ಬೆಂಗಳೂರು :ರಾಜ್ಯದಲ್ಲಿ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಮತದಾರರ ಓಲೈಕೆಗಾಗಿ ನಾನಾ ಕಸರತ್ತು ನಡೆಸುತ್ತಿದ್ದಾರೆ. ಇತ್ತ ಬಿಜೆಪಿ ಸರ್ಕಾರ ತನ್ನ ಹಲವು ಚುನಾವಣಾ ರಾಜಕೀಯ ಪೈಕಿ ಇದೀಗ ಪ್ರತಿಮೆಗಳ ಅನಾವರಣ ಪಾಲಿಟಿಕ್ಸ್ ಮೂಲಕ ಮತಬೇಟೆಗೆ ಇಳಿದಿದೆ.
ಚುನಾವಣೆ ಬಂತೆಂದರೆ ಸಾಕು ಅಧಿಕಾರದಲ್ಲಿರುವ ಸರ್ಕಾರ ನಾನಾ ಯೋಜನೆಗಳನ್ನು ತರಾತುರಿಯಲ್ಲಿ ಮುಗಿಸಿ ಉದ್ಘಾಟನೆ ಮಾಡುತ್ತೆ. ಆ ಮೂಲಕ ಆ ಕ್ಷೇತ್ರದ, ಪ್ರದೇಶದ ಜನರ ಮತ ಸೆಳೆಯಲು ಮುಂದಾಗುತ್ತದೆ. ರಾಜಕೀಯ ಪಕ್ಷಗಳು ಮತಪ್ರಭುಗಳ ಓಲೈಕೆಗಾಗಿ ಹತ್ತು ಹಲವು ತಂತ್ರಗಾರಿಕೆಗಳನ್ನು ನಡೆಸುತ್ತವೆ. ರಾಜ್ಯದಲ್ಲೂ ಇದೀಗ ರಾಜಕೀಯ ಪಕ್ಷಗಳ ಮತದಾರರನ್ನು ಸೆಳೆಯಲು ಕ್ರಿಯಾತ್ಮಕ, ನಾನಾ ಕಸರತ್ತು ಪ್ರಾರಂಭಿಸಿವೆ. ಇತ್ತ ಬಿಜೆಪಿ ಸರ್ಕಾರ ನೀತಿ ಸಂಹಿತೆ ಜಾರಿಯಾಗುವ ಮುನ್ನ ವಿವಿಧ ಯೋಜನೆಗಳ ಉದ್ಘಾಟನೆಗಳ ಮೊರೆ ಹೋಗಿದೆ.
ಸರ್ಕಾರದಿಂದ ಸಾಲು ಸಾಲು ಪ್ರತಿಮೆ ಅನಾವರಣ :ಮತದಾರರನ್ನು ತನ್ನ ಕಡೆಗೆ ಸೆಳೆಯುವ ಪರಿಣಾಮಕಾರಿ ಚುನಾವಣಾ ತಂತ್ರಗಾರಿಕೆ ನಡೆಸುತ್ತಿದೆ. ಅದುವೇ ಪ್ರತಿಮೆಗಳ ಅನಾವರಣ ಪಾಲಿಟಿಕ್ಸ್. ಕಳೆದ ಎರಡು ಮೂರು ತಿಂಗಳಿಂದ ಬಿಜೆಪಿ ಸರ್ಕಾರ ಒಂದರ ಮೇಲೊಂದರಂತೆ ಪ್ರತಿಮೆಗಳ ಅನಾವರಣ ಮಾಡುತ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಇತಿಹಾಸ ಪುರಷರ, ಸಮಾಜ ಸುಧಾರಕರ, ಹೋರಾಟಗಾರರ ಹಾಗೂ ಸಮುದಾಯದ ಆರಾಧ್ಯ ವ್ಯಕ್ತಿಗಳ ಬೃಹತ್ ಪ್ರತಿಮೆಗಳನ್ನು ಅನಾವರಣ ಮಾಡುವ ಮೂಲಕ ಸಮುದಾಯದ ಮತ್ತು ಪ್ರದೇಶವಾರು ಮತಬೇಟೆಗೆ ಇಳಿದಿದ್ದಾರೆ. ಈವರೆಗೆ ಸುಮಾರು 13ಕ್ಕೂ ಹೆಚ್ಚು ಪ್ರತಿಮೆ ಅನಾವರಣವನ್ನು ಸಿಎಂ ಬೊಮ್ಮಾಯಿ ನೆರವೇರಿಸಿದ್ದಾರೆ.
ನಾಡಪ್ರಭು ಕೆಂಪೇಗೌಡ ಪ್ರತಿಮೆ :ಕಳೆದ ವರ್ಷ ನವೆಂವರ್ನಲ್ಲಿ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡುವ ಮೂಲಕ ಬಿಜೆಪಿ ಸರ್ಕಾರ ಪ್ರತಿಮೆ ಅನಾವರಣ ಸರಣಿಗೆ ಮುಂದಡಿ ಇಟ್ಟಿತು. ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆಯನ್ನು ಮೋದಿ ಅನಾವರಣಗೊಳಿಸಿದ್ದರು. ಆ ಮೂಲಕ ಬೆಂಗಳೂರು ಹಾಗೂ ಹಳೆ ಮೈಸೂರು ಪ್ರದೇಶದಲ್ಲಿನ ಒಕ್ಕಲಿಗ ಸಮುದಾಯದವರನ್ನು ತಮ್ಮತ್ತ ಸೆಳೆಯುವ ತಂತ್ರ ರೂಪಿಸಿತು. ಅಲ್ಲಿಂದ ಬಿಜೆಪಿ ಸರ್ಕಾರದ ಪ್ರತಿಮೆ ಅನಾವರಣ ಪೊಲಿಟಿಕ್ಸ್ ತೀವ್ರವಾಯಿತು.
ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ :ಇತ್ತ ಬೆಳಗಾವಿಯ ಮರಾಠಿ ಮತದಾರರ ಓಲೈಕೆಗಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡ ಕೋಟೆ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 36 ಅಡಿ ಎತ್ತರದ ಪ್ರತಿಮೆಯನ್ನು ಮಾ.2 ರಂದು ಸಿಎಂ ಬಸವರಾಜ್ ಬೊಮ್ಮಾಯಿ ಅನಾವರಣ ಗೊಳಿಸಿದ್ದರು. ರಾಜಕೀಯವಾಗಿ ಮಹತ್ವದ್ದೆನಿಸಿದ ಈ ಶಿವಾಜಿ ಪ್ರತಿಮೆ ಲೋಕಾರ್ಪಣೆ ಮಾಡುವ ಮೂಲಕ ಬಿಜೆಪಿ ಜಿಲ್ಲೆಯ ಮರಾಠ ಮತದಾರರ ಓಲೈಕೆಗೆ ಮುಂದಾಗಿತ್ತು. ಇತ್ತ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿಗೆ ಸೆಡ್ಡು ಹೊಡೆದು ಮತ್ತೆ ಅದೇ ಶಿವಾಜಿ ಪ್ರತಿಮೆಯನ್ನು ಕಾಂಗ್ರೆಸ್ ನಾಯಕರ ಕೈಯಿಂದ ಅದ್ಧೂರಿಯಾಗಿ ಮರು ಅನಾವರಣಗೊಳಿಸಿದ್ದರು.
ಕರಾವಳಿ ಭಾಗದಲ್ಲೂ ಪ್ರತಿಮೆ ಅನಾವರಣ :ತುಳುನಾಡಿನ ಸೃಷ್ಟಿಕರ್ತ ಪರಶುರಾಮನ 33 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಕಾರ್ಕಳ ತಾಲ್ಲೂಕಿನ ಬೈಲೂರು ಯರ್ಲಪಾಡಿಯ ಉಮಿಕಲ್ ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಪರಶುರಾಮ ಥೀಮ್ ಪಾರ್ಕ್ ಹೆಸರಲ್ಲಿ ಆಕರ್ಷಣೀಯ ಕೇಂದ್ರವನ್ನು ಭೂಮಟ್ಟದಿಂದ 400 ಅಡಿ ಎತ್ತರದಲ್ಲಿ ರೂಪಿಸಲಾಗಿದೆ. ಉಮಿಕಲ್ ಬೆಟ್ಟದ ತುದಿಯಲ್ಲಿ ಪೂರ್ವ ದಿಕ್ಕಿಗೆ ಮುಖ ಮಾಡಿರುವ ಕೊಡಲಿ ಹಿಡಿದ ಪರಶುರಾಮರ ಪ್ರತಿಮೆಯನ್ನು ಜ.27ರಂದು ಸಿಎಂ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದ್ದರು. ಆ ಮೂಲಕ ಕರಾವಳಿ ಭಾಗದ ಜನರ ನಂಬಿಕೆ, ಇತಿಹಾಸದ ಮಹತ್ವವವನ್ನು ಮುಂದಿಟ್ಟುಕೊಂಡು ಮತಗಳ ಮೇಲೆ ಕಣ್ಣಿಟ್ಟಿದೆ.