ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 2ರಂದು (ನಾಳೆ) ಮಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಇದಕ್ಕೂ ಒಂದು ದಿನ ಮುಂಚಿತವಾಗಿಯೇ ಅಂದರೆ ಸೆಪ್ಟೆಂಬರ್ 1ರಂದು (ಇಂದು) ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒಂದು ದಿನದ ಮಟ್ಟಿಗೆ ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ನೆಲಮಂಗಲ ಬಳಿ ಇರುವ ಧರ್ಮಸ್ಥಳದ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಲಿದ್ದು, ಮಧ್ಯಾಹ್ನ 12 ಗಂಟೆಗೆ ನೂತನ ಪ್ರಕೃತಿ ಚಿಕಿತ್ಸಾ ಕೇಂದ್ರ ಕ್ಷೇಮವನದ ಉದ್ಘಾಟನೆ ನೆರವೇರಿಸುವರು.
ರಾಜ್ಯಸಭಾ ಸದಸ್ಯರಾಗಿ ಹೊಸದಾಗಿ ನೇಮಕಗೊಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರ ಮನವಿ ಮೇರೆಗೆ ಯುಪಿ ಸಿಎಂ ರಾಜ್ಯಕ್ಕೆ ಅಗಮಿಸುತ್ತಿದ್ದಾರೆ. ಇಂದು ಬೆಳಗ್ಗೆ ಉತ್ತರ ಪ್ರದೇಶದಿಂದ ಹೊರಟು ಮಧ್ಯಾಹ್ನ 11.30ಕ್ಕೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಅಗಮಿಸುವರು, ನಂತರ 11.55ಕ್ಕೆ ಎಸ್ಡಿಎಮ್ ಕೇಂದ್ರಕ್ಕೆ ತೆರಳಲಿದ್ದಾರೆ. ಈ ಸಮಾರಂಭದ ಬಳಿಕ ಆದಿತ್ಯನಾಥ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸೌಹಾರ್ದಯುತ ಮಾತುಕತೆ ನಡೆಸಲಿದ್ದಾರೆ.
ನಾಳೆ ಕರ್ನಾಟಕಕ್ಕೆ ಪಿಎಂ ಮೋದಿ ಭೇಟಿ: ನಾಳೆ ಮಂಗಳೂರಿನಲ್ಲಿ ಪ್ರಧಾನಿ ಮೋದಿ ಸುಮಾರು 3,800 ಕೋಟಿ ರೂಪಾಯಿ ವೆಚ್ಚದ ಯಾಂತ್ರೀಕರಣ ಮತ್ತು ಕೈಗಾರಿಕೀಕರಣ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿರುವರು. ಇದಕ್ಕಾಗಿ ಈಗಾಗಲೇ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಲ್ಲದೇ, ಎಸ್ಪಿಜಿ ತಂಡ ಪರಿಶೀಲನೆ ನಡೆಸಿ, ಭದ್ರತಾ ವ್ಯವಸ್ಥೆಗಳ ಮೇಲೆ ವಿಶೇಷ ನಿಗಾ ಇರಿಸಿದೆ.
ಓದಿ:ಲಂಪಿ ವೈರಸ್ ಹಾವಳಿ: ಜಾನುವಾರು ಜಾತ್ರೆ ನಿರ್ಬಂಧಿಸಿದ ಸರ್ಕಾರ