ಕರ್ನಾಟಕ

karnataka

ETV Bharat / state

ಯುಜಿಸಿ ಮಾರ್ಗಸೂಚಿಗಳ ಆಧಾರದಲ್ಲಿ ವಿವಿಯಲ್ಲಿ ನೇಮಕ ಪ್ರಕ್ರಿಯೆ ನಡೆಸಬೇಕು: ಹೈಕೋರ್ಟ್ - ಯುಜಿಸಿ ನೇಮಕಾತಿ ಮಾರ್ಗಸೂಚಿ

ನೇಮಕಾತಿ ವೇಳೆ ಯುಜಿಸಿ ನಿಯಮಗಳನ್ನು ವಿಶ್ವವಿದ್ಯಾಲಯಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೈಕೋರ್ಟ್ ಧಾರವಾಡ ಪೀಠ ಅಭಿಪ್ರಾಯಪಟ್ಟಿದೆ.

ಹೈಕೋರ್ಟ್
ಹೈಕೋರ್ಟ್

By ETV Bharat Karnataka Team

Published : Aug 26, 2023, 7:21 PM IST

ಬೆಂಗಳೂರು:ವಿಶ್ವವಿದ್ಯಾಲಯ ಧನ ಸಹಯೋಗ ಆಯೋಗ(ಯುಜಿಸಿ)ದ ನಿಯಮಗಳನ್ನು ಅಳವಡಿಸಿಕೊಂಡಿರುವ ವಿಶ್ವವಿದ್ಯಾಲಯಗಳಲ್ಲಿ ಯಾವುದೇ ಹುದ್ದೆಯನ್ನು ನೇಮಕ ಮಾಡುವ ಸಂದರ್ಭದಲ್ಲಿ ಉನ್ನತಾಧಿಕಾರ ಸಮಿತಿ ವಿಧಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಹೈಕೋರ್ಟ್​ ಧಾರವಾಡ ಪೀಠ ಅಭಿಪ್ರಾಯಪಟ್ಟಿದೆ.

ತಮ್ಮನ್ನು ಆಯ್ಕೆ ಪಟ್ಟಿಯಲ್ಲಿ ಕೈಬಿಟ್ಟ ಕ್ರಮವನ್ನು ಪ್ರಶ್ನಿಸಿ ಬೆಂಗಳೂರಿನ ಯಲಹಂಕ ನಿವಾಸಿ ಎಸ್ ಎ ವೇಣು ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಪುರಸ್ಕರಿಸಿ ಈ ಅಭಿಪ್ರಾಯಪಟ್ಟಿದೆ. ಜೊತೆಗೆ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಯುಜಿಸಿ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡಿರುವುದಾಗಿ 2013ರ ಮಾರ್ಚ್ 13ರಂದು ಅಧಿಸೂಚನೆ ಹೊರಡಿಸಿದೆ. ಈ ನಿಟ್ಟಿನಲ್ಲಿ ನೇಮಕಾತಿ ಹಾಗೂ ಬಡ್ತಿ ನೀಡುವ ಪ್ರಕ್ರಿಯೆಯನ್ನೂ ಮಾರ್ಗಸೂಚಿಗಳ ಅನುಸಾರವಾಗಿಯೇ ನಡೆಸಬೇಕು ಎಂದು ತಿಳಿಸಿದೆ.

ಅಲ್ಲದೆ, ಯುಜಿಸಿ ಮಾರ್ಗಸೂಚಿಗಳ ಪ್ರಕಾರ ಸ್ಕೋರ್​ ಕಾರ್ಡ್ ಆಧಾರದಲ್ಲಿ ನೇಮಕ ಮಾಡಬೇಕು ಎಂದು ತಿಳಿಸಿದೆ. ಆದರೆ, ಪ್ರಸ್ತುತ ಪ್ರಕರಣದಲ್ಲಿ ಅಂಕಗಳನ್ನು ಪರಿಗಣಿಸಿರುವ ಅಂಶ ಗೊತ್ತಾಗಿದೆ. ಇದು ಯುಜಿಸಿ ನಿಯಮಗಳಿಗೆ ವಿರುದ್ಧವಾಗಿದೆ. ಜೊತೆಗೆ, ಅರ್ಜಿದಾರರು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಿಯಮಗಳ ಅನುಸಾರವಾಗಿ ಸಲ್ಲಿಕೆ ಮಾಡಿದ್ದಾರೆ. ಯಾವುದೇ ನಿಯಮಗಳನ್ನು ಮೀರಿಲ್ಲ ಎಂದು ಪೀಠ ತಿಳಿಸಿದೆ.

ಯಾವುದೇ ಹುದ್ದೆಗೆ ಯಾರು ಅರ್ಹರು ಎಂಬುದನ್ನು ಪರಿಶೀಲನೆ ಮಾಡುವುದು ವಿಶ್ವವಿದ್ಯಾಲಯಗಳಿಗೆ ಬಿಟ್ಟ ವಿಚಾರವಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡುವ ಪರಿಣತಿಯೂ ನ್ಯಾಯಾಲಯಗಳಿಗಿಲ್ಲ. ಆದರೂ ನೇಮಕಾತಿ ಪ್ರಕ್ರಿಯೆ ಕಾನೂನು ಬಾಹಿರ ಹಾಗೂ ಸಂವಿಧಾನದ ಪರಿಚ್ಛೇದ 14ರ ಉಲ್ಲಂಘನೆಯಾಗಿದ್ದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಿ ಇಡೀ ಪ್ರಕ್ರಿಯೆಯನ್ನೇ ರದ್ದು ಮಾಡಲಿದೆ. ಪ್ರಸ್ತುತ ಪ್ರಕರಣದಲ್ಲಿ ನೇಮಕಾತಿ ಪ್ರಕ್ರಿಯೆ ಕಾನೂನಿಗೆ ವ್ಯತಿರಿಕ್ತವಾಗಿದ್ದಲ್ಲಿ ಮಧ್ಯಪ್ರವೇಶ ಮಾಡಿ ನ್ಯಾಯಾಂಗ ಪರಿಶೀಲನೆ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟು, ಮುಂದಿನ ಎಂಟು ವಾರಗಳಲ್ಲಿ ಮತ್ತೆ ನೇಮಕ ಪ್ರಕ್ರಿಯೆಯನ್ನು ನಡೆಸಬೇಕು ಎಂದು ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು?ಢಾರವಾಡ ಕೃಷಿ ವಿಶ್ವವಿದ್ಯಾಯದಲ್ಲಿ ಖಾಲಿ ಇದ್ದ ಆಹಾರ ಎಂಜಿನಿಯರ್​ ಹುದ್ದೆಗೆ ಅಂಕಗಳನ್ನು ಆಧರಿಸಿ ಡಿ.ನಾಗರಾಜು 85.4 ಅಂಕಗಳನ್ನು ಪಡೆದಿದ್ದು, ಅವರನ್ನು ನೇಮಕ ಮಾಡಿ ಅಂತಿಮ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರ ವೇಣು, ತನಗೆ ಆರು ವರ್ಷ ಬೋಧನಾ ಅನುಭವ ಇದ್ದು, ಇದಕ್ಕೆ ಆರು ಅಂಕಗಳು ಲಭ್ಯವಾಗಲಿದೆ. ಜೊತೆಗೆ, ಪಿಹೆಚ್​ಡಿ ಪದವಿಯಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದು, ಇದಕ್ಕೆ ಮೂರು ಅಂಕಗಳು ಹೆಚ್ಚಳವಾಗಲಿದೆ. ಒಟ್ಟು ಸೇರಿದಲ್ಲಿ 86.6 ಅಂಕಗಳಾಗಲಿದ್ದು, ಆಯ್ಕೆಯಾಗಿರುವ ನಾಗರಾಜು ಎಂಬುವರಿಗಿಂತಲೂ ಹೆಚ್ಚು ಅಂಕಗಳು ಪಡೆದುಕೊಂಡಂತಾಗಲಿದೆ. ಸ್ಕೋರ್​ ಕಾರ್ಡ್ ಪದ್ಧತಿಯನ್ನು ಅನುಸರಿಸಿದಲ್ಲಿ ಆಯ್ಕೆಯಾಗಿರುವವರಿಗಿಂತ ಹೆಚ್ಚು ಅಂಕಗಳಾಗಲಿದೆ. ಆದರೆ, ವಿಶ್ವವಿದ್ಯಾಲಯ ಯುಜಿಸಿ ನಿಯಮಗಳನ್ನು ಉಲ್ಲಂಘಿಸಿ ಅಂಕಗಳನ್ನು ಪರಿಗಣಿಸಿದೆ. ಇದರಿಂದ ತಮಗೆ ಅನ್ಯಾಯವಾಗಿದೆ ಎಂದು ಅರ್ಜಿಯಲ್ಲಿ ಕೋರಿದ್ದರು.

ನಾಗರಾಜು ಅವರ ನೇಮಕವನ್ನು ಸಮರ್ಥಿಸಿಕೊಂಡಿದ್ದ ವಿಶ್ವವಿದ್ಯಾಲಯ, ಇದು ಕೇವಲ ಪರಿಶಿಷ್ಟ ಜಾತಿ ಮತ್ತು ಪಂಗಡ ಅಭ್ಯರ್ಥಿಗಳ ನೇಮಕ ಪ್ರಕ್ರಿಯೆಯಾಗಿದೆ. ಇತರೆ ನೇಮಕ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಲಾಗುತ್ತಿದೆ ಎಂದು ವಿವರಿಸಿತ್ತು.

ಇದನ್ನೂ ಓದಿ: ‘ಪ್ರಾರ್ಥನೆ ಸಲ್ಲಿಸುವುದರಿಂದ ಅಪಾಯವಿದೆ’.. ಅರ್ಜಿ ವಜಾಗೊಳಿಸಿ ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ABOUT THE AUTHOR

...view details