ಬೆಂಗಳೂರು:ಉಪ ಸಭಾಪತಿ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಸೌಜನ್ಯಕ್ಕೂ ನಮ್ಮ ಬೆಂಬಲ ಕೇಳಲಿಲ್ಲ. ಸಭಾಪತಿ ಸ್ಥಾನಕ್ಕೆ ಮೇಲ್ವರ್ಗದ ವ್ಯಕ್ತಿಯ ಸ್ಪರ್ಧೆ ಕಾರಣಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲವೇ ಎಂದು ಜೆಡಿಎಸ್ ನಾಯಕ ಬೋಜೇಗೌಡ ವಿವಾದಾತ್ಮಕ ಹೇಳಿಕೆ ನೀಡಿದರು. ಇದು ಸದನದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಸದಸ್ಯರ ಸಂಘರ್ಷಕ್ಕೆ ಕಾರಣವಾಯಿತು.
ಇಂದು ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಉಪ ಸಭಾಪತಿ ಚುನಾವಣಾ ಪ್ರಸ್ತಾಪ ಕೈಗೊಳ್ಳುವ ಮುನ್ನ ಜೆಡಿಎಸ್ ನಾಯಕ ಬೋಜೇಗೌಡ ಮಾತನಾಡಿದರು. ಆಡಳಿತ ಪಕ್ಷ ಸಭಾಪತಿ ಸ್ಥಾನವನ್ನು ಪಡೆದಾಗ ಉಪ ಸಭಾಪತಿ ಸ್ಥಾನ ಪ್ರತಿಪಕ್ಷಕ್ಕೆ ಸೌಜನ್ಯಕ್ಕೆ ಬಿಟ್ಟುಕೊಡುವ ಪರಂಪರೆ ಇದೆ, ಅದನ್ನು ಮುಂದುವರೆಸಬೇಕು ಅಥವಾ ಸೌಜನ್ಯಕ್ಕಾದರೂ ನಮ್ಮನ್ನು ಸಹಕಾರ ಕೇಳಿದ್ದರೆ ಗೌರವ ಇರುತ್ತಿತ್ತು. ಆದರೆ ಅದನ್ನು ಮಾಡಲಿಲ್ಲ. ಇನ್ನು ಉಪ ಸಭಾಪತಿ ಸ್ಥಾನದ ಚುನಾವಣೆಗೆ ಕಾಂಗ್ರೆಸ್ನಿಂದ ಅಭ್ಯರ್ಥಿ ಸ್ಪರ್ಧೆ ಮಾಡಿದ್ದಾರೆ. ಆದರೆ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ಯಾಕೆ ನಾಮಪತ್ರ ಹಾಕಿರಲಿಲ್ಲ. ಸಭಾಪತಿ ಮೇಲ್ವರ್ಗದವರು ಎಂದು ವಿನಾಯಿತಿ ನೀಡಿದರಾ, ಉಪ ಸಭಾಪತಿ ಬೇರೆ ವರ್ಗ ಎಂದು ಸ್ಪರ್ಧೆನಾ ಎಂದು ಪ್ರಸ್ತಾಪಿಸಿದರು. ಬೋಜೇಗೌಡರ ಹೇಳಿಕೆಗೆ ಸದನದಲ್ಲಿ ಗದ್ದಲವಾಯಿತು. ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಮನಸ್ಸಿನಲ್ಲಿ ಏನಿದೆಯೋ ಅದನ್ನು ಹೇಳಿಕೊಳ್ಳುವ ಸಂಪೂರ್ಣ ಅಧಿಕಾರ ಪ್ರತಿಯೊಬ್ಬ ಸದಸ್ಯರಿಗೂ ಇದೆ. ಆದರೆ ಸಭಾಪತಿ ಬಗ್ಗೆ ಮೇಲ್ವರ್ಗ ಉಪ ಸಭಾಪತಿ ಇತರ ವರ್ಗ ಎಂದು ಹೇಳಿಕೆ ನೀಡಿದ್ದು ಸರಿಯಲ್ಲ. ಇದು ಒಳ್ಳೆಯ ಸಂಪ್ರದಾಯವಲ್ಲ. ಇಂತಹದ್ದನ್ನು ಬಿಟ್ಟು ಮಾತನಾಡಲಿ ಎಂದು ಸಲಹೆ ನೀಡಿದರು.
ಇದಕ್ಕೆ ದನಿಗೂಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ನಿಮ್ಮ ನಿಲುವು ವ್ಯಕ್ತಪಡಿಸುವಾಗ ನನಗೆ ಜಾತಿ ಬಣ್ಣ ಹಚ್ಚಬೇಡಿ ಎಂದರು. ನಂತರ ಕಾಂಗ್ರೆಸ್ ಸದಸ್ಯ ಯು ಬಿ ವೆಂಕಟೇಶ್ ಮಾತನಾಡಿ, ನಿಮ್ಮ ಪಕ್ಷದ ಬಗ್ಗೆ ನೀವು ಮಾತನಾಡಿ ನಮ್ಮ ಪಕ್ಷದ ಬಗ್ಗೆ ಯಾಕೆ ಮಾತನಾಡುತ್ತೀರಿ ಎಂದರು. ಈ ವೇಳೆ ಬೋಜೇಗೌಡ ಹಾಗು ವೆಂಕಟೇಶ್ ನಡುವೆ ವಾಗ್ವಾದ ಏರ್ಪಟ್ಟು, ಸಭಾಪತಿ ಸ್ಥಾನ ಬಿಟ್ಟು ಉಪ ಸಭಾಪತಿ ಸ್ಥಾನಕ್ಕೆ ಮಾತ್ರ ಯಾಕೆ ಅರ್ಜಿ ಹಾಕಿದಿರಿ ಈಗ ಎಂದು ಬೋಜೇಗೌಡ ಕಿಡಿ ಕಾರಿದರು.