ಬೆಂಗಳೂರು: ಇತ್ತೀಚೆಗೆ ವಿಧಾನಸಭೆಯ ಸಭಾಂಗಣಕ್ಕೆ ಆಗಮಿಸಿ ಜೆಡಿಎಸ್ ಶಾಸಕಿ ಕರೆಮ್ಮ ಅವರಿಗೆ ಮೀಸಲಾದ ಸ್ಥಾನದಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿಯನ್ನು ಪತ್ತೆ ಹಚ್ಚಿ ಇದೀಗ ವಿಧಾನಸೌಧ ಪೊಲೀಸ್ ಠಾಣೆಗೆ ಒಪ್ಪಿಸಿದ್ದು, ಪೊಲೀಸರು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು ಟಿ ಖಾದರ್ ಸದನಕ್ಕೆ ಮಾಹಿತಿ ನೀಡಿದ್ದಾರೆ. ಪ್ರಶ್ನೋತ್ತರ ಕಲಾಪದ ನಂತರ ಸಭಾಧ್ಯಕ್ಷರು, ಈ ವಿಷಯ ಕುರಿತು ಸ್ವಯಂ ಪ್ರೇರಿತ ಹೇಳಿಕೆ ನೀಡಿ, ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ಸದನಕ್ಕೆ ಬಂದಿದ್ದ ಅಪರಿಚಿತ ವ್ಯಕ್ತಿಯನ್ನು ತಿಪ್ಪೇರುದ್ರಪ್ಪ ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.
ಇವರು 76 ವರ್ಷದ ಚಿತ್ರದುರ್ಗದ ನಿವಾಸಿವಾಗಿದ್ದಾರೆ. ಈ ವ್ಯಕ್ತಿ ತಾನು ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎಂದು ವಿಧಾನಸಭೆ ಭದ್ರತಾ ಸಿಬ್ಬಂದಿಗೆ ಸುಳ್ಳು ಹೇಳಿ ಸದನ ಪ್ರವೇಶಿಸಿದ್ದರು. ಈ ಕ್ಷೇತ್ರವನ್ನು ಎನ್ ವೈ ಗೋಪಾಲಕೃಷ್ಣ ಅವರು ಪ್ರತಿನಿಧಿಸುತ್ತಿದ್ದು, ಅವರ ಹೆಸರಿನಲ್ಲಿ ಈ ವ್ಯಕ್ತಿ ಸದನಕ್ಕೆ ಆಗಮಿಸಿದ್ದರು. ವ್ಯಕ್ತಿಯ ಬಗ್ಗೆ ಸಂಶಯಗೊಂಡ ಅಕ್ಕ ಪಕ್ಕದ ಶಾಸಕರು ತಮ್ಮ ಗಮನಕ್ಕೆ ತಂದಾಗ ಭದ್ರತಾ ಸಿಬ್ಬಂದಿಯಿಂದ ವಿಚಾರಣೆಗೆ ಒಳಪಡಿಸಿದಾಗ, ಸುಳ್ಳು ಹೇಳಿ ಸದನಕ್ಕೆ ಬಂದಿರುವ ವಿಚಾರ ಖಚಿತವಾಯಿತು. ಅವರನ್ನು ಕೂಡಲೇ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದರು. ಈ ಘಟನೆ ಹಿನ್ನೆಲೆಯಲ್ಲಿ ಇನ್ನು ಮುಂದೆ ಶಾಸಕರು, ಸಚಿವರು ಮತ್ತು ಮಾಧ್ಯಮದವರು ಭದ್ರತಾ ಸಿಬ್ಬಂದಿಗೆ ತಮ್ಮ ಗುರುತಿನ ಚೀಟಿ ತೋರಿಸಿ ಒಳ ಬರಬೇಕು. ಭದ್ರತಾ ಸಿಬ್ಬಂದಿ ಜೊತೆ ಸಹಕರಿಸಬೇಕು. ಯಾರೂ ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಳ್ಳಬಾರದು ಎಂದು ಸ್ಪೀಕರ್ ಮನವಿ ಮಾಡಿದರು.