ಬೆಂಗಳೂರು (ಆನೇಕಲ್):ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಬಿಇಟಿಎಲ್ ವತಿಯಿಂದ ನಿರ್ಮಿಸಿರುವ ಅತ್ತಿಬೆಲೆ ಶುಲ್ಕ ವಸೂಲಿ ಕೇಂದ್ರದಲ್ಲಿ ಸ್ಥಳೀಯ ಲಾರಿ ಮತ್ತು ಟಿಪ್ಪರ್ಗಳನ್ನು ಸತಾಯಿಸಿ ಬಿಡಲಾಗುತ್ತಿದೆ ಎಂದು ಕರ್ನಾಟಕ ಟಿಪ್ಪರ್ ಲಾರಿ ಮಾಲೀಕರ ಅಸೋಷಿಯೇಷನ್ ಸಂಘ ಮತ್ತು ಲಾರಿ ಚಾಲಕ - ಮಾಲೀಕರು ಟೋಲ್ ಕಚೇರಿಗೆ ಮುತ್ತಿಗೆ ಹಾಕಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ಸ್ಥಳೀಯ ವಾಹನಗಳ ಸೂಕ್ತ ದಾಖಲೆ ಪರಿಶೀಲಿಸಿ ವಿನಾಯಿತಿ ಶುಲ್ಕದಂತೆ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ಎರಡು ತಿಂಗಳಿಂದ ಮತ್ತೆ ವಾಹನಗಳನ್ನು ಗಂಟೆಗಳ ಕಾಲ ನಿಲ್ಲಿಸಿ ಟೋಲ್ ಅಧಿಕಾರಿಗಳ ಮನಸ್ಸಿಗೆ ಬಂದಾಗ ಬಿಡುವ ಪರಿಪಾಠ ಶುರುವಾದ ಬೆನ್ನಲ್ಲಿಯೇ ರೊಚ್ಚಿಗೆದ್ದ ಅಸೊಸಿಯೇಷನ್ ತಂಡ ಅತ್ತಿಬೆಲೆ ಟೋಲ್ ಕಚೇರಿಗೆ ಮುತ್ತಿಗೆ ಹಾಕಿದೆ.
ಈ ಕುರಿತಂತೆ ಟೋಲ್ ಮೇಲಾಧಿಕಾರಿಗಳೊಡನೆ ಮಾತುಕತೆಗೆ ಬರುವ ಸೂಚನೆ ನೀಡಿದರೂ ಬೇಕಂತಲೇ ತಪ್ಪಿಸಿಕೊಂಡಿದ್ದಾರೆಂದು ಲಾರಿ ಮಾಲೀಕರು ದೂರಿದರು. ಈ ಕುರಿತಂತೆ ಮಾತನಾಡಿದ ಕರ್ನಾಟಕ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಡಾ. ಆರ್ ಪ್ರಭಾಕರ್ ರೆಡ್ಡಿ, ಕಳೆದ ಹತ್ತು ವರುಷಗಳಿಂದ ಸ್ಥಳೀಯ ವಾಹನಗಳಿಗೆ ವಿನಾಯಿತಿ ನೀಡಲು ಜಿಲ್ಲಾಧಿಕಾರಿಗಳ ಕಚೇರಿಗೆ ಎಡತಾಕಿ ಕೊನೆಗೂ ವಿನಾಯಿತಿ ಪಡೆಯಲಾಗಿತ್ತು. ಅದರಂತೆ ಕಳೆದ ಆರು ತಿಂಗಳಿಂದ ಹೊಸೂರು - ಅತ್ತಿಬೆಲೆ ಗಡಿಯಲ್ಲಿನ ಟೋಲ್ನಲ್ಲಿ ಒಂದು ಗಂಟೆ ಲಾರಿಗಳನ್ನು ನಿಲ್ಲಿಸಿ ಅನಂತರ ಅರ್ಧ ತಾಸಿಗೊಮ್ಮೆ ವಾಹನವನ್ನು ಬಿಡುವ ಪರಿಪಾಟವಿತ್ತು.
ತಿಂಗಳ ಕಂತು ಕಟ್ಟಲು ಅಸಾಧ್ಯ:ಆದರೆ, ಎರಡು ತಿಂಗಳಿಂದ ಎರಡು ಗಂಟೆಗಳ ಕಾಲ ಲಾರಿಗಳನ್ನು ಸಾಲಾಗಿ ನಿಲ್ಲಿಸಿ ಸಂಚರಿಸುವ ಆ್ಯಂಬುಲೆನ್ಸ್ಗಳಿಗೂ ದಾರಿ ಕೊಡದಂತೆ ಟೋಲ್ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಸಾಲ ಪಡೆದಿರುವ ಲಾರಿ ಮಾಲೀಕರಿಗೆ ತಿಂಗಳ ಸಾಲದ ಕಂತು ಕಟ್ಟಲು ಅಸಾಧ್ಯವಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಹಣ ಲೂಟಿ ಮಾಡಲು ಟೋಲ್ಗಳ ಬಳಕೆ:ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಷಿಯೇಷನ್ ಚಾಮರಾಜಪೇಟೆ ಬೆಂಗಳೂರು ಇದರ ಮುಖಂಡ ಚೆನ್ನಾರೆಡ್ಡಿ ಮಾತನಾಡಿ, ಎನ್ಹೆಚ್ಎಎಲ್ ನಿಯಮದಂತೆ ಊರಿಂದ ಆಚೆ ಎರಡು ಕಿ ಮೀ ದೂರದಲ್ಲಿ ಟೋಲ್ ನಿರ್ಮಿಸಬೇಕಿತ್ತು. ಆದರೆ, ಇಲ್ಲಿ ಜಾಗವಿಲ್ಲ ಎಂದು ಅತ್ತಿಬೆಲೆ - ಹೊಸೂರು ಗಡಿಯಲ್ಲಿ ಟೋಲ್ ನಿರ್ಮಿಸಿ ಇಲ್ಲದ ಅನರ್ಥಕ್ಕೆ ಬಿಇಟಿಲ್ ಫ್ಲಾಜಾ ಕಾರಣವಾಗಿದೆ.