ಬೆಂಗಳೂರು: ನೀವು ಎಂದಿಗೂ ನಿಮ್ಮ ಕೆಲಸ ಕೀಳು ಎಂದು ಭಾವಿಸಬೇಡಿ. ಅಸಂಘಟಿತ ಕಾರ್ಮಿಕರು ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ನಿಮ್ಮಲ್ಲಿ ನಾಯಕತ್ವ ಗುಣ, ಆರ್ಥಿಕ ಶಕ್ತಿ ಬೆಳೆಸಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆಕೊಟ್ಟಿದ್ದಾರೆ.
ನಗರದ ಪುರಭವನದಲ್ಲಿ ಹಮ್ಮಿಕೊಂಡಿದ್ದ ಅಸಂಘಟಿತ ಕಾರ್ಮಿಕ ಘಟಕದ ನೂತನ ಅಧ್ಯಕ್ಷ ಮಂಜುನಾಥ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಇಲ್ಲಿರುವವರು ನಾವು ಅಸಂಘಟಿತ ಕಾರ್ಮಿಕರು, ನಮ್ಮ ವೃತ್ತಿ ಕಡಿಮೆ, ನಮ್ಮ ಪರಿಸ್ಥಿತಿ ಏನು ಎಂದು ದುಗುಡಕ್ಕೆ ಒಳಗಾಗಬೇಡಿ. ನಾನು ಇಲ್ಲಿ ನಾಯಕನಾಗಿ ನಿಂತಿದ್ದರೂ ನನಗೆ ಈ ಕೋಟು, ಬಟ್ಟೆ, ಕ್ಷೌರ, ಚಪ್ಪಲಿಬೇಕು.
ಅಸಂಘಟಿತ ಕಾರ್ಮಿಕ ಘಟಕದ ನೂತನ ಅಧ್ಯಕ್ಷ ಮಂಜುನಾಥ್ ಅವರ ಪದಗ್ರಹಣ ಕಾರ್ಯಕ್ರಮ ನಾನು ಹೀಗೆ ಸಿಂಗಾರ ಆಗಲು ಕಾರಣರು ಯಾರು? ಹುಟ್ಟುವಾಗ ನಮ್ಮ ಬಳಿ ಏನೂ ಇರುವುದಿಲ್ಲ. ಹುಟ್ಟಿದಾಗ ಮಗು ಅಳುತ್ತಿದ್ದರೆ, ಬೇರೆಯವರು ನಗುತ್ತಿರುತ್ತಾರೆ. ವ್ಯಕ್ತಿ ಸತ್ತಾಗ ಸಮಾಜ ಅಳುತ್ತಿರುತ್ತದೆ. ಈ ಮಧ್ಯೆ ಆ ವ್ಯಕ್ತಿ ಸಾಧನೆ ಏನು ಎಂದು ನಾವೆಲ್ಲ ಮೆಲುಕು ಹಾಕುತ್ತಿರುತ್ತೇವೆ. ದೊಡ್ಡ ಶ್ರೀಮಂತರು ಎಂದರೆ ಅದಾನಿ, ಅಂಬಾನಿ ಎನ್ನುತ್ತಾರೆ. ಅವರಿಗೂ ನಮ್ಮ ಸಂವಿಧಾನದಲ್ಲಿ ಒಂದೇ ಮತ ಹಾಕುವ ಹಕ್ಕು ನೀಡಲಾಗಿದೆ. ಪೇಪರ್ ಹಾಕುವುದು, ಬಟ್ಟೆ ಹೊಲಿಯುವುದು, ಒಗೆಯುವುದು ಅಪಮಾನದ ಕೆಲಸವಲ್ಲ. ಅದು ಸ್ವಾಭಿಮಾನದ ಬದುಕು ಎಂದರು.
ಅಸಂಘಟಿತ ಕಾರ್ಮಿಕರು ಸಮಾಜದ ಭಾಗವಾಗಿ ಶಕ್ತಿಶಾಲಿಗಳು
ದೇಶದಲ್ಲಿ ಅಸಂಘಟಿತ ಕಾರ್ಮಿಕರು ಸಮಾಜದ ಭಾಗವಾಗಿ ಶಕ್ತಿಶಾಲಿಗಳು. ಅವರು ತೆರಿಗೆ ಕಟ್ಟದಿದ್ದರೂ, ಸರ್ಕಾರ ಉದ್ಯೋಗ ನೀಡದಿದ್ದಾಗ, ನೀವೇ ಉದ್ಯೋಗ ಸೃಷ್ಟಿಸಿಕೊಂಡು ಸಮಾಜ ಉಳಿಸುತ್ತಿದ್ದೀರಿ. ನಿಮಗೆ ಯಾವ ರೀತಿ ಶಕ್ತಿ ನೀಡಬೇಕು ಎಂದು ಕಾಂಗ್ರೆಸ್ ಆಲೋಚಿಸಿದೆ. ನಿಮ್ಮ ಬದುಕು, ಜೀವನ, ದಿಕ್ಕು-ದೆಸೆ ಬಗ್ಗೆ ನಾವು ಯೋಚಿಸುತ್ತಿದ್ದೇವೆ. ಆಸ್ಕರ್ ಫರ್ನಾಂಡಿಸ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಯುಪಿಎ ಸರ್ಕಾರದಲ್ಲಿ ಮಂತ್ರಿಯಾಗಿದ್ದಾಗ ನಿಮಗೆ ವಿಶೇಷ ಕಾರ್ಯಕ್ರಮ ನೀಡಿದ್ದರು. ನಾನು ಅದನ್ನು ನೋಡಿ ನನ್ನ ಕ್ಷೇತ್ರದ 30 ಸಾವಿರ ಜನರನ್ನು ನೋಂದಣಿ ಮಾಡಿಸಿದೆ. ಇತ್ತೀಚೆಗೆ ಕೋವಿಡ್ ಬಂದಾಗ ನಾವು ಗಲಾಟೆ ಮಾಡಿ ಪರಿಹಾರ ನೀಡುವಂತೆ ಆಗ್ರಹಿಸಿದೆವು. ಸರಕಾರದವರು ಸಹಾಯ ಮಾಡಲಿಲ್ಲ. ಒಂದು ತಿಂಗಳಿಗೆ 5 ಸಾವಿರ ಎಂದು ಘೋಷಿಸಿದರು.
ಹೃದಯ ಶ್ರೀಮಂತಿಕೆ ಇಲ್ಲ
ಬಿಜೆಪಿ ಅವರಿಗೆ ಹೃದಯ ಶ್ರೀಮಂತಿಕೆ ಇಲ್ಲ. ರಾಜ್ಯದಲ್ಲಿ 22 ಲಕ್ಷ ಚಾಲಕರು, 70 ಲಕ್ಷ ಬೀದಿ ವ್ಯಾಪಾರಿಗಳು ಇದ್ದಾರೆ. ಸವಿತಾ ಸಮಾಜ, ದರ್ಜಿ, ಬಟ್ಟೆ ಹೊಲಿಯುವವರು ಇದ್ದಾರೆ. ಒಂದು ಊರಿನಲ್ಲಿ ಯಾರು ಈ ಕೆಲಸ ಮಾಡುತ್ತಾರೆ ಎಂದು ಗೊತ್ತಿದೆ. ಯಾರಾದರೂ ಮೋಸ ಮಾಡಲು ಸಾಧ್ಯವಾ? ಗ್ರಾಮ ಲೆಕ್ಕಿಗನನ್ನು ಕರೆದುಕೊಂಡು ಮನೆ, ಮನೆಗೆ ಹೋಗಿ 5 ಸಾವಿರ ಚೆಕ್ ಬರೆದು ಕೊಡಲು ಬಿಜೆಪಿ ಅವರಿಗೆ ಏನಾಗಿತ್ತು? ಆತ ಆನ್ಲೈನ್ ನಲ್ಲಿ ಅರ್ಜಿ ಹಾಕಬೇಕು ಎಂದು ಹೇಳುತ್ತಾರೆ. ಆತನಿಗೆ ಅದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಪದಗ್ರಹಣ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಈ ಸರ್ಕಾರದ ಕೈಯಲ್ಲಿ 5 ಸಾವಿರ ರು. ಪರಿಹಾರ ಕೊಡಲು ಆಗಲಿಲ್ಲ ಎಂದರೆ ಆ ಸರ್ಕಾರವನ್ನು ತೆಗೆಯಬೇಕು. ಇದಕ್ಕಾಗಿ ನೀವು ತಯಾರಾಗಬೇಕು. ಅಸಂಘಟಿತ ಕಾರ್ಮಿಕರ ಪ್ರತ್ಯೇಕ ಘಟಕ ಸ್ಥಾಪಿಸಲು ಅವಕಾಶ ಇದೆ. ನೀವು ಮನೆ, ಮನೆಗೂ ಹೋಗಿ ಮತದಾರರ ಜತೆ ಸಂಪರ್ಕ ಇಟ್ಟುಕೊಳ್ಳಬೇಕು. ಜನರ ಕಷ್ಟಕ್ಕೆ ಸ್ಪಂದಿಸಿ, ಜನರ ವಿಶ್ವಾಸ ಗೆಲ್ಲಬೇಕು. ನೀವು ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗಬೇಕಾಗಿಲ್ಲ. ನಿಮ್ಮ ಸಂಘಟನೆ ತೋರಿಸಿ, ನಿಮ್ಮ ಮನೆ ಬಾಗಿಲಿಗೆ ಅಧಿಕಾರ ಬರುತ್ತದೆ. ನಿಮಗೆ ಸೂಕ್ತ ಸ್ಥಾನ- ಮಾನ ನಾವು ಕೊಡುತ್ತೇವೆ ಎಂದು ಭರವಸೆ ನೀಡಿದರು.
ಕೋವಿಡ್ ಸಮಯದಲ್ಲಿ ನಾನು ನಿಮ್ಮನ್ನು ಅಸಂಘಟಿತ ಕಾರ್ಮಿಕರು ಎಂದು ಕರೆಯಲಿಲ್ಲ. ದೇಶ ನಿರ್ಮಾಣ ಮಾಡುವವರು ಎಂದೆ. ಸರ್ಕಾರ ಸುಲಿಗೆ ಮಾಡಲು ನಿಂತಾಗ ನಾವು 1 ಕೋಟಿ ಚೆಕ್ ಕೊಟ್ಟು ಸರ್ಕಾರದ ಮೇಲೆ ಒತ್ತಡ ಹಾಕಿದೆವು. ಸರ್ಕಾರ ಒತ್ತಡಕ್ಕೆ ಮಣಿದು ರಾಜ್ಯದ ಎಲ್ಲ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿತು. ನಾನು ಚಪ್ಪಲಿ ಹೊಲಿಯುವವನು, ಕುಂಬಾರ, ಚಾಲಕ ಎಂಬ ಕೀಳರಿಮೆ, ಅಳಕು ಬೇಡ. ನಾನು ಒಂದು ಕಡೆಯಿಂದ ಮನೆಗೆ ಹೋಗಿ ತಲುಪಬೇಕಾದರೆ ಚಾಲಕ ಮುಖ್ಯ. ನಾನು ಚೆನ್ನಾಗಿ ಕಾಣಲು ಬಟ್ಟೆ ಹೊಲಿಯುವವರು ಮುಖ್ಯ. ಅವರನ್ನು ನಾವು ಕೀಳಾಗಿ ಕಾಣಬಾರದು. ನಮಗೆ ಮನುಷ್ಯತ್ವ, ಮಾನವೀಯತೆ ಹಾಗೂ ವಿಶ್ವಮಾನವ ತತ್ವ ಬೇಕು. ನೀವೆಲ್ಲ ಪಕ್ಷದ ಆಧಾರ ಸ್ತಂಭವಾಗಬೇಕು ಎಂದು ನಮ್ರತೆಯಿಂದ ಮನವಿ ಮಾಡುತ್ತೇನೆ.
ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರವಲ್ಲ, ನಿಮ್ಮ ಕಾಣಿಕೆ ಮುಖ್ಯ. ಎಲ್ಲ ವರ್ಗದ ಜನರ ಪ್ರೀತಿ ವಿಶ್ವಾಸ ನಮಗೆ ಬೇಕು. ನಾನು ಪದಗ್ರಹಣ ಮಾಡುವಾಗ ದೀಪವನ್ನು ಸೇವಾದಳ, ಮಹಿಳಾ ಕಾಂಗ್ರೆಸ್, ಯೂಥ್ ಕಾಂಗ್ರೆಸ್, ವಿದ್ಯಾರ್ಥಿ ಘಟಕ - ಹೀಗೆ ಎಲ್ಲ ಘಟಕಗಳ ನಾಯಕರಿಂದ ಹಚ್ಚಿಸಿದ್ದೇನೆ. ಈ ಜ್ಯೋತಿ ಕೇವಲ ನನ್ನಿಂದ ಮಾತ್ರವಲ್ಲ, ಕಾಂಗ್ರೆಸ್ ಪಕ್ಷದ ಎಲ್ಲ ಘಟಕ, ವರ್ಗದ ಜನರಿಂದ ಬೆಳಗುತ್ತಿದೆ. ಕೆಪಿಸಿಸಿ ಪದಾಧಿಕಾರಿಗಳು ಎಷ್ಟು ಮುಖ್ಯವೋ ಹಾಗೆ ಎಲ್ಲ ಘಟಕಗಳೂ ಮುಖ್ಯ ಎಂದರು.
ಹುಟ್ಟುತ್ತಲೇ ಎಲ್ಲರೂ ದೊಡ್ಡ ನಾಯಕರಾಗಿಲ್ಲ. ಕೆಳಮಟ್ಟದಿಂದ ಬೆಳೆದು ಬಂದಿದ್ದೇವೆ. ನಾನು ಬ್ಲಾಕ್ ಅಧ್ಯಕ್ಷ, ವಿದ್ಯಾರ್ಥಿ ಘಟಕದ ಅಧ್ಯಕ್ಷನಾಗಿದ್ದೆ. ಈಗ ರಾಜ್ಯಾಧ್ಯಕ್ಷ. 7 ಬಾರಿ ಶಾಸಕನಾಗಿದ್ದೆ. ಮುನಿಯಪ್ಪ, ಧ್ರುವನಾರಾಯಣ, ಚಂದ್ರಪ್ಪ ಎಲ್ಲರೂ ಕೆಳಮಟ್ಟದಿಂದ ಬೆಳೆದು ಬಂದಿದ್ದಾರೆ. ಕೆಪಿಸಿಸಿಯ ಬ್ಲಾಕ್ ಕಾಂಗ್ರೆಸ್ ಅವರಿಗಿಂತಲೂ ನಿಮಗೆ ಹೆಚ್ಚಿನ ಅವಕಾಶವಿದೆ. ನಿಮಗೆ ಜಾತಿ, ಧರ್ಮವಿಲ್ಲ. ನಿಮ್ಮ ಕೆಲಸವೇ ನಿಮ್ಮ ಧರ್ಮ. ನಿಮ್ಮ ಸಂಘಟನಾ ಶಕ್ತಿ ಬೆಳೆಸಿಕೊಳ್ಳಿ ಎಂದು ಸಲಹೆ ಇತ್ತರು.