ಬೆಂಗಳೂರು : ಜಿಲ್ಲಾವಾರು ಪಾಸಿಟಿವಿಟಿ ದರ, ಬೆಡ್ಗಳ ಲಭ್ಯತೆ, ಮರಣ ಪ್ರಮಾಣ, ಸೋಂಕು ನಿಯಂತ್ರಣಾ ಕ್ರಮಗಳ ಕುರಿತಂತೆ ಹಿರಿಯ ಅಧಿಕಾರಿಗಳ ಜತೆ ಸಚಿವ ಸುಧಾಕರ್ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಇಲಾಖೆಯ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆ ಆಯುಕ್ತ, ಅಧಿಕಾರಿಗಳು ಭಾಗಿಯಾಗಿದ್ದರು.
ಸಭೆ ಬಳಿಕ ಮಾತಾನಾಡಿದ ಸಚಿವ ಸುಧಾಕರ್, ಜೂನ್ 21ರಂದು 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಿದೆ. ಅಂದು ಬಹಿರಂಗ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲಾಗಿದೆ. ಹೀಗಾಗಿ, ಸೋಮವಾರದಂದು ಸಾಂಕೇತಿಕವಾಗಿ ಲಸಿಕಾ ಮೇಳ ನಡೆಸಲಾಗುವುದು. 18 ರಿಂದ 44 ರವರೆಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತೆ. ಈಗಾಗಲೇ ಕೋವಿಶೀಲ್ಡ್ 14 ಲಕ್ಷ ಡೋಸ್ ದಾಸ್ತಾನು ಇದೆ. ಅಂದು ಒಂದೇ ದಿನ 5 ರಿಂದ 7 ಲಕ್ಷ ಲಸಿಕೆ ನೀಡಲು ಗುರಿ ಹೊಂದಿದ್ದೇವೆ ಎಂದರು. ಈವರೆಗೆ ರಾಜ್ಯದಲ್ಲಿ 1 ಕೋಟಿ 80 ಡೋಸ್ ಹಾಕಿದ್ದೇವೆ ಎಂದರು.
‘ಲಾಕ್ ಡೌನ್ ಸಡಿಲಿಕೆ’
ರಾಜ್ಯದಲ್ಲಿ ಲಾಕ್‌ಡೌನ್ ಹಂತ ಹಂತವಾಗಿ ಸಡಿಲಗೊಳಿಸಲು ಚರ್ಚೆ ನಡೆಸಿದ್ದೇವೆ. ಪಾಸಿಟಿವಿಟಿ ಆಧಾರದಲ್ಲಿ ಜಿಲ್ಲೆಗಳಲ್ಲಿ ಅನ್‌ಲಾಕ್ ಮಾಡೋ ಬಗ್ಗೆ ಚರ್ಚಿಸಿದ್ದೇವೆ. ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ 16 ಜಿಲ್ಲೆಗಳಿವೆ. 13 ಜಿಲ್ಲೆಗಳಲ್ಲಿ ಶೇ.5ರಿಂದ ಶೇ.10ರಷ್ಟು ಪಾಸಿಟಿವಿಟಿ ದರವಿದೆ. ಮೈಸೂರೊಂದರಲ್ಲೇ ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇದೆ. ಪಾಸಿಟಿವಿಟಿ ದರ ಆಧರಿಸಿಯೇ ಮುಂದಿನ 14 ದಿನಕ್ಕೆ ಅನ್ಲಾಕ್ ಕ್ರಮ ಕೈಗೊಳ್ಳಲಾಗುತ್ತೆ ಎಂದರು.