ಬೆಂಗಳೂರು: ಎರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ನಗರದಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಮಲ್ಲೇಶ್ವರದ 9ನೇ ಕ್ರಾಸ್‌ನಲ್ಲಿ ನಿಹಾನ್ ಜ್ಯುವೆಲ್ಲರಿ ಅಂಗಡಿಗೆ ಮಳೆ ನೀರು ನುಗ್ಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ನೀರಿನಲ್ಲಿ ಕೊಚ್ಚಿ ಹೋಗಿದೆ ಎಂದು ಹೇಳಲಾಗುತ್ತಿದೆ. ಕಸಸಮೇತ ನೀರು ರಭಸವಾಗಿ ಒಳ ನುಗ್ಗಿದ್ದು ಅಲ್ಲಿದ್ದ ಸಿಬ್ಬಂದಿಗೆ ಅಂಗಡಿ ಶಟರ್ ಹಾಕಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
ಮಳಿಗೆ ಒಡತಿಯ ಪ್ರತಿಕ್ರಿಯೆ: ಅಂಗಡಿ ಸಮೀಪ ನಡೆಯುತ್ತಿರುವ ಕಾಮಗಾರಿ ಈ ಅವಾಂತರಕ್ಕೆ ಕಾರಣವಾಗಿದೆ ಎಂದು ದೂರಲಾಗಿದೆ. "ಅಂಗಡಿಯಲ್ಲಿದ್ದ ಚಿನ್ನಾಭರಣಗಳು ಒದ್ದೆಯಾಗಿವೆ. ಘಟನೆಯನ್ನು ಪಾಲಿಕೆಯವರಿಗೆ ಕರೆ ಮಾಡಿ ತಿಳಿಸಿ ಸಹಾಯ ಕೇಳಿದ್ದು, ಅಧಿಕಾರಿಗಳು ನಮ್ಮ ನೆರವಿಗೆ ಬಂದಿಲ್ಲ. ನಮಗೆ ಶೇ.80ರಷ್ಟು ಆಭರಣ ನಷ್ಟವಾಗಿದೆ. ನಮ್ಮ ಕಣ್ಮುಂದೆ ಸುಮಾರು 2 ಕೋಟಿ ರೂ ಮೌಲ್ಯದ ಆಭರಣಗಳು ಮಳೆ ನೀರಲ್ಲಿ ಕೊಚ್ಚಿಕೊಂಡು ಹೋಗಿವೆ" ಎಂದು ಮಳಿಗೆಯ ಒಡತಿ ಪ್ರಿಯಾ ಕಣ್ಣೀರಿಟ್ಟರು.
ಎರಡು ದಿನದ ಮಳೆಯಿಂದಾಗಿ ನಗರದ ಅಲ್ಲಲ್ಲಿ ಭಾರಿ ಪ್ರಮಾಣದಲ್ಲಿ ತ್ಯಾಜ್ಯ ತುಂಬಿಕೊಂಡಿದ್ದು ವಿಲೇವಾರಿಗೆ ಪೌರ ಕಾರ್ಮಿಕರು ಕೂಡಾ ಪರದಾಟ ನಡೆಸುತ್ತಿದ್ದಾರೆ. ಹಲವು ಪ್ರಮುಖ ರಸ್ತೆಗಳು ತಿಪ್ಪೆ ಗುಂಡಿಯಾಗಿ ಮಾರ್ಪಟ್ಟಿವೆ. ಮರ ಬಿದ್ದಿರುವ ಸಂಬಂಧ ಬಿಬಿಎಂಪಿಗೆ 600 ಕ್ಕೂ ಅಧಿಕ ದೂರುಗಳು ಬಂದಿವೆ. ಮಹಾಲಕ್ಷ್ಮಿ ಲೇಔಟ್‌ನಲ್ಲೇ 20 ಕ್ಕೂ ಅಧಿಕ ಕಡೆ ಮನೆಗಳಿಗೆ ನೀರು ನುಗ್ಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನಿನ್ನೆ ಮಳೆ ಅಬ್ಬರ:ಎಲೆಕ್ಟ್ರಾನಿಕ್ ಸಿಟಿಯಲ್ಲಿ ಅಬ್ಬರಿಸಿದ ಗಾಳಿಸಮೇತ ಮಳೆ ಸೋಮವಾರವೂ ಮುಂದುವರಿಯಿತು. ಸಂಜೆ 6.30ಕ್ಕೆ ಶುರುವಾದ ಆಲಿಕಲ್ಲು ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಇದರಿಂದಾಗಿ ರಸ್ತೆಗಳೆಲ್ಲ ಹೊಳೆ ರೂಪ ತಾಳಿದ್ದವು. ನೀರಿನ ರಭಸಕ್ಕೆ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿದ್ದು ವಾಹನ ಸವಾರರು ಪರದಾಡಿದರು. ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ಮಳೆ ಮತ್ತು ಚರಂಡಿ ನೀರು ನುಗ್ಗಿತು. ಮನೆಯಲ್ಲಿದ್ದ ದಿನ ಬಳಕೆ ಸಾಮಗ್ರಿಗಳು, ಎಲೆಕ್ಟ್ರಾನಿಕ್ ವಸ್ತುಗಳು ನೀರು ಪಾಲಾದವು.