ಬೆಂಗಳೂರು: ರಾಜ್ಯದಲ್ಲಿ ಏಳು ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕಕ್ಕೆ ಧ್ವನಿಮತದ ಮೂಲಕ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಸದನದಲ್ಲಿ ವಿಧೇಯಕದ ಉದ್ದೇಶಗಳನ್ನು ವಿವರಿಸಿದರು.
ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ ಜಿಲ್ಲೆಯಲ್ಲಿ ಹೊಸ ವಿಶ್ವವಿದ್ಯಾಲಯಗಳು ಆರಂಭವಾಗಲಿವೆ. ಅಲ್ಲದೇ, ಮಂಡ್ಯ ವಿಶ್ವವಿದ್ಯಾಲಯದ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಯ ಸಂಬಂಧ ಪ್ರತಿ ವಿಶ್ವವಿದ್ಯಾಲಯಕ್ಕೆ ಎರಡು ಕೋಟಿ ರೂ. ನಂತೆ ವಾರ್ಷಿಕವಾಗಿ 14 ಕೋಟಿ ರೂ. ನೀಡಲಾಗುತ್ತದೆ.