ಬೆಂಗಳೂರು: ಗೃಹಜ್ಯೋತಿ ವಿಷಯವಾಗಿ ಪ್ರತಿಪಕ್ಷಗಳು ಅನಗತ್ಯವಾದ ಸುಳ್ಳು ಪ್ರಚಾರ ಮಾಡುತ್ತಿವೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ವಿಧಾನಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲರ ಭಾಷಣದ ಮೇಲೆ ಬಿಜೆಪಿಯ ಶಾಸಕ ಸಿದ್ದು ಸವದಿ ಅವರು ಮಾತನಾಡುವಾಗ ಗೃಹಜ್ಯೋತಿ ಯೋಜನೆಯ ಕುರಿತು ಪ್ರಸ್ತಾಪಿಸಿದ್ದಾರೆ. ಆಗ ಮಧ್ಯ ಪ್ರವೇಶಿಸಿದ ಕೆ ಜೆ ಜಾರ್ಜ್, ಇದೇ ವಿಧಾನಸಭೆಯಲ್ಲಿ ಯೋಜನೆಯ ಬಗ್ಗೆ ಹಲವಾರು ಸ್ಪಷ್ಟನೆ ನೀಡಿದ್ದೇನೆ. ರಾಜ್ಯದಲ್ಲಿ 2.16 ಕೋಟಿ ಆರ್ ಆರ್ ಸಂಖ್ಯೆಗಳಿವೆ. ಅದರಲ್ಲಿ 2.14 ಕೋಟಿ ಸಂಪರ್ಕಗಳು ಗೃಹಜ್ಯೋತಿಗೆ ಅರ್ಹತೆ ಪಡೆದಿವೆ ಎಂದು ಸ್ಪಷ್ಟಪಡಿಸಿದರು.
200 ಯುನಿಟ್ ವರೆಗೆ ಬಳಕೆಯಾಗುವ ವಿದ್ಯುತ್ಗೆ ವಾರ್ಷಿಕ ಸರಾಸರಿ ಪರಿಗಣಿಸಿ ಸೌಲಭ್ಯ ನೀಡಲಾಗುತ್ತಿದೆ. ಈವರೆಗೂ 1 ಕೋಟಿಗೂ ಹೆಚ್ಚು ಮಂದಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಯೋಜನೆಯಡಿ ಸುಮಾರು 40 ಲಕ್ಷ ಗ್ರಾಹಕರಿದ್ದಾರೆ. ಅವರನ್ನೂ ಗೃಹಜ್ಯೋತಿ ವ್ಯಾಪ್ತಿಗೆ ಒಳಪಡಿಸಿದರೆ ನೋಂದಣಿಯಾಗುವ ಗ್ರಾಹಕರ ಸಂಖ್ಯೆ ಹೆಚ್ಚಾಗಲಿದೆ ಎಂದು ಹೇಳಿದರು.
ವಿಧಾನಸಭೆ ಚುನಾವಣೆ ವೇಳೆ 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು. ಈಗ ಸರಾಸರಿ ಪರಿಗಣಿಸುವುದು ಸರಿಯಲ್ಲ ಎಂದು ವಿಪಕ್ಷ ಸದಸ್ಯರು ಆರೋಪಿಸಿದರು. ಆದರೆ ಇದನ್ನು ಅಲ್ಲಗಳೆದ ಸಚಿವ ಜಾರ್ಜ್ ಬಳಕೆಗೆ ಎಷ್ಟು ಅಗತ್ಯವೋ ಅಷ್ಟೇ ವಿದ್ಯುತ್ ಅನ್ನು ಸರ್ಕಾರ ನೀಡುತ್ತಿದೆ. ಜನ ಸಂತೋಷದಿಂದಿದ್ದಾರೆ. ಯಾವುದೇ ಬೆಂಬಲವಿಲ್ಲದೆ ಯೋಜನೆ ಜಾರಿಯಾಗುತ್ತಿದೆ. ಇದು ಐತಿಹಾಸಿಕವಾದ ನಿರ್ಣಯ ಎಂದು ಸಮರ್ಥಿಸಿಕೊಂಡರು.
ಆಡಳಿತ ಪಕ್ಷದ ಸದಸ್ಯ ಬಿ ಆರ್ ಪಾಟೀಲ್ ಮಾತನಾಡಿ, ಭೂಸುಧಾರಣೆ ಕಾಯ್ದೆ ತಂದು ಭೂಮಿ ಹಂಚಿಕೆ ಮಾಡಿದಂತೆ ಭೂಮಿ ಹೊಂದಿರುವ ಮಾಲೀಕನ ಜಮೀನಿನಲ್ಲಿ ಮರ ಬೆಳೆಸುವುದನ್ನು ಕಡ್ಡಾಯ ಮಾಡಿದರೆ ಅರಣ್ಯ ಉಳಿಸಬಹುದು. ಇಲ್ಲದಿದ್ದರೆ, ಭೂಮಿಯ ಮೇಲೆ ಅರಣ್ಯವಿರುವುದಿಲ್ಲ. ಪ್ರಕೃತಿ ಅಸಮತೋಲನ ಸರಿಪಡಿಸುವ ಕೆಲಸ ಮಾಡಬೇಕು. ರೈತರ ಆತ್ಮಹತ್ಯೆ ಯಾವ ಸರ್ಕಾರಕ್ಕೂ ಒಳ್ಳೆಯ ಹೆಸರು ತರುವುದಿಲ್ಲ. ಮಹಾರಾಷ್ಟ್ರದ ನಂತರ ರಾಜ್ಯದಲ್ಲಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ರದ್ದು ಮಾಡಬೇಕು. ಇದು ಖಾಸಗಿ ಕಂಪನಿಗಳಿಗೆ ಲಾಭ ತರುವ ಯೋಜನೆಯಾಗಿದೆ. ಇದರ ಬದಲು ಸರ್ಕಾರದಿಂದಲೇ ವಿಮೆ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ತನ್ನಿ. ನಿರುದ್ಯೋಗ ನಿವಾರಣೆಗೆ ಕೃಷಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಿ ಎಂದು ಹೇಳಿದರು.
ಬಿ ಆರ್ ಪಾಟೀಲ್ ಅವರು ಚುನಾವಣೆ ವ್ಯವಸ್ಥೆ ಬಗ್ಗೆ ಮಾತನಾಡ್ತಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಧ್ಯಪ್ರವೇಶಿಸಿ, ಶಾಸಕರಾದ ಮೇಲೆ ಶಾಸಕಗಿರಿ ಉಳಿಸಿಕೊಳ್ಳಲು ಮುಂದಾಗ್ತಾರೆ. ದೇವಸ್ಥಾನ ಕಟ್ಟಬೇಕು ಅಂತಾರೆ. ಈಗ 25 ಲಕ್ಷ ರೂಪಾಯಿ ಎಲ್ಲ ತೆಗೆದುಕೊಳ್ಳಲ್ಲ. ನಾವೇ ಚುನಾವಣೆ ಮಾಡುವಾಗ ಅಭ್ಯರ್ಥಿಗಳಿಗೆ ಎಷ್ಟು ಖರ್ಚು ಮಾಡ್ತಿಯಾ ಅಂತ ಕೇಳುತ್ತೇವೆ. ನಾವು 5 ಸಾವಿರ 10 ಸಾವಿರ ಕೊಟ್ಟರೆ ಹೋಗಿ ಚುನಾವಣೆ ಮಾಡ್ತಿದ್ದರು. ಈಗ ಆ ರೀತಿ ಪರಿಸ್ಥಿತಿ ಇಲ್ಲ. ಈ ಬಾರಿ ಚುನಾವಣೆ ಹೇಗೆ ನಡೀತು ಅಂತ ಗೊತ್ತಿದೆ.