ಬೆಂಗಳೂರು:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಉಪಕ್ರಮಗಳಿಗೆ ಉತ್ತರ ಪ್ರದೇಶ ಸರ್ಕಾರ ಫಿದಾ ಆಗಿದೆ. ಸಾಮಾನ್ಯ ಸಾರಿಗೆ ಹಾಗು ಪ್ರೀಮಿಯಂ ಸೇವೆಗಳೆರಡರ ನಿರ್ವಹಣೆಗೂ ಮಾರುಹೋಗಿದ್ದು ಯುಪಿಆರ್ಟಿಸಿ ನಿಯೋಗದ ಬಳಿಕ ಯುಪಿ ಸರ್ಕಾರದ ಅಧಿಕಾರಿಗಳ ನಿಯೋಗವೇ ಕೆಎಸ್ಆರ್ಟಿಸಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದೆ. ಎಲ್ಲೆಡೆ ಯುಪಿ ಮಾಡೆಲ್ ಎನ್ನುವ ಚರ್ಚೆಯ ನಡುವೆ ಯುಪಿಯಲ್ಲೇ ಕರ್ನಾಟಕ ಮಾಡೆಲ್ನ ಚಿಂತನೆ ನಡೆದಿದ್ದು ಕುತೂಹಲ ಮೂಡಿಸಿದೆ.
ಉತ್ತರ ಪ್ರದೇಶ ಸರ್ಕಾರದ ಹಿರಿಯ ಅಧಿಕಾರಿಗಳ ತಂಡದ ನಿಯೋಗ ಕೆಎಸ್‌ಆರ್‌ಟಿಸಿಗೆ ಭೇಟಿ ನೀಡಿತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಲಹೆಗಾರ ಡಾ.ಕೆ.ವಿ.ರಾಜು, ಯುಪಿ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್. ವೆಂಕಟೇಶ್ವರಲು ಹಾಗೂ ಉದ್ಯಮಶೀಲತೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಂ.ಕೆ.ಷಣ್ಮುಗ ಸುಂದರಂ ಸೇರಿದಂತೆ ಅಧಿಕಾರಿಗಳ ತಂಡವು ಶಾಂತಿನಗರದಲ್ಲಿರುವ ನಿಗಮದ ಕೇಂದ್ರ ಕಚೇರಿಗೆ ಭೇಟಿ ನೀಡಿ ನಿಗಮದಲ್ಲಿ ಅನುಷ್ಠಾನಗೊಳಿಸಿರುವ ಉಪಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರ ಪಡೆದರು.
ಸಾರಿಗೆ ರಾಮಲಿಂಗಾರೆಡ್ಡಿ, ಕೆಎಸ್‌ಆರ್‌ಟಿಸಿ ಎಂಡಿ ವಿ.ಅನ್ಬುಕುಮಾರ್, ಯುಪಿ ನಿಯೋಗಕ್ಕೆ ಅಗತ್ಯ ಮಾಹಿತಿ ಒದಗಿಸಿದರು. ನಂತರ ತಂಡ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-4ಕ್ಕೆ ಭೇಟಿ ನೀಡಿ, ನಿಗಮದ ಪ್ರತಿಷ್ಟಿತ ವಾಹನಗಳಾದ ಐರಾವತ ಕ್ಲಬ್ ಕ್ಲಾಸ್, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ ವಾಹನಗಳ ಕಾರ್ಯಾಚರಣೆ, ತಾಂತ್ರಿಕ ನಿರ್ವಹಣೆಯ ಬಗ್ಗೆ ಮಾಹಿತಿ ಹಾಗೂ ಎಲೆಕ್ಟ್ರಿಕ್ ಬಸ್‌ಗಳ ಘಟಕ ಮತ್ತು ಚಾರ್ಜಿಂಗ್ ಸ್ಟೇಷನ್ಗೆ ಭೇಟಿ ಕೊಟ್ಟಿತು. ಪ್ರೀಮಿಯಂ ಸೇವೆಗಳ ಉಪಕ್ರಮಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸೆಪ್ಟೆಂಬರ್ ಆರಂಭದಲ್ಲಿ ಉತ್ತರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ತಂಡ ಕೆಎಸ್‌ಆರ್ಟಿಸಿ ಕಚೇರಿಗೆ ಭೇಟಿ ನೀಡಿ, ಎರಡು ದಿನಗಳ ಕಾಲ ನಿಗಮದ ಸಮಗ್ರ ಕಾರ್ಯಾಚರಣೆ, ನಿರ್ವಹಣಾ ವಿಧಾನವನ್ನು ಅಧ್ಯಯನ ಮಾಡಿ ಹೊಸ ಹೊಸ ಪ್ರಯೋಗಗಳು, ಡೀಸೆಲ್ ಜೊತೆ ಬಯೋಡೀಸೆಲ್ ವಾಹನ, ವಿದ್ಯುತ್ ವಾಹನ ಪರಿಚಯಿಸಿ ಕಾರ್ಯಾಚರಣೆ ನಡೆಸುತ್ತಿರುವ ಕುರಿತು ಯುಪಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.