ಬೆಂಗಳೂರು:ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತೊರೆದಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೋಲು ಖಚಿತ. ಭಾರತೀಯ ಜನತಾ ಪಕ್ಷ ಅತಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಸ್ವಂತ ಶಕ್ತಿ ಬಲದಿಂದಲೇ ಅಧಿಕಾರಕ್ಕೆ ಬರಲಿದೆ ಎಂದು ರಾಜ್ಯ ಚುನಾವಣೆ ನಿರ್ವಹಣಾ ಸಮಿತಿ ಸಂಚಾಲಕಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 'ಈಟಿವಿ ಭಾರತ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು "ಬಿಜೆಪಿ 130ಕ್ಕೂ ಹೆಚ್ಚಿನ ಕ್ಷೇತ್ರಗಳನ್ನು ಗೆದ್ದು ಮರಳಿ ಅಧಿಕಾರಕ್ಕೆ ಬರಲಿದೆ" ಎಂದು ಹೇಳಿದ್ದಾರೆ.
ಪ್ರಶ್ನೆ: ಶೆಟ್ಟರ್, ಸವದಿ ಸೇರಿದಂತೆ ಹಲವರು ಬಿಜೆಪಿ ಬಿಟ್ಟಿದ್ದಕ್ಕೆ ಹೆಚ್ಚಿನ ಬಂಡಾಯ ತಲೆದೋರಿದೆ. ಪಕ್ಷ ಹೇಗೆ ನಿಭಾಯಿಸಲಿದೆ?
ಉತ್ತರ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿಯವರಿಗೆ ಭಾರತೀಯ ಜನತಾ ಪಕ್ಷ ಸಾಕಷ್ಟು ಅಧಿಕಾರ ನೀಡಿತ್ತು. ಉತ್ತಮ ಅವಕಾಶಗಳನ್ನೂ ಕೊಟ್ಟಿತ್ತು. ಶೆಟ್ಟರ್ ಅವರಿಗೆ ಮುಖ್ಯಮಂತ್ರಿ ಹುದ್ದೆಯಂತಹ ಉನ್ನತ ಹುದ್ದೆ ನೀಡಲಾಗಿತ್ತು. ಆದರೂ ಕೇವಲ ಶಾಸಕರಾಗಿರಲು ಕಾಂಗ್ರೆಸ್ಗೆ ಹೋಗಿದ್ದಾರೆ. ಸೋತ ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡಲಾಗಿತ್ತು. ಇಬ್ಬರೂ ಬಿಟ್ಟು ಹೋಗಿದ್ದಕ್ಕೆ ಬೇಸರವಿದೆ. ಇಬ್ಬರು ಪ್ರಮುಖರು ಪಕ್ಷ ಬಿಟ್ಟು ಹೋಗಿದ್ದರಿಂದ ಉಂಟಾಗಿರುವ ನಷ್ಟವನ್ನು ಅರಗಿಸಿಕೊಳ್ಳುವ ಶಕ್ತಿ, ಸಾಮರ್ಥ್ಯ ಬಿಜೆಪಿಗಿದೆ.
ಪ್ರಶ್ನೆ: ಒಂದೊಂದು ಕ್ಷೇತ್ರವು ಬಹಳ ಮಹತ್ವದ್ದಾಗಿರುವಾಗ ಶೆಟ್ಟರ್, ಸವದಿ ಕಳೆದುಕೊಳ್ಳುವುದು ಪಕ್ಷಕ್ಕೆ ನಷ್ಟವಾಗುವುದಿಲ್ಲವೇ?
ಉತ್ತರ- ಶೆಟ್ಟರ್ ಮತ್ತು ಸವದಿ ಅವರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ. ಇದನ್ನ ಬರೆದಿಟ್ಟುಕೊಳ್ಳಿ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ, ಜೆಪಿ ನಡ್ಡಾ ಅವರು ಪೂರ್ಣ ಪ್ರಮಾಣದ ಸರ್ಕಾರ ರಚಿಸಲು ಶ್ರಮಿಸುತ್ತಿದ್ದಾರೆ. ಟಿಕೆಟ್ ಹಂಚಿಕೆಯಲ್ಲಿ 72 ಜನ ಹೊಸಬರಿಗೆ ಅವಕಾಶ ನೀಡಲಾಗಿದೆ. 70 ಜನ ಅಭ್ಯರ್ಥಿಗಳಿಗೆ 50 ವರ್ಷದೊಳಗಿನ ಕೆಳಗಿನವರಿಗೆ ಅವಕಾಶ ನೀಡಲಾಗಿದೆ. 14 ಜನ ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ.
ಪ್ರಶ್ನೆ: ಬಿಜೆಪಿಯಲ್ಲಿ 14 ಜನ ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿರುವುದು ನಿಮಗೆ ಸಂತಸವೇ?.
ಉತ್ತರ- ಮಹಿಳೆಯರು ಇನ್ನಷ್ಟು ಬೆಳೆಯಬೇಕು. ಕ್ಷೇತ್ರದಲ್ಲಿ ಮಹಿಳೆಯರು ಕೆಲಸ ಮಾಡಿ ಗುರುತಿಸಿಕೊಳ್ಳಬೇಕು. ಕೇವಲ ಚುನಾವಣೆ ಬಂದಾಗ ಕೆಲಸ ಮಾಡುವುದಲ್ಲ, ಮಹಿಳೆಯರಿಗೆ ಕಡಿಮೆ ಸೀಟು ಕೊಟ್ಟಿದ್ದರ ಬಗ್ಗೆ ನನಗೆ ಹೆಚ್ಚಿನ ಖುಷಿ ಇಲ್ಲ. ಸಂತೋಷವೇನೆಂದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೇಂದ್ರ ಸಂಪುಟದಲ್ಲಿ 11 ಜನ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದ್ದಾರೆ. ಅದರಲ್ಲಿ ನನಗೂ ಅವಕಾಶ ಸಿಕ್ಕಿದೆ. ಈ ರೀತಿಯ ಅವಕಾಶ ಬೇರೆ ಬೇರೆ ಕಡೆಯೂ ಸಿಗುವಂತಾಗಬೇಕು.
ಪ್ರಶ್ನೆ: ಕೇವಲ 14 ಜನ ಮಹಿಳಾ ಅಭ್ಯರ್ಥಿಗಳಿಗೆ ಸೀಟು ನೀಡಿದರೆ ರಾಜ್ಯದಲ್ಲಿ ಮಹಿಳಾ ಮುಖ್ಯಮಂತ್ರಿ ಯಾವಾಗ ಬರಬೇಕು?. ನೀವು ಸಹ ಮುಖ್ಯಮಂತ್ರಿಯ ಆಕಾಂಕ್ಷಿತರಾಗಿದ್ದೀರ?
ಉತ್ತರ - ನನಗೆ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇಲ್ಲ. ರಾಜ್ಯದಲ್ಲಿ ಮಹಿಳಾ ಮುಖ್ಯಮಂತ್ರಿ, ಪುರುಷ ಮುಖ್ಯಮಂತ್ರಿ ಎನ್ನುವ ಚರ್ಚೆ ಇಲ್ಲ. ಇಲ್ಲಿ ಭಾರತೀಯ ಜನತಾ ಪಕ್ಷದ ಮುಖ್ಯಮಂತ್ರಿ ಆಗಬೇಕು. ನರೇಂದ್ರ ಮೋದಿ ಅವರಿಗೆ ಶಕ್ತಿ ತುಂಬುವಂತಾಗಬೇಕು. ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಬೇಕು. ಡಬಲ್ ಇಂಜಿನ್ ಸರ್ಕಾರದ ಯೋಜನೆಗಳನ್ನ ಜನಸಾಮಾನ್ಯರಿಗೆ ತಲುಪಿಸುವ ಮುಖ್ಯಮಂತ್ರಿ ಬರಬೇಕು. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೆಲಸ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ಅದಕ್ಕೆ ನನಗೆ ಸಂತೋಷವಿದೆ.
ಪ್ರಶ್ನೆ: ಯಡಿಯೂರಪ್ಪ ಅವರ ಬದಲಾವಣೆ ಸಂದರ್ಭದಲ್ಲಿ ನಿಮ್ಮನ್ನ ಮುಖ್ಯಮಂತ್ರಿಯಾಗಿ ನೇಮಕ ಮಾಡುವ ಇಲ್ಲವೇ ರಾಜ್ಯ ಬಿಜೆಪಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ ಚರ್ಚೆ ನಡೆದಿತ್ತು!.
ಉತ್ತರ- ನನ್ನನ್ನ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡುವ ಬಗ್ಗೆ ಚರ್ಚೆ ನಡೆದಿಲ್ಲ. ಒಬ್ಬ ಉತ್ತಮ ಮುಖ್ಯಮಂತ್ರಿ ನೇಮಕ ಮಾಡುವ ಬಗ್ಗೆ ಕೇಂದ್ರದ ಯೋಜನೆಗಳನ್ನ ಜಾರಿಗೆ ತರಬೇಕೆನ್ನುವ ಬಗ್ಗೆ ಮಾತ್ರ ಚರ್ಚೆ ನಡೆಯಿತು.
ಪ್ರಶ್ನೆ: ಬಹಳಷ್ಟು ಕ್ಷೇತ್ರಗಳಲ್ಲಿ ಬಂಡಾಯವಿದೆ. ಆಯನೂರು ಮಂಜುನಾಥ್ ಅಂತವರು ಸಹ ಪಕ್ಷ ಬಿಟ್ಟು ಹೋಗಿದ್ದಾರೆ. ಇದು ಪಕ್ಷದ ಗೆಲುವಿಗೆ ತೊಡಕಾಗುವುದಿಲ್ಲವೇ?.
ಉತ್ತರ- ಅವರವರ ಸ್ವಾರ್ಥಕ್ಕೆ, ಅವರವರ ಲಾಭಕ್ಕೆ ಕೆಲವು ಮುಖಂಡರು ಬಿಜೆಪಿ ಬಿಟ್ಟು ಹೋಗಿದ್ದಾರೆ. ಇದರಿಂದ ಪಕ್ಷಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಆಯನೂರು ಮಂಜುನಾಥ್ ಅವರಿಗೆ ಎಲ್ಲ ರೀತಿಯ ಅವಕಾಶವನ್ನು ನೀಡಲಾಗಿತ್ತು. ಲೋಕಸಭೆ, ರಾಜ್ಯಸಭೆ ಮತ್ತು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಹೀಗಿದ್ದೂ ಅವರು ಪಕ್ಷ ಬಿಟ್ಟು ಹೋಗಿದ್ದು ಸರಿಯಲ್ಲ.
ಪ್ರಶ್ನೆ: ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್ ಭ್ರಷ್ಟಾಚಾರದ ಆರೋಪವಿದೆ. ಮಾಡಾಳ ವಿರೂಪಾಕ್ಷಪ್ಪ ಅವರನ್ನು ಭ್ರಷ್ಟಾಚಾರದ 'ಮಾಡೆಲ್' ಎಂದು ಕಾಂಗ್ರೆಸ್ ಪಕ್ಷ ಟೀಕಿಸುತ್ತಿದೆ.
ಉತ್ತರ -40 ಪರ್ಸೆಂಟ್ ಭ್ರಷ್ಟಾಚಾರ ಎಂದು ಮಾತನಾಡುತ್ತಿರುವವರು ಯಾರು?. ಅವರಿಗೆ ಯಾವ ನೈತಿಕತೆ ಇದೆ?. ಈ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಇದ್ದ ಲೋಕಾಯುಕ್ತ ಸಂಸ್ಥೆಯನ್ನ ಮುಚ್ಚಿ ಹಾಕಿದ ಪಕ್ಷ ಕಾಂಗ್ರೆಸ್. ಇದರ ಕೀರ್ತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಲಾಯಿತು. 40 ಪರ್ಸೆಂಟ್ ಕಮಿಷನ್ ಆರೋಪ ಮಾಡುವ ಹಿಂದೆ ಷಡ್ಯಂತ್ರವಿದೆ.
ಪ್ರಶ್ನೆ: ಚುನಾವಣೆ ಸಮೀಕ್ಷಾ ವರದಿಗಳು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿವೆ ಎಂದು ಹೇಳಿದರೆ, ಇನ್ನು ಕೆಲವು ಸಮೀಕ್ಷೆಗಳು ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ ಎಂದು ಅಭಿಪ್ರಾಯಪಟ್ಟಿವೆಯಲ್ಲ?
ಉತ್ತರ- ರಾಜ್ಯದಲ್ಲಿ ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎನ್ನುವ ಬಗ್ಗೆ ನನಗೆ ವಿಶ್ವಾಸವಿದೆ. 130ಕ್ಕೂ ಹೆಚ್ಚು ಕ್ಷೇತ್ರಗಳನ್ನ ಗೆದ್ದು ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ಯುವಕರಿಗೆ ಮತ್ತು ಜನತೆಗೆ ಪ್ರಧಾನಿ ಮೋದಿ ವಿರುದ್ಧದ ಸರ್ಕಾರ ಬರುವುದು ಬೇಕಿಲ್ಲ. ಮೋದಿ ಅವರ ಜತೆ ಹೆಜ್ಜೆ ಹಾಕುವ ಸರ್ಕಾರ ಬರಬೇಕೆನ್ನುವ ಅಪೇಕ್ಷೆ ಇದೆ. ಇದಕ್ಕಾಗಿ ಮತದಾರರು ಬಿಜೆಪಿಗೆ ಪೂರ್ಣ ಬಹುಮತ ನೀಡಲಿದ್ದಾರೆ.