ಬೆಂಗಳೂರು:ಪರಿಶಿಷ್ಟ ಪಂಗಡದ ಮೀಸಲು ಸಂಬಂಧ ಸದನದಲ್ಲಿ ಚರ್ಚೆಗೆ ಅವಕಾಶ ಕೊಡಬೇಕು ಎಂದು ಕಾಂಗ್ರೆಸ್ ಸದಸ್ಯ ಕಂಪ್ಲಿ ಗಣೇಶ್ ಸೇರಿದಂತೆ ಕೆಲವು ಸದಸ್ಯರು ಏಕಾಏಕಿ ಎದ್ದು ನಿಂತು ಪ್ರಸ್ತಾಪಿಸಿದ ಪರಿಣಾಮ ವಿಧಾನಸಭೆಯಲ್ಲಿ ಗದ್ದಲ, ವಾಗ್ವಾದಕ್ಕೆ ಕಾರಣವಾಯಿತು.
ವಿಧಾನಸಭೆ ಪ್ರಶ್ನೋತ್ತರ ಅವಧಿ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯ ಗಣೇಶ್ ಅವರು ಎದ್ದು ನಿಂತು ಎಸ್ಟಿ ಮೀಸಲಾತಿ ಹೆಚ್ಚಳ ಸಂಬಂಧ ಚರ್ಚೆಗೆ ಅವಕಾಶ ಕೊಡಿ ಎಂದು ಒತ್ತಾಯಿಸಿದರು. ಇದರಿಂದ ಸಿಟ್ಟಿಗೆದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಏನಿದು ಯಾವುದೇ ನೋಟಿಸ್ ನೀಡದೆ ಏಕಾಏಕಿ ಎದ್ದು ನಿಂತು ಚರ್ಚೆಗೆ ಅವಕಾಶ ಕೊಡಿ ಎಂದರೆ ಹೇಗೆ ಎಂದು ಸಿಟ್ಟಿನಿಂದ ಹೇಳಿದರು.
ಇದಕ್ಕೆ ಜಗ್ಗದ ಗಣೇಶ್, ಮೀಸಲಾತಿ ಹೆಚ್ಚಳ ಸಂಬಂಧ ನಾಯಕ ಸಮುದಾಯದ ಸ್ವಾಮೀಜಿ ಅವರು 200ಕ್ಕೂ ಹೆಚ್ಚು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಕೂಡಲೇ ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದು ಬಾವಿಗಿಳಿದು ಧರಣಿಗೆ ಮುಂದಾದರು. ಆಗ ಕೆಲ ಸದಸ್ಯರು ಸಾಥ್ ನೀಡಿದರು.
ಈ ವೇಳೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಮಾತನಾಡಿ, ಹೀಗೆ ನೋಟಿಸ್ ನೀಡದೇ ಸ್ಪೀಕರ್ ಅವರಿಗೆ ಅವಕಾಶ ಕೊಡಿ ಎಂದು ಕೇಳುವುದು ಸರಿಯಲ್ಲ. ಸದನದ ನಿಯಮಾವಳಿಗಳಂತೆ ನಡೆದುಕೊಳ್ಳಿ ಎಂದು ಏರು ಧ್ವನಿಯಲ್ಲಿ ಹೇಳಿದರು. ಈ ಹಂತದಲ್ಲಿ ಸದನದಲ್ಲಿ ಗದ್ದಲದ ವಾತಾವರಣ ರೂಪುಗೊಂಡಿತು.