ಬೆಂಗಳೂರು:ಕೋವಿಡ್ ಪ್ರಕರಣಗಳು ಇನ್ನಷ್ಟು ಕಡಿಮೆಯಾದ ಹಿನ್ನೆಲೆ ಸೋಮವಾರದಿಂದ ಎರಡನೇ ಹಂತದ ಅನ್ಲಾಕ್ (Unlock 2.0) ಮಾಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಇಂದು ಸಂಜೆ 5.30 ಕ್ಕೆ ಸಿಎಂ ನಿವಾಸ ಕಾವೇರಿಯಲ್ಲಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಯಲಿದೆ.
ಜೂನ್ 21 ರಿಂದ ಅನ್ಲಾಕ್ 2.O ಜಾರಿಗೆ ತಾಂತ್ರಿಕ ಸಲಹಾ ಸಮಿತಿ ಅನುಮತಿ ನೀಡಿದೆ. ಎರಡನೇ ಹಂತದ ಅನ್ಲಾಕ್ ಜಾರಿಯಾದರೆ ಮಾಲ್, ಹೋಟೆಲ್, ಚಿಕ್ಕ ಮಾರುಕಟ್ಟೆ, ಸಲೂನ್, ಮದುವೆ ಸಮಾರಂಭಗಳಿಗೆ 50 ಜನ ಪಾಲ್ಗೊಳ್ಳಲು ಅವಕಾಶ ನೀಡುವ ಸಾಧ್ಯತೆ ಇದೆ.
ವಾಣಿಜ್ಯ ಮಳಿಗೆಗಳು ಓಪನ್:
ಬಟ್ಟೆ ಅಂಗಡಿ, ಚಿನ್ನದಂಗಡಿ ಸೇರಿದಂತೆ ಎಲ್ಲಾ ಬಗೆಯ ವಾಣಿಜ್ಯ ಮಳಿಗೆಗಳು ಕೂಡ ಜೂನ್ 21 ರಿಂದ ಆರಂಭಿಸಲು ಅನುಮತಿ ಸಿಗುವ ನಿರೀಕ್ಷೆ ಇದೆ. ದಿನಕ್ಕೆ 8 ಗಂಟೆಗಳ ಕಾಲ ವ್ಯಾಪಾರ ವಹಿವಾಟು ಮಾಡಲು ಅವಕಾಶ ಸಿಗಲಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಶೇ.50 ರಷ್ಟು ಗ್ರಾಹಕರಿಗೆ ಅವಕಾಶ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ ಎನ್ನಲಾಗಿದೆ.
ಸಿನಿಮಾ ಥಿಯೇಟರ್, ಪಬ್, ಬಾರ್, ಜಿಮ್, ಸ್ವಿಮ್ಮಿಂಗ್ ಪೂಲ್, ಕ್ರೀಡಾಂಗಣಗಳಿಗೆ ಅನುಮತಿ ಸಿಗುವುದು ಕಷ್ಟ. ರಾಜ್ಯದಲ್ಲಿ ಮತ್ತಷ್ಟು ಕೊರೊನಾ ಸೋಂಕು ಕಡಿಮೆಯಾದರೆ ಅವುಗಳಿಗೆ ಅನುಮತಿ ನೀಡಬಹುದು ಎಂಬ ಮಾಹಿತಿಯಿದೆ.
ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳು ಮತ್ತು ಮೆಟ್ರೋ ಸಂಚಾರ ಪುನಾರಂಭವಾಗುವುದು ಬಹುತೇಕ ಖಚಿತವಾಗಿದೆ. ಸಾರಿಗೆ ಸೇವೆಗಳ ಪುನಾರಂಭಕ್ಕೆ ಸರ್ಕಾರ ಷರತ್ತುಬದ್ಧ ಅನುಮತಿ ನೀಡುವ ಸಾಧ್ಯತೆಯಿದೆ.
ಶೇ. 50ರಷ್ಟು ಬಸ್ಗಳ ಸಂಚಾರ:
ಅನ್ಲಾಕ್ 2.0 ಜಾರಿಯಾದರೆ ಶೇ. 50ರಷ್ಟು ಬಸ್, ಮೆಟ್ರೋ ಓಡಾಟಕ್ಕೆ ಅವಕಾಶ ಸಿಗಬಹುದು. ಬೆಂಗಳೂರಿನಲ್ಲಿ 6,400 ಬಿಎಂಟಿಸಿ ಬಸ್ಗಳ ಪೈಕಿ 1,500ರಿಂದ 2000 ಬಸ್ಗಳು ರಸ್ತೆಗಿಳಿಯುವ ಸಾಧ್ಯತೆಯಿದೆ. ಸುರಕ್ಷತೆಯ ದೃಷ್ಟಿಯಿಂದ ಓಲ್ವೋ ಬಸ್ಗಳು ಅನುಮತಿ ನೀಡುವುದರ ಬಗ್ಗೆ ಇನ್ನೂ ಯಾವುದೇ ಖಚಿತ ಮಾಹಿತಿ ತಿಳಿದು ಬಂದಿಲ್ಲ.