್ರೆಯ ನಾಲ್ಕು ಕೇಂದ್ರಗಳನ್ನು ಬೆಂಗಳೂರು ನಗರದಲ್ಲಿ ಸ್ಥಾಪಿಸಲು ಕ್ರಮ ವಹಿಸಲಾಗಿದೆ. ಇವುಗಳ ಪೈಕಿ 50 ಹಾಸಿಗೆಗಳ ಒಂದು ಕೇಂದ್ರವನ್ನು ಮಲ್ಲೇಶ್ವರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ನಿರ್ಮಿಸಲಾಗುತ್ತಿದೆ. ಸದ್ಯದಲ್ಲೇ ಅದನ್ನೂ ಉದ್ಘಾಟನೆ ಮಾಡಲಾಗುವುದು ಎಂದು ಹೇಳಿದರು.