ಬೆಂಗಳೂರು: "ನಂದಿನಿ ಬ್ರ್ಯಾಂಡ್ ಕರ್ನಾಟಕದ ಹೆಮ್ಮೆ, ಅದು ಮತ್ತಷ್ಟು ಬೆಳೆಯಬೇಕು ಎನ್ನುವುದೇ ರಾಜ್ಯ ಸರ್ಕಾರದ ಪ್ರಮುಖ ಆದ್ಯತೆ. ಆದರೆ, ರಾಜ್ಯದಲ್ಲಿ ಅಮುಲ್ ಹಾಲು ಮತ್ತು ಮೊಸರು ಆನ್ ಲೈನ್ ಖರೀದಿ ಜನರ ಆಯ್ಕೆಗೆ ಬಿಟ್ಟ ವಿಚಾರವಾಗಿದೆ" ಎಂದು ಪರೋಕ್ಷವಾಗಿ ಅಮುಲ್ ಆನ್ಲೈನ್ ಮಾರಾಟ ನಿರ್ಬಂಧ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, "ನಂದಿನಿ ಕರ್ನಾಟಕದ ಹೆಮ್ಮೆಯ ಸಂಸ್ಥೆ. ಅಮುಲ್ ಆನ್ಲೈನ್ ಮಾರಾಟಕ್ಕೆ ನಿರ್ಬಂಧ ಸಾಧ್ಯವಿಲ್ಲ. ಆನ್ಲೈನ್ ಖರೀದಿ ಜನರ ಆಯ್ಕೆ, ಆದರೆ, ಬಳಕೆಯ ದೃಷ್ಟಿಯಿಂದ ಕೆಎಂಎಫ್ ಬೆಳೆಯಬೇಕು. ಸರ್ಕಾರದ ಆಧ್ಯತೆಯೂ ಕೆಎಂಎಫ್ ಬೆಳೆಸಬೇಕು ಎನ್ನುವುದಾಗಿದೆ. ಅಮುಲ್ ಗಿಂತ ಬಲಿಷ್ಟವಾಗಿ ಕೆಎಂಎಫ್ ಬೆಳೆಯಬೇಕಿದೆ" ಎಂದರು.
"ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಗ್ಯಾರಂಟಿಗಳು ಸುಳ್ಳು. ನಾಲ್ಕು ಗ್ಯಾರಂಟಿ ಯೋಜನೆಗಳಿಗೆ ಒಂದು ಲಕ್ಷ ಕೋಟಿ ಬೇಕು. ರಾಜ್ಯದ ಬಜೆಟ್ ಮೂರು ಲಕ್ಷ ಕೋಟಿ, ಅದರಲ್ಲಿ ಒಂದು ಲಕ್ಷ ಕೋಟಿ ಕೇವಲ ನಾಲ್ಕು ಯೋಜನೆಗೆ ವ್ಯಯ ಮಾಡುವುದು ಅಸಾಧ್ಯ. ಕಾಂಗ್ರೆಸ್ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ಕೊಡುತ್ತೇವೆ ಎನ್ನುವುದು ಸುಳ್ಳು ಭರವಸೆ. ರಾಜಸ್ಥಾನದಲ್ಲಿ ಅವರು ನೀಡಿದ್ದ ಭರವಸೆ ಈಡೇರಿಸಿಲ್ಲ, ಅಲ್ಲಿನ ಪ್ರಣಾಳಿಕೆ ನೋಡಿ ಕಾಂಗ್ರೆಸ್ ಇಲ್ಲಿ ಮಾತನಾಡಲಿ" ಎಂದರು.
"ಕೆಲವೆಡೆ ಪಡಿತರ ಕಾಳಸಂತೆ ಮಾರಾಟ ನಡೆದಿದೆ. ಇನ್ನು ಕೆಲವೆಡೆ ಕಾಳಸಂತೆ ಮಾರಾಟ ಮಾಡಿ ಸಿಕ್ಕಿಬಿದ್ದಿದ್ದಾರೆ. ಜನರಿಗೆ ತಿಂಗಳಿಗೆ ಎಷ್ಟು ಧಾನ್ಯ ಬೇಕು, ಯಾವ ಧಾನ್ಯ ಬೇಕು ಎನ್ನುವ ಬಗ್ಗೆ ಸರ್ವೆ ಮಾಡಬೇಕಿದೆ. ನಮ್ಮ ಜಿಲ್ಲೆ ಉಡುಪಿಯಲ್ಲಿ ಅಕ್ಕಿ ಕೊಟ್ಟರೆ ಬಳಸಲ್ಲ, ಅದೆಲ್ಲ ಬ್ಲ್ಯಾಕ್ ಮಾರ್ಕೆಟ್ಗೆ ಹೋಗಲಿದೆ. ಅದಕ್ಕಾಗಿ ನಾವು ಆ ಭಾಗದಲ್ಲಿ ಈಗ ಕುಚ್ಚಲಕ್ಕಿ ಕೊಡುತ್ತಿದ್ದೇವೆ. ದಕ್ಷಿಣ ಕನ್ನಡದಲ್ಲಿ ಈಗ ಕುಚ್ಚಲಕ್ಕಿ ಕೊಡಲಾಗುತ್ತಿದೆ. ಆಯಾ ಭಾಗದ ಜನರು ಬಳಸುವ ಧಾನ್ಯವನ್ನೇ ಕೊಡಬೇಕು, ಆಗ ದುರುಪಯೋಗ ಕಡಿಮೆಯಾಗಲಿದೆ" ಎಂದು ಹೇಳಿದರು.
"80 ಕೋಟಿ ಜನರಿಗೆ ಅಕ್ಕಿ ಗೋಧಿ ರಾಗಿ ಕೊಡುವ ಕೆಲಸ ನಡೆಯುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಆಹಾರ ಒದಗಿಸಬೇಕು ಎಂಬ ಈ ಕಾಯ್ದೆ ತರಲಾಗಿದೆ. ಇತ್ತೀಚೆಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕು ಎನ್ನುವ ಬಗ್ಗೆ ಚರ್ಚೆಯಾಗಿದೆ. 2 ಲಕ್ಷ ಕೋಟಿ ವೆಚ್ಚ ಮಾಡಿ ಪಿಎಂ ಗರೀಬ್ ಕಲ್ಯಾಣ ಯೋಜನೆ ಮುಂದುವರೆದಿದೆ. 1.17 ಕೋಟಿ ಜನ ರಾಜ್ಯದಲ್ಲಿ ಅಕ್ಕಿ ಮತ್ತು ರಾಗಿ ಪಡೆಯುತ್ತಿದ್ದಾರೆ. ಅಂತ್ಯೋದಯ ಯೋಜನೆಯಲ್ಲಿ 10.50 ಲಕ್ಷ ಕುಟುಂಬಕ್ಕೆ ಅನ್ನ ಕೊಡುವ ಕೆಲಸ ನಡೆಯುತ್ತಿದೆ" ಎಂದು ತಿಳಿಸಿದರು.