ಬೆಂಗಳೂರು:ಒಮಿಕ್ರಾನ್ ವಿಚಾರವಾಗಿ ಜನರಲ್ಲಿ ಅನಗತ್ಯ ಭಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಐಟಿ ಸೆಕ್ಟರ್, ಹೋಟೆಲ್ಗಳು ಸೇರಿದಂತೆ ಬಹುತೇಕ ವ್ಯವಹಾರಗಳು ಎಸಿಯಲ್ಲಿ ನಡೆಯುತ್ತಿವೆ. ಲಸಿಕೆ ಪಡೆದಿದ್ದರ ಬಗ್ಗೆ ಸರ್ಟಿಫಿಕೇಟ್ ತೋರಿಸಿದರೆ ಮಾತ್ರ ಪ್ರವೇಶ ಕೊಡಬೇಕು ಎಂದರೆ ಅವರ್ಯಾರು ವ್ಯವಹಾರ ಮಾಡಬಾರದಾ, ಎಲ್ಲರೂ ಬಾಗಿಲು ಬಂದ್ ಮಾಡಬೇಕಾ. ದೇಶದಲಲ್ಲಿಯೇ ಇಲ್ಲದ್ದು ಕರ್ನಾಟಕದಲ್ಲಿ ಎಲ್ಲಿದೆ. ಬಿಜೆಪಿ ಸರ್ಕಾರ ರಾಜ್ಯದ ಇಡೀ ಆರ್ಥಿಕತೆಯನ್ನು ಹಾಳು ಮಾಡುತ್ತಿದೆ ಎಂದು ಹರಿಹಾಯ್ದರು.
ಸರ್ಕಾರ ದೇಶದೆಲ್ಲೆಡೆ ಒಂದೇ ರೀತಿಯ ಮಾರ್ಗಸೂಚಿ ಬಿಡುಗಡೆ ಮಾಡಬೇಕು. ಕೇವಲ ನಮ್ಮ ರಾಜ್ಯಕ್ಕೆ ವಿಶೇಷವಾಗಿ ಮಾರ್ಗಸೂಚಿ ರೂಪಿಸಲು ಆಗುವುದಿಲ್ಲ. ಈಗಾಗಲೇ ಯಾರಿಗೆಲ್ಲ ನಷ್ಟ ಆಗಿದೆಯೋ ಅವರಿಗೆ ಪರಿಹಾರ ನೀಡಬೇಕು. ಇದುವರೆಗೂ ಯಾರಿಗೂ ಪರಿಹಾರ ನೀಡಿಲ್ಲ. ಕೋವಿಡ್ನಿಂದ ಮೃತಪಟ್ಟ 4 ಲಕ್ಷ ಜನರಿಗೆ ಪರಿಹಾರ ಕೊಟ್ಟಿಲ್ಲ. ರೈತರ ಬೆಳೆಗಳಿಗೆ ಬೆಲೆ ನಿಗದಿ ಮಾಡಿಲ್ಲ. ಈಗ ಕೆಲವರು ಉಸಿರಾಡುತ್ತಿದ್ದಾರೆ. ಹೋಟೆಲ್ ಉದ್ಯಮ ನಷ್ಟದಲ್ಲಿದೆ. ಶೇ.90 ರಷ್ಟು ಹೋಟೆಲ್ಗಳಿಗೆ ಎಸಿ ಅಗತ್ಯ. ಶೇ.20 ರಷ್ಟು ಶಾಲೆಗಳು ಎಸಿಯಲ್ಲೇ ನಡೆಯುತ್ತಿವೆ. ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂದರು.
ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನಾನು ಸಿಪಿಎಂ, ಜೆಡಿಎಸ್, ರೈತ ಸಂಘ ಎಲ್ಲರ ಮತವನ್ನೂ ಕೇಳುತ್ತೇನೆ. ಮತದಾರರಿಗೆ ಮುಕ್ತ ಮತದಾನದ ಅವಕಾಶವಿದ್ದು, ಯಾರು ಯಾರಿಗೆ ಬೇಕಾದರೂ ಮತ ಹಾಕಬಹುದು. ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಧ್ವನಿಯಾಗಿ, ಅವರ ಪರವಾಗಿ ಕಾಂಗ್ರೆಸ್ ಸದಾ ನಿಂತಿದೆ. ಹೀಗಾಗಿ ಎಲ್ಲರ ಬಳಿ ಮತ ಕೇಳಿದ್ದೇನೆ ಎಂದು ಡಿಕೆಶಿ ಹೇಳಿದರು.