ಬೆಂಗಳೂರು :ಲೋಕಸಭೆಯ ಚುನಾವಣೆ ಮುಗಿದು ಫಲಿತಾಂಶ ಪ್ರಕಟಗೊಳ್ಳುವುದೊಂದೆ ಬಾಕಿ ಇದ್ದು, ಹೀಗಿರುವಾಗಲೇ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಳೆಯಿಂದ ಅಧಿಸೂಚನೆ ಜಾರಿಯಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಅವಧಿ ಮುಗಿದಿರುವ 8 ನಗರಸಭೆಗಳು, 33 ಪುರಸಭೆಗಳು, 22 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ಹಾಗೂ ವಿವಿಧ ಕಾರಣಗಳಿಗಾಗಿ ತೆರವಾಗಿರುವ ಬೆಂಗಳೂರು ನಗರದ ಹೆಬ್ಬಗೋಡಿ ನಗರಸಭೆ ವಾರ್ಡ್ ನಂ.26, ಬೆಳಗಾವಿ ಜಿಲ್ಲೆ ಸದಲಗಾ ಪುರಸಭೆ ವಾರ್ಡ್ ನಂ. 19, ಮುಗಳಖೋಡ ಪುರಸಭೆ ವಾರ್ಡ್ ನಂ.2, ಬಿಬಿಎಂಪಿಯ ಸಗಾಯಿಪುರ ವಾರ್ಡ್ ನಂ.60, ಕಾವೇರಿಪುರದ ವಾರ್ಡ್ ನಂ.103, ತುಮಕೂರು ಮಹಾನಗರ ಪಾಲಿಕೆ ವಾರ್ಡ್ ನಂ.22ಕ್ಕೆ ಉಪಚುನಾವಣೆಗಳು ಘೋಷಣೆಯಾಗಿವೆ.
ಈ ಎಲ್ಲಾ ಕ್ಷೇತ್ರಗಳಿಗೂ ನಾಳೆಯಿಂದ ಅಧಿಸೂಚನೆ ಜಾರಿಯಾಗುತ್ತಿದ್ದು, ಮೇ 16 ರೊಳಗೆ ನಾಮಪತ್ರ ಸಲ್ಲಿಸಲು ಸಮಯವಿದೆ. ಮೇ 17 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ. ಮೇ 29ರಂದು ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅಗತ್ಯವಿದ್ದಲ್ಲಿ ಮೇ 30ರಂದು ಮರು ಮತದಾನ ನಡೆಯಲಿದೆ. ಮೇ 31ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಂಡ ಬಳಿಕ ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ನಗರಸಭೆಯಲ್ಲಿ 2 ಲಕ್ಷ ರೂ., ಪುರಸಭೆಯಲ್ಲಿ ಒಂದೂವರೆ ಲಕ್ಷ ರೂ., ಪಟ್ಟಣ ಪಂಚಾಯ್ತಿಯಲ್ಲಿ ಒಂದು ಲಕ್ಷ, ಬಿಬಿಎಂಪಿಯಲ್ಲಿ 5 ಲಕ್ಷ ರೂ., ಇತರೆ ಪಾಲಿಕೆಗಳಲ್ಲಿ 3 ಲಕ್ಷ ಚುನಾವಣಾ ವೆಚ್ಚವನ್ನು ಮಾಡಬಹುದಾಗಿದೆ.