ಬೆಂಗಳೂರು: ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ, ಸಿರಿಧಾನ್ಯಕ್ಕೆ ಹೆಚ್ಚಿನ ಆದ್ಯತೆ ಮತ್ತು ಕೃಷಿ ಉತ್ಪನ್ನಗಳನ್ನು ಹೆಚ್ಚು ಪ್ರಮಾಣದಲ್ಲಿ ರಪ್ತು ಮಾಡುವುದಕ್ಕೆ ವ್ಯವಸ್ಥೆ ಕಲ್ಪಿಸಿ ರೈತರ ಬದುಕು ಹಸನಾಗಿಸುವ ಸಂಕಲ್ಪ ನಮ್ಮದಾಗಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಎಣ್ಣೆ ತಯಾರಿಸುವಲ್ಲಿ ಸ್ವಾವಲಂಬಿ ಆಗಬೇಕಿದೆ:
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಷ್ಟು ದೊಡ್ಡ ಪ್ರಮಾಣದ ಕೃಷಿ ಭೂಮಿ ಹೊಂದಿದ್ದರೂ ನಾವು ಶೇ.70 ರಷ್ಟು ಪ್ರಮಾಣದಲ್ಲಿ ಖಾದ್ಯ ತೈಲವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಮಲೇಷ್ಯಾ, ಇಂಡೋನೇಷ್ಯಾದಂತಹ ವಿದೇಶದಿಂದ ಪಾಮ್ ಆಯಿಲ್ ತಂದು, ಇಲ್ಲಿನ ಸೂರ್ಯಕಾಂತಿ ಹಾಗೂ ಇತರ ಎಣ್ಣೆಗೆ ಬೆರೆಸಲಾಗುತ್ತಿದೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಮತ್ತು ಬಹಳ ದೊಡ್ಡ ಪ್ರಮಾಣದ ವಿದೇಶಿ ವಿನಿಮಯ ಬೇರೆ ದೇಶಕ್ಕೆ ಹೋಗುತ್ತಿದೆ ಎಂದರು.
ಒಂದೆರಡು ವರ್ಷದ ಒಳಗೆ ಹೆಚ್ಚಿನ ಖಾದ್ಯ ತೈಲ ಉತ್ಪಾದನೆ ಮಾಡಬೇಕು. ವಿದೇಶಿ ವಿನಿಮಯ ಹೊರ ದೇಶಕ್ಕೆ ಹೋಗುವುದನ್ನು ತಪ್ಪಿಸಬೇಕು ಎನ್ನುವ ಟಾರ್ಗೆಟ್ ನಮಗೆ ಪ್ರಧಾನಿ ಮೋದಿ ಕೊಟ್ಟಿದ್ದಾರೆ. ಹೀಗಾಗಿ ಕೆಲವೇ ದಿನಗಳಲ್ಲಿ ಎಣ್ಣೆ ತಯಾರಿಸುವಲ್ಲಿ ಸ್ವಾವಲಂಬಿ ಆಗಬೇಕಿದೆ. ಈ ಮೂಲಕ ಹೊರ ದೇಶದಿಂದ ಬರುವ ಎಣ್ಣೆಗೆ ಬ್ರೇಕ್ ಹಾಕಬೇಕಿದೆ. ಅದಕ್ಕಾಗಿ ನಾವೇ ರೈತರಿಗೆ ಎಣ್ಣೆ ಬೀಜಗಳನ್ನು ಉಚಿತ ವಿತರಣೆ ಮಾಡಿ, ಎಣ್ಣೆ ಕಾಳು ಬೆಳೆಯಲು ವಿಶೇಷ ಪ್ರೋತ್ಸಾಹ ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
2023 ಸಿರಿಧಾನ್ಯ ವರ್ಷಾಚರಣೆ:
2023 ಅನ್ನು ಸಿರಿಧಾನ್ಯ ವರ್ಷಾಚರಣೆ ಮಾಡಲು ಯುನೈಟೆಡ್ ನೇಷನ್ಸ್ ರಾಷ್ಟ್ರಗಳು ನಿರ್ಧಾರ ಮಾಡಿವೆ. ಅದಕ್ಕಾಗಿ ಮುಂದಿನ ಎರಡು ವರ್ಷದಲ್ಲಿ ನಾವು ಸಿರಿಧಾನ್ಯ ಬೆಳೆಯಲು ಹೆಚ್ಚಿನ ಆದ್ಯತೆ ನೀಡಬೇಕಿದೆ. ನಮ್ಮ ರಾಜ್ಯದಲ್ಲಿಯೂ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ ಹೆಚ್ಚಿನ ಮಟ್ಟದಲ್ಲಿ ಸಿರಿಧಾನ್ಯ ಬೆಳೆಯುತ್ತಿದ್ದರೂ ಹೆಚ್ಚಿನ ಪ್ರಮಾಣದ ರಫ್ತು ಉತ್ತರಾಖಂಡ ರಾಜ್ಯ ಮಾಡುತ್ತಿದೆ. ಹಾಗಾಗಿ ಇಲ್ಲಿನ ಸಿರಿಧಾನ್ಯವನ್ನು ರಫ್ತು ಮಾಡುವ ಕೆಲಸ ಮಾಡಬೇಕಿದೆ ಎಂದರು.
ಮಣಿಪುರ ಸಂಪೂರ್ಣ ಸಾವಯವ ಕೃಷಿ ರಾಜ್ಯವಾಗಿದೆ:
ಸಾವಯವ ಕೃಷಿಯಲ್ಲಿ ಈಶಾನ್ಯ ರಾಜ್ಯದವರು ಹೆಚ್ಚಿನ ರಫ್ತು ಮಾಡುತ್ತಿದ್ದಾರೆ. ಮಣಿಪುರ ಇಡೀ ರಾಜ್ಯವೇ ಸಾವಯವ ಕೃಷಿ ರಾಜ್ಯವಾಗಿದೆ. ಈ ರೀತಿಯ ಪ್ರಯೋಗ ದೇಶಾದ್ಯಂತ ಮಾಡುವ ಕೆಲಸ ಪ್ರಾರಂಭ ಮಾಡಿದ್ದೇವೆ. ಇದಕ್ಕಾಗಿ ಕೃಷಿ, ತೋಟಗಾರಿಕೆ ಇಲಾಖೆಗೆ ಕೇಂದ್ರ ಹೆಚ್ಚು ಆದ್ಯತೆ ನೀಡುತ್ತಿದೆ. ಕೃಷಿಕರ ಆದಾಯ ದ್ವಿಗುಣಗೊಳಿಸಬೇಕು ಎನ್ನುವ ಟಾರ್ಗೆಟ್ ಮೋದಿ ಕೊಟ್ಟಿದ್ದಾರೆ. ಎರಡು ವರ್ಷ ಕೊರೊನಾ ಕಾರಣದಿಂದ ಹಿನ್ನಡೆಯಾಗಿದೆ. ಬರುವ ದಿನಗಳಲ್ಲಿ ರೈತರ ಆರ್ಥಿಕ ಶಕ್ತಿಯನ್ನು ವೃದ್ಧಿಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.