ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಹಂಚಿಕೆಯಾದ 9,572 ಎಕರೆ ಭೂಮಿ ಬಳಕೆ ಮಾಡದ ಉದ್ಯಮಿಗಳು: 1,117 ಕೈಗಾರಿಕೆಗಳಿಗೆ ನೋಟಿಸ್ - etv bharat kannad

ರಾಜ್ಯದಲ್ಲಿ ಕೈಕಾರಿಕೆಗಳಿಗೆ ಹಂಚಿದ ಭೂಮಿಯನ್ನು ಸದ್ಬಳಕೆ ಮಾಡದೇ ಇರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಕೈಗಾರಿಕೋದ್ಯಮಿಗಳಿಗೆ ನೋಟಿಸ್ ನೀಡಿ ಬಿಸಿ ಮುಟ್ಟಿಸಿದೆ. ಸದ್ಬಳಕೆ ಮಾಡದೇ ಇದ್ದರೆ ಭೂಮಿಯನ್ನು ವಾಪಸ್​ ಪಡೆಯಲೂ ಮುಂದಾಗಿದೆ ಎಂದು ತಿಳಿದು ಬಂದಿದೆ.

unused-allotted-land-notice-to-1117-industries-in-karnataka
ರಾಜ್ಯದಲ್ಲಿ ಹಂಚಿಕೆಯಾದ 9,572 ಎಕರೆ ಭೂಮಿ ಬಳಕೆ ಮಾಡದ ಉದ್ಯಮಿಗಳು: 1,117 ಕೈಗಾರಿಕೆಗಳಿಗೆ ನೋಟಿಸ್

By

Published : Nov 3, 2022, 4:00 PM IST

ಬೆಂಗಳೂರು: ರಾಜ್ಯ ಸರ್ಕಾರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಿದೆ. ಕರ್ನಾಟಕ ಬಂಡವಾಳ ಹೂಡಿಕೆಗೆ ಯಾವತ್ತೂ ಉದ್ಯಮಿಗಳ ನೆಚ್ಚಿನ ತಾಣ. ಸರ್ಕಾರಗಳೂ ಕೈಗಾರಿಕೆಗಳಿಗೆ ಅಗತ್ಯವಿರುವ ಭೂಮಿಯನ್ನು ನೀಡಿ ಕೈಗಾರಿಕೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತವೆ. ಆದರೆ, ಅದೆಷ್ಟೂ ಕೈಗಾರಿಕೆಗಳು ಬಂಡವಾಳ ಹೂಡಿಕೆ ಮಾಡುತ್ತೇವೆ ಎಂದು ಭೂಮಿ ಪಡೆದರೂ ಅದರ ಸದ್ಬಳಕೆ ಮಾತ್ರ ಮಾಡಿಲ್ಲ.

ರಾಜ್ಯಕ್ಕೆ ಇನ್ನಷ್ಟು ಬಂಡವಾಳ ಆಕರ್ಷಿಸಲು ರಾಜ್ಯ ಸರ್ಕಾರ ಸದ್ಯ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸುತ್ತಿದೆ. ಕರ್ನಾಟಕ ಯಾವತ್ತೂ ಬಂಡವಾಳ ಹೂಡಿಕೆದಾರರಿಗೆ ಅಚ್ಚುಮೆಚ್ಚಿನ ರಾಜ್ಯ. ಹಾಗಾಗಿ ಪ್ರತಿ ವರ್ಷ ಸಾವಿರಾರು ಕೋಟಿ ಬಂಡವಾಳ ರಾಜ್ಯಕ್ಕೆ ಹರಿದು ಬರುತ್ತಿದೆ. ಸರ್ಕಾರವೂ ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸಲು ಬೇಕಾದ ಎಲ್ಲ ಸವಲತ್ತುಗಳನ್ನು ಕಲ್ಪಿಸಿಕೊಡಲಾಗುತ್ತದೆ.

ಕೈಗಾರಿಕೆಗಳಿಗೆ ಬೇಕಾದ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ‌) ಮೂಲಕ ನೀಡುತ್ತಿದೆ. ಆದರೆ, ಅದೆಷ್ಟೂ ಕಂಪನಿಗಳು ಬಂಡವಾಳ ಹೂಡಿಕೆಗ ಪ್ರಸ್ತಾವನೆ ಸಲ್ಲಿಸಿ ಭೂಮಿ ಪಡೆದರೂ, ಹಲವು ವರ್ಷಗಳಿಂದ ಹಂಚಿಕೆಯಾದ ಭೂಮಿಯನ್ನು ಬಳಸದೇ ಹಾಗೇ ಖಾಲಿ ಬಿಟ್ಟಿವೆ. ಇದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಭೂಮಿ ಬಳಸದ 1,117 ಕೈಗಾರಿಕೋದ್ಯಮಿಗಳು:ಸರ್ಕಾರ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದಾಗಿರುವ ಹಲವು ಕಂಪನಿಗಳಿಗೆ ಕೆಐಎಡಿಬಿ‌ ಮೂಲಕ ಭೂಮಿ ಹಂಚಿಕೆ ಮಾಡುತ್ತದೆ. ಭೂಮಿಯಲ್ಲಿ ಕೈಗಾರಿಕೆ ನಿರ್ಮಾಣಕ್ಕೆ ಬೇಕಾದ ಎಲ್ಲ ಮೂಸೌಕರ್ಯವನ್ನು ಅಭಿವೃದ್ಧಿ ಪಡಿಸಿ ಹಂಚಿಕೆ ಮಾಡುತ್ತದೆ. ಆದರೆ, ಅದೆಷ್ಟೋ ಕಂಪನಿಗಳು ಕೆಐಎಡಿಬಿಯಿಂದ ಭೂಮಿ ಪಡೆದು ಸಮ್ಮನೆ ಕೂತಿವೆ.

ಇದನ್ನೂ ಓದಿ:ಅದಾನಿ, ಜಿಂದಾಲ್ ತಲಾ ಲಕ್ಷ ಕೋಟಿ, ಸ್ಟೈರ್ಲೈಟ್ ಪವರ್ ₹50 ಸಾವಿರ ಕೋಟಿ ಹೂಡಿಕೆಗೆ ಆಸಕ್ತಿ

ತಾವು ಯಾವ ಉದ್ದೇಶಕ್ಕೆ ಭೂಮಿ ಪಡೆದಿವೆಯೋ ಅದನ್ನು ಬಳಸದೇ ಹಾಗೇ ಖಾಲಿ ಬಿಟ್ಟಿವೆ. ನಾನಾ ಕಾರಣ ಹೇಳಿ ಕೈಗಾರಿಕೋದ್ಯಮಿಗಳು ಹಂಚಲ್ಪಟ್ಟ ಭೂಮಿಯಲ್ಲಿ ಘಟಕ ಸ್ಥಾಪಿಸದೇ ಖಾಲಿ ಉಳಿಸಿಕೊಂಡಿವೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಜ್ಯ ಸರ್ಕಾರ ಅಂತಹ ಕೈಗಾರಿಕೋದ್ಯಮಿಗಳಿಗೆ ನೋಟೀಸ್ ಜಾರಿ ಮಾಡಿದೆ.

ಬಳಕೆಯಾದ 9,572 ಎಕರೆ ಭೂಮಿ: ಕೆಐಎಡಿಬಿಯು ರಾಜ್ಯಾದ್ಯಂತ ಅಭಿವೃದ್ಧಿಪಡಿಸಿರುವ ಕೈಗಾರಿಕಾ ಪ್ರದೇಶಗಳಲ್ಲಿ ಹಂಚಿಕೆ‌ ಪಡೆದು ಯೋಜನೆ ಅನುಷ್ಠಾನಗೊಳಸದ ಒಟ್ಟು 9,572.63 ಎಕರೆಯಷ್ಟು ಜಮೀನನ್ನು ಬಳಕೆನೇ ಮಾಡಿಲ್ಲ. ಭೂಮಿ ಬಳಸದ ಬರೋಬ್ಬರಿ 1,117 ಉದ್ದಿಮೆದಾರರಿಗೆ ಕೆಐಎಡಿ ಕಾಯ್ದೆ ಕಲಂ 34-ಬಿ ರಡಿ ನೋಟಿಸ್ ನೀಡಲಾಗಿದೆ. ಇದರ ವಿಚಾರಣೆ ವಿವಿಧ ಹಂತದಲ್ಲಿದೆ ಎಂದು ಕೈಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೆಐಎಡಿಬಿ ಭೂ ಬ್ಯಾಂಕ್ ಏನಿದೆ?:ಕೆಐಎಡಿಬಿ ರಾಜ್ಯದಲ್ಲಿ ಕೈಗಾರಿಕೆಗಳಿಗೆ ಭೂಮಿ ಅಭಿವೃದ್ಧಿ ಪಡಿಸುವ ಕೆಲಸ ಮಾಡುತ್ತೆ. ಮೂಲಸೌಕರ್ಯ ಕಲ್ಪಿಸಿ ಕೈಗಾರಿಕೆಗಳಿಗೆ ಭೂಮಿ ಹಂಚಿಕೆ ಮಾಡುತ್ತವೆ. ಸದ್ಯ ಕೆಐಎಡಿಬಿ ಸುಮಾರು 23,400 ಎಕರೆಗೂ ಹೆಚ್ಚು ಭೂ ಬ್ಯಾಂಕ್ ​ಹೊಂದಿದೆ.

ರಾಜ್ಯ ಸರ್ಕಾರ ಈವರೆಗೆ ರಾಜ್ಯದಲ್ಲಿ 192 ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಿದೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ 2020-21ನೇ ಸಾಲಿನಲ್ಲಿ 8 ಕೈಗಾರಿಕಾ ಪ್ರದೇಶಗಳನ್ನು ಒಟ್ಟು 3,039.06 ಎಕರೆ ವಿಸ್ತೀರ್ಣ ಹಾಗೂ 2021-22ನೇ ಸಾಲಿನಲ್ಲಿ 2 ಕೈಗಾರಿಕಾ ಪ್ರದೇಶಗಳನ್ನು ಒಟ್ಟು 792.81 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲು ಅನುಮೋದನೆ ನೀಡಿದೆ.

ಆದರೆ, ಕೈಕಾರಿಕೆಗಳಿಗೆ ಅನುಕೂಲವಾಗುವಂತೆ ಭೂಮಿ ಅಭಿವೃದ್ಧಿ ಮಾಡುವ ಕೆಐಎಡಿಬಿ ಹಂಚಿದ ಭೂಮಿಯನ್ನು ಸದ್ಬಳಕೆ ಮಾಡದೇ ಇರುವುದು ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ನೋಟಿಸ್ ನೀಡಿ ಕೈಗಾರಿಕೋದ್ಯಮಿಗಳಿಗೆ ಬಿಸಿ ಮುಟ್ಟಿಸಿದೆ. ಸದ್ಬಳಕೆ ಮಾಡದೇ ಇದ್ದರೆ ಭೂಮಿಯನ್ನು ವಾಪಸ್​ ಪಡೆಯಲೂ ಮುಂದಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಬಂಡವಾಳ ಹೂಡಿಕೆ ಸಮಾವೇಶದಲ್ಲಿ ವಸ್ತು ಪ್ರದರ್ಶನ ವೀಕ್ಷಿಸಿದ ಸಿಎಂ ಬೊಮ್ಮಾಯಿ

ABOUT THE AUTHOR

...view details