ಬೆಂಗಳೂರು: ಕೇಂದ್ರ ಲೋಕಾಸೇವಾ ಆಯೋಗದ (ಯುಪಿಎಸ್ಸಿ) ಪರೀಕ್ಷೆಗೆ ಸಿದ್ಧತೆ ನಡೆಸುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಬೆಂಗಳೂರು ಹಾಗೂ ದೆಹಲಿಯಲ್ಲಿ ಉಚಿತ ವಸತಿ ವ್ಯವಸ್ಥೆ ಕಲ್ಪಿಸುವ ಬಗ್ಗೆ ಅಗತ್ಯವಾದ ಕ್ರಮ ವಹಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಶುಕ್ರವಾರ ವಿವಿಧ ನಿಗಮದ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಸಚಿವರು ಈ ಸೂಚನೆ ನೀಡಿದರು. ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ದೆಹಲಿ ಮತ್ತು ಬೆಂಗಳೂರಿನಲ್ಲಿ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ಗ್ರಾಮೀಣ ಭಾಗದ ಹಿಂದುಳಿದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಸಂಬಂಧ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ, ವರದಿ ಸಿದ್ಧಪಡಿಸುವಂತೆ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶೇ. 100ರಷ್ಟು ಗುರಿ ಸಾಧಿಸಿ: ಬಜೆಟ್ ನಲ್ಲಿ ಇಲಾಖೆಗೆ ನೀಡಲಾಗಿರುವ ಹಣವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಮಾರ್ಚ್ ವೇಳೆಗೆ ಶೇ.100ರಷ್ಟು ಗುರಿ ಸಾಧಿಸಬೇಕು. ಮಾರ್ಚ್ ತಿಂಗಳ ವರೆಗೆ ಹಣ ಉಳಿಸಿಕೊಂಡು ತರಾತುರಿಯಲ್ಲಿ ಹಣ ವ್ಯಯಿಸುವ ಕೆಲಸ ಆಗಬಾರದು. ಅವಧಿಗೂ ಮುನ್ನ ಬಳಕೆ ಮಾಡಿದರೆ ಮುಖ್ಯಮಂತ್ರಿಗಳ ಬಳಿ ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಪ್ರಸ್ತುತ ಕ್ಷೇತ್ರದಲ್ಲಿ ಆಯಾ ಶಾಸಕರು ಕಳುಹಿಸುತ್ತಿರುವುದು ತಡವಾಗುತ್ತಿದೆ ಎಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಕೂಡಲೇ ಶಾಸಕರಿಗೆ ನವೆಂಬರ್ ಒಳಗೆ ಯೋಜನೆಯ ಫಲಾನುಭವಿಗಳ ಆಯ್ಕೆ ಪಟ್ಟಿ ಸಿದ್ಧಪಡಿಸಿ ಕಳುಹಿಸುವಂತೆ ಪತ್ರ ಬರೆಯಿರಿ ಎಂದು ಸಲಹೆ ನೀಡಿದರು.