ಬೆಂಗಳೂರು:ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಬಿ ಖಾತ ನೀಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ವಿಧಾನಸಭೆಯಲ್ಲಿ ತಿಳಿಸಿದರು. ಇಂದು ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕ ಜಿ. ಡಿ ಹರೀಶ್‍ಗೌಡ ಅವರ ಪ್ರಶ್ನೆಗೆ ಪೌರಾಡಳಿತ ಸಚಿವ ರಹಿಂಖಾನ್ ಉತ್ತರಿಸುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಚಿವ ಸುರೇಶ್, ಬೆಂಗಳೂರಿನಲ್ಲಿ ಭೂ ಪರಿವರ್ತನೆಯಾದ ನಿವೇಶನ ಮತ್ತು ಕಟ್ಟಡಗಳಿಗೆ ಎ ಖಾತೆ, ಭೂ ಪರಿವರ್ತನೆಯಾಗದ ಸ್ವತ್ತುಗಳಿಗೆ ಬಿ ಖಾತೆ ನೀಡಲಾಗುತ್ತಿದೆ. ಅದೇ ರೀತಿ ರಾಜ್ಯದ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿ ಖಾತೆಗೆ ಅವಕಾಶ ಕಲ್ಪಿಸಿದರೆ ಸರ್ಕಾರಕ್ಕೂ ಎರಡು ಸಾವಿರ ಕೋಟಿ ಆದಾಯ ಬರಲಿದೆ ಎಂದರು.
ಈ ಸಂಬಂಧ ಪೌರಾಡಳಿತ ಸಚಿವರ ಜತೆ ಚರ್ಚಿಸಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಖಾತೆ ಬಿಕ್ಕಟ್ಟು ಬಹಳಷ್ಟು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇರುವುದರಿಂದ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿದರೂ ಆದಾಯ ಬರುತ್ತಿಲ್ಲ ಎಂದು ಹೇಳಿದರು.
ಇದಕ್ಕೂ ಮುನ್ನ ಉತ್ತರ ನೀಡಿದ ಪೌರಾಡಳಿತ ಸಚಿವ ರಹಿಂಖಾನ್ ಅವರು, ಹುಣಸೂರು ನಗರಸಭೆ ವ್ಯಾಪ್ತಿಯಲ್ಲಿ 81 ಅನಧಿಕೃತ ಬಡಾವಣೆಗಳು ನಿರ್ಮಾಣಗೊಂಡಿವೆ. ಗ್ರಾಮಾಂತರ, ನಗರ ಯೋಜನಾ ಕಚೇರಿಯಿಂದ ಅನುಮೋದನೆಗೊಂಡ ಬಡಾವಣೆ ಗ್ರಾಮಠಾಣಾ ನಿವೇಶನಗಳಿಗೆ ನಮೂನೆ -3 ಅನ್ನು ನೀಡಲಾಗುತ್ತಿದೆ. ಯೋಜನಾ ಇಲಾಖೆಯಿಂದ ಅನುಮೋದನೆಯಾಗದ ಬಡಾವಣೆಗಳಿಗೆ 2018ರ ಜನವರಿ 5 ರಿಂದ ನಮೂನೆ-3 ಅನ್ನು ನೀಡಲು ಅವಕಾಶವಿಲ್ಲ ಎಂದು ಮಾಹಿತಿ ನೀಡಿದರು.
ನಗರಸಭೆ ವ್ಯಾಪ್ತಿಯಲ್ಲಿ ಅಕ್ರಮ ಬಡಾವಣೆಗಳಿಗೆ ಎರಡು ಪಟ್ಟು ತೆರಿಗೆ ಶುಲ್ಕ ಪಾವತಿಸಿಕೊಂಡು ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಇತರ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ. ನಮೂನೆ -3 ನೀಡುವ ವಿಚಾರ ಲೋಕಾಯುಕ್ತದಲ್ಲಿ ಕೇಸು ದಾಖಲಾಗಿದ್ದು, ಹೊಸದಾಗಿ ಕೊಡಬಾರದು ಹಾಗೂ ಈಗಾಗಲೇ ಕೊಟ್ಟಿರುವುದನ್ನು ರದ್ದುಪಡಿಸಬೇಕು ಎಂಬ ನಿರ್ದೇಶನವಿದೆ. ಅಕ್ರಮ - ಸಕ್ರಮ ಯೋಜನೆಗೂ ನ್ಯಾಯಾಲಯದ ತಡೆಯಾಜ್ಞೆ ಇದೆ. ಇದು ಒಂದು ಕ್ಷೇತ್ರಕ್ಕೆ ಸೀಮಿತವಿಲ್ಲ. ನನ್ನ ಕ್ಷೇತ್ರವೂ ಸೇರಿದಂತೆ ಎಲ್ಲ ಕಡೆ ಸಮಸ್ಯೆ ಇದೆ. ಸಂಪುಟ ಉಪಸಮಿತಿ ರಚಿಸಿ ಪರಿಹಾರ ಕಲ್ಪಿಸುವ ಕೆಲಸ ಮಾಡಲಾಗುವುದು ಎಂದರು.
ಒಂದು ಹಂತದಲ್ಲಿ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು ಟಿ ಖಾದರ್, ರಿಯಲ್ ಎಸ್ಟೇಟ್ ಏಜೆಂಟರಿಂದಾಗಿ ಇಂತಹ ಸಮಸ್ಯೆಗಳು ಸೃಷ್ಟಿಯಾಗಿವೆ. ಬಹಳ ವರ್ಷದಿಂದ ಪರಿಹಾರವಾಗದೇ ಉಳಿದಿವೆ ಎಂದು ಹೇಳಿದರು. ನಂತರ ಹರೀಶ್ ಗೌಡ ಮಾತನಾಡಿ, ನಮೂನೆ - 3 ಅನ್ನು ಹಳೆಖಾತೆದಾರರಿಗೆ ನೀಡಬೇಕು. ಅಲ್ಲದೇ ಹುಣಸೂರು ಪಟ್ಟಣದಲ್ಲಿ ಮಳೆ ನೀರಿಗೆ ರಸ್ತೆಯೆಲ್ಲ ಕೊಚ್ಚಿ ಹೋಗಿವೆ. ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿಯ ಶಾಸಕ ಸುನೀಲ್‍ಕುಮಾರ್, ಇದೊಂದು ಗಂಭೀರ ವಿಚಾರವಾಗಿದ್ದು, ರಾಜ್ಯಾದ್ಯಂತ ಸಮಸ್ಯೆ ಇದೆ. ಅರ್ಧ ಗಂಟೆ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದರು. ಕಾಂಗ್ರೆಸ್‍ನ ಎನ್. ಎಚ್. ಕೋನರೆಡ್ಡಿ, ತನ್ವೀರ್ ಸೇಠ್ , ಷಡಕ್ಷರಿ ಸೇರಿದಂತೆ ಹಲವು ಸದಸ್ಯರು ಸಮಸ್ಯೆಗಳ ಕುರಿತು ಮಾತನಾಡಿದರು.