ಬೆಂಗಳೂರು: ಇಂದು ದೇಶದಲ್ಲಿ ಶೇಕಡ 60ರಷ್ಟು ಸಾವುಗಳಿಗೆ ಜೀವನಶೈಲಿಯೇ ಕಾರಣವಾಗಿದೆ. ಚಿಕ್ಕ ವಯಸ್ಸಿನವರಲ್ಲೇ ಮಧುಮೇಹ, ಹೃದ್ರೋಗ, ರಕ್ತದ ಒತ್ತಡ ಕಂಡು ಬರುತ್ತಿದೆ. ಕನಿಷ್ಠಪಕ್ಷ ಎಲ್ಲರೂ ದಿನವೂ ಒಂದು ಗಂಟೆ ಕಾಲ ವಾಕಿಂಗ್ ಮಾಡಬೇಕು ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ ಸಿ ಎನ್ ಮಂಜುನಾಥ್ ಸಲಹೆ ನೀಡಿದರು. ಮಲ್ಲೇಶ್ವರಂ ಕ್ಷೇತ್ರದ ವ್ಯಾಪ್ತಿಯ ಗಾಂಧೀಗ್ರಾಮದಲ್ಲಿ ಉನ್ನತೀಕರಿಸಿದ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪ್ರಧಾನಮಂತ್ರಿ ಜನೌಷಧ ಕೇಂದ್ರ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು ಈ ಸಲಹೆ ನೀಡಿದ್ದಾರೆ
’’ನಾವು ಹಿಂದಿನವರ ಆಹಾರ ಪದ್ಧತಿಯನ್ನು ಅರಿತು ರೂಢಿಸಿ ಕೊಳ್ಳಬೇಕು. ಜನರು ಬೈಸಿಕಲ್ ಮೂಲಕ ಸಂಚಾರ ಮಾಡಬೇಕು. ತಂತ್ರಜ್ಞಾನದ ಇತಿಮಿತಿಗಳನ್ನು ಅರ್ಥ ಮಾಡಿಕೊಂಡು, ಮನುಷ್ಯ ಸಂಬಂಧಗಳಿಗೆ ಮಹತ್ವ ಕೊಡಬೇಕು‘‘ ಎಂದು ಸಿ ಎನ್ ಮಂಜುನಾಥ್ ಕಿವಿಮಾತು ಹೇಳಿದರು. ಭಾರತದಲ್ಲಿ ಶೇ.30 ರಷ್ಟು ಜನರು ಹೃದಯಸಂಬಂಧಿಗೆ ಕಾಯಿಲೆಗೆ ಮೃತರಾಗುತ್ತಿದ್ದಾರೆ. ಉಳಿದಂತೆ ರಕ್ತದೊತ್ತಡ, ಡಯಾಬಿಟಿಸ್, ಕ್ಯಾನ್ಸರ್, ಸ್ಟ್ರೋಕ್ ಕೂಡ ಮಾನವನನ್ನು ಕಾಡುತ್ತಿದೆ. 45 ವರ್ಷದಿಂದ 60 ವರ್ಷದವರಲ್ಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹೃದಯ ಸಂಬಂಧಿ ಕಾಯಿಲೆ ಫ್ಯಾಮಿಲಿ ಹಿಸ್ಟರಿ ಇದ್ದವರೂ ಎಚ್ಚರಿಕೆಯಿಂದ ಇರಬೇಕು. ಅಂಥವರು ಆಗ್ಗಿಂದಾಗೆ ತಪಾಸಣೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಮನುಷ್ಯ ಸಾಧನೆಗೆ ಆರೋಗ್ಯ ಮುಖ್ಯ: ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪ್ರಧಾನಮಂತ್ರಿ ಜನೌಷಧ ಕೇಂದ್ರ ಉದ್ಘಾಟಿಸಿದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳು, 'ಮನುಷ್ಯ ಸಾಧನೆ ಮಾಡಬೇಕು ಎಂದರೆ ದೇಹ ಮುಖ್ಯ. ಇದಕ್ಕಿಂತ ಮನಸ್ಸಿನ ಆರೋಗ್ಯ ಇನ್ನೂ ಮುಖ್ಯ ಎಂದು ಉಪದೇಶಿಸಿದರು.
ಇಂದಿನ ದಿನಗಳಲ್ಲಿ ಒತ್ತಡದ ಬದುಕಿನಲ್ಲಿ ಮನುಷ್ಯ ಆರೋಗ್ಯವನ್ನು ನಿರ್ಲಕ್ಷಿಸುವುದು ಸಮಂಜಸವಲ್ಲ. ಒತ್ತಡದ ಬದುಕಿನಲ್ಲೂ ದಿನನಿತ್ಯ ವ್ಯಾಯಾಮ,ಯೋಗ ಮಾಡಬೇಕು. ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಸಾತ್ವಿಕ ಆಹಾರ ಸೇವಿಸಬೇಕು. ಉತ್ತಮ ಆರೋಗ್ಯದ ಮುಂದೆ ಯಾವುದೇ ಸಂಪತ್ತವೂ ದೊಡ್ಡದಲ್ಲ ಎಂದು ಆಶೀರ್ವಚನ ನೀಡಿದ ಅವರು, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು ಜನಪರ ಕಾಳಜಿಯೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಈ ಆಸ್ಪತ್ರೆ ಸಾಕ್ಷಿಯಾಗಿದೆ' ಎಂದು ತಿಳಿಸಿದರು.