ಕರ್ನಾಟಕ

karnataka

By

Published : Jul 19, 2023, 8:25 PM IST

ETV Bharat / state

ಪರಿಷತ್​ನಲ್ಲೂ ಐಎಎಸ್ ಅಧಿಕಾರಿಗಳ ಬಳಕೆ ವಿಚಾರಕ್ಕೆ ಗದ್ದಲ; ಕಲಾಪ ಮುಂದೂಡಿಕೆ

ಕಾಂಗ್ರೆಸ್​ ಖಾಸಗಿ ಕಾರ್ಯಕ್ರಮಕ್ಕೆ ಐಎಎಸ್ ಅಧಿಕಾರಿಗಳ ಬಳಕೆ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್​ ಶಾಸಕರ ನಡುವೆ ವಾಗ್ವಾದ ನಡೆದಿದೆ.

ವಿಧಾನ ಪರಿಷತ್
ವಿಧಾನ ಪರಿಷತ್

ಬೆಂಗಳೂರು : ವಿಧಾನ ಪರಿಷತ್ ಕಲಾಪದಲ್ಲಿಯೂ ಸಹ ಕೇಂದ್ರ ಪ್ರತಿಪಕ್ಷ ನಾಯಕರ ಸಭೆಗೆ ಆಗಮಿಸಿದ ಗಣ್ಯರ ಆಹ್ವಾನಕ್ಕೆ ಐಎಎಸ್ ಅಧಿಕಾರಿ ಬಳಕೆ ಮಾಡಿಕೊಂಡಿರುವ ವಿಚಾರ ಪ್ರಸ್ತಾಪವಾಗಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಕಾಂಗ್ರೆಸ್ ಕಾರ್ಯಕ್ರಮಕ್ಕೆ ಐಎಎಸ್ ಅಧಿಕಾರಿಗಳ ಬಳಕೆ ಸರಿಯಲ್ಲ ಎಂದು ಪ್ರತಿಪಕ್ಷ ನಾಯಕರು ಕಿಡಿಕಾರಿದರು.

ಆಡಳಿತ-ಪ್ರತಿಪಕ್ಷ ಶಾಸಕರು ವಾಗ್ವಾದ ನಡೆಸಿದಾಗ ನಿಮಗೆ ಈ ವಿಚಾರದ ಮೇಲೆ ಚರ್ಚೆಗೆ ಅವಕಾಶ ನೀಡುತ್ತೇನೆ. ಬರವಣಿಗೆಯಲ್ಲಿ ನೀಡಿ. ಸೂಕ್ತ ನಿಯಮದ ಅಡಿ ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ. ಪೀಠದಿಂದ ಚರ್ಚೆಗೆ ಅವಕಾಶದ ಭರವಸೆ ನೀಡುತ್ತೇನೆ ಎಂದು ಸಭಾಪತಿ ಪೀಠದಲ್ಲಿದ್ದ ಪ್ರಾಣೇಶ್ ಭರವಸೆ ಕೊಟ್ಟರು.

ಆದರೆ, ಸಮಾಧಾನಗೊಳ್ಳದ ಬಿಜೆಪಿ ಸದಸ್ಯರು ನಮಗೆ 10 ನಿಮಿಷ ವಿಷಯ ಪ್ರಸ್ತಾಪಕ್ಕೆ ಅವಕಾಶ ಮಾಡಿಕೊಡಿ. ಗಂಭೀರ ವಿಚಾರ ಇದು. ಯಾವುದೇ ಹುದ್ದೆ ಇಲ್ಲದ ನಾಯಕರ ಆಹ್ವಾನಕ್ಕೆ 40 ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡಿದ್ದು ಏಕೆ? ನಾವು ಇದನ್ನು ಸಹಿಸಲ್ಲ ಎಂದು ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ಆರಂಭಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಈ ಸಂದರ್ಭದಲ್ಲಿ ಸಭಾಪತಿಗಳು ಕಲಾಪವನ್ನು 10 ನಿಮಿಷ ಮುಂದೂಡಿದರು. ಕಲಾಪ ಮರು ಆರಂಭವಾದಾಗಲೂ ಬಿಜೆಪಿ ಶಾಸಕರ ಹೋರಾಟ ಮುಂದುವರಿಯಿತು. ಸಭಾಪತಿಗಳು ಮನವೊಲಿಸುವ ಯತ್ನ ಮಾಡಿದರು. ಇದರಿಂದ ಬಜೆಟ್ ಮೇಲೆ ಮಾತನಾಡಬೇಕಿದ್ದ ಕಾಂಗ್ರೆಸ್ ಶಾಸಕ ಮಂಜುನಾಥ್ ಭಂಡಾರಿ ತಮ್ಮ ಅವಕಾಶಕ್ಕಾಗಿ ಕಾಯುತ್ತಲೇ ಕೂರಬೇಕಾಗಿ ಬಂತು.

ಸಭಾಪತಿಗಳು ಈ ವೇಳೆ ಸ್ಥಳಕ್ಕೆ ತೆರಳಿ ಮಾತುಕತೆ ನಡೆಸೋಣ. ಗದ್ದಲ ಬೇಡ. ಸದ್ಯ ಬಜೆಟ್ ಮೇಲೆ ಚರ್ಚೆ ನಡೆಯುತ್ತಿದೆ. ಬೇರೆ ಅವಕಾಶ ಲಭಿಸಲಿದೆ, ನಿಮ್ಮ ಸ್ಥಳಕ್ಕೆ ಬನ್ನಿ ಎಂದರು. ಬಿಜೆಪಿ ನಾಯಕರು ಒಪ್ಪಲಿಲ್ಲ. ಗದ್ದಲ ಮುಂದುವರಿಯಿತು. ಕಾಂಗ್ರೆಸ್ ಶಾಸಕ ಮತ್ತು ಸಚಿವರು ಸಹ ಪರಿಸ್ಥಿತಿ ನಿಯಂತ್ರಿಸುವಂತೆ ಸಭಾಪತಿಗಳ ಮೇಲೆ ಒತ್ತಡ ಹೇರಿದರು. ಕೋಟಾ ಶ್ರೀನಿವಾಸ ಪೂಜಾರಿ, ವೈಎ. ನಾರಾಯಣಸ್ವಾಮಿ ನಮಗೆ ಅವಕಾಶ ಬೇಕು. ಐಎಎಸ್ ಅಧಿಕಾರಿ ಬಳಸಿಕೊಂಡಿದ್ದಕ್ಕೆ ಸರ್ಕಾರ ಕ್ಷಮೆ ಕೋರಬೇಕು ಎಂದರು.

ಸದನ ನಡೆಯಲು ಅವಕಾಶ ನೀಡಿ ಎಂದು ಸಭಾಪತಿಗಳು ಪದೇ ಪದೆ ಮನವಿ ಮಾಡಿದರು. ಸದನದ ಸಮಯ ಹಾಳು ಮಾಡಬೇಡಿ. ಈಗ ಸಮಯ ಕೇಳುವುದು, ಬಾವಿಗಿಳಿಯುವುದು ಸರಿಯಲ್ಲ. ಬಾವಿಯೊಳಗೆ ಇದ್ದಾಗ ಮಾತನಾಡಿದ ಯಾವ ವಿಚಾರವೂ ಕಡತಕ್ಕೆ ಹೋಗಲ್ಲ ಎಂದು ಹೇಳಿದರು. ಇದು ಯಾವುದು ಪ್ರಯೋಜನಕ್ಕೆ ಬಾರದೆ ಆಡಳಿತ ಹಾಗೂ ಪ್ರತಿಪಕ್ಷ ಶಾಸಕರ ವಾಗ್ವಾದ ಹೆಚ್ಚಾಯಿತು.

ಪ್ರತಿಪಕ್ಷಗಳು ನಡೆಸಿರುವ ಗದ್ದಲಕ್ಕೆ ಆಡಳಿತ ಪಕ್ಷದ ಪ್ರತಿಕ್ರಿಯೆಯನ್ನು ಸಭಾಪತಿಗಳು ಕೇಳಿದರು. ಸಭಾನಾಯಕರು ಎದ್ದು ನಿಂತು ಯಾವ ನಿಯಮದ ಅಡಿ ಮಾತನಾಡುತ್ತಿದ್ದಾರೆ. ನೀವು ಯಾವ ರೀತಿ ಅವಕಾಶ ನೀಡಿದ್ದೀರಿ ಎಂದು ಪ್ರಶ್ನಿಸಿದರು. ನಂತರ ಜೆಡಿಎಸ್ ಶಾಸಕ ಭೋಜೇಗೌಡರನ್ನು ಮಾತನಾಡುವಂತೆ ಆಹ್ವಾನಿಸಿದರು. ಗದ್ದಲ ಹೆಚ್ಚಾದ ಹಿನ್ನೆಲೆ ಸದನವನ್ನು ಮತ್ತೆ 10 ನಿಮಿಷ ಮುಂದೂಡಿದರು.

ಮತ್ತೆ ಆರಂಭವಾದ ಕಲಾಪದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಆಗಮಿಸಿ, ನಾರಾಯಣ ಸ್ವಾಮಿ ಅವರೇ ನಿಮ್ಮ ಮಾತು ಏನು, ವಿವರಿಸಿ ಎಂದರು. ಖಾಸಗಿ ಕಾರ್ಯಕ್ರಮಕ್ಕೆ ಬೇರೆ ರಾಜ್ಯದವರು ಆಗಮಿಸಿದ್ದರು. ಅವರು ಬಂದಿದ್ದಕ್ಕೆ ವಿರೋಧ ಇಲ್ಲ. ಆದರೆ ಅವರ ಶಿಷ್ಟಾಚಾರಕ್ಕೆ 30 ಐಎಎಸ್ ಅಧಿಕಾರಿ ನಿಯೋಜಿಸಿದ್ದು ಸರಿಯಲ್ಲ. ಕ್ಷಮೆ ಕೇಳಬೇಕು ಎಂದರು.

ಇದಕ್ಕೆ ಉತ್ತರಿಸಿದ ಸಭಾನಾಯಕ ಭೋಸರಾಜು, ಶಿಷ್ಟಾಚಾರದಲ್ಲಿ ಈ ಅವಕಾಶ ಇದೆ. ಅದನ್ನೇ ಬಳಸಿ ಐಎಎಸ್ ಅಧಿಕಾರಿ ನಿಯೋಜಿಸಿದೆ. ಇದರಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ ಎಂದರು. ಈ ಉತ್ತರ ನಿಮಗೆ ಸಮಾಧಾನ ತಂದಿದೆಯಾ ಎಂಬ ಸಭಾಪತಿಗಳ ಪ್ರಶ್ನೆಗೆ ನಾರಾಯಣಸ್ವಾಮಿ ಇಲ್ಲ. ಸಮಾಧಾನ ಆಗಿಲ್ಲ ಎಂದರು. ಪುನಃ ಸಭಾಪತಿಗಳು ಕಲಾಪವನ್ನು ನಾಳೆ ಬೆಳಗ್ಗೆ 10 ಕ್ಕೆ ಮುಂದೂಡಿದರು.

ಇದನ್ನೂ ಓದಿ :ವಿಧಾನಸೌಧದಲ್ಲಿ ಶಾಸಕ ಯತ್ನಾಳ್ ಅಸ್ವಸ್ಥ: ಸ್ಟ್ರೆಚರ್​ನಲ್ಲಿ ಕೊಂಡೊಯ್ದ ಮಾರ್ಷಲ್​ಗಳು

ABOUT THE AUTHOR

...view details