ಬೆಂಗಳೂರು: ಬಿಜೆಪಿಯ ದಿವಂಗತ ನಾಯಕ ಅನಂತಕುಮಾರ್ ಅವರ ಜೀವನವೇ ಒಂದು ಸಂದೇಶವಾಗಿದೆ. ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಅನಂತ ಕುಮಾರ ಯುವ ಪೀಳಿಗೆಗೆ ಯಾವತ್ತೂ ಪ್ರೇರಣೆಯಾಗಿ ಉಳಿಯುತ್ತಾರೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಅಭಿಪ್ರಾಯಪಟ್ಟರು.
ಅನಂತ ಕುಮಾರ ಪ್ರತಿಷ್ಠಾನ ಪ್ರಕಟಿಸಿರುವ “ಅನಂತ ಪಥ” ಮಾಸಿಕ ಪತ್ರಿಕೆಯ ಎಂಟನೇ ಸಂಚಿಕೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿ ಮಾತನಾಡಿದ ಸಚಿವರು, ಅನಂತ ಕುಮಾರ ನಮ್ಮೊಂದಿಗಿಲ್ಲ ಎಂಬುದನ್ನು ಇಂದಿಗೂ ನಂಬಲಾಗುತ್ತಿಲ್ಲ. ಇಷ್ಟುಬೇಗ ನಮ್ಮನ್ನೆಲ್ಲ ಬಿಟ್ಟು ಹೋಗುತ್ತಾರೆ ಎಂಬ ಕಲ್ಪನೆ ಕೂಡಾ ನಮಗ್ಯಾರಿಗೂ ಇರಲಿಲ್ಲ. ಅವರೊಬ್ಬ ಅಪ್ಪಟ ಸ್ನೇಹಜೀವಿ. ಹಾಗಾಗಿ ಅವರು ತೀರಿಕೊಂಡಾಗ ಅವರ ಅಂತ್ಯ ಸಂಸ್ಕಾರಕ್ಕೆ ಲಕ್ಷಾಂತರ ಜನ ಹರಿದು ಬಂದಿದ್ದರು ಎಂದರು.
“ಅನಂತ ಪಥ” ಮಾಸಿಕ ಪತ್ರಿಕೆಯ 8ನೇ ಸಂಚಿಕೆ ಬಿಡುಗಡೆ ಅನಂತ ಕುಮಾರ ಅವರಿಗೆ ಅವರೇ ಸಾಟಿ. ಭಾರತದ ರಾಜಕೀಯ ರಂಗ ಕಂಡ ಅಪರೂಪದ ನಾಯಕ. ಹಲವು ಪ್ರಥಮಗಳ ಸರದಾರ ಮತ್ತು ಹೊಸತನದ ಹರಿಕಾರ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಕೇಂದ್ರ ಸಂಪುಟ ದರ್ಜೆ ಸಚಿವರಾದ ಪ್ರಥಮ ಕನ್ನಡಿಗ. ವಿಶ್ವಸಂಸ್ಥೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಕನ್ನಡದಲ್ಲಿಯೇ ಮಾತನಾಡಿದ ಗೌರವ ಅವರದ್ದು ಎಂದು ಸದಾನಂದ ಗೌಡ ಬಣ್ಣಿಸಿದರು.
ಇದನ್ನೂ ಓದಿ:ತ್ವರಿತವಾಗಿ ಒಕ್ಕಲಿಗ ಪ್ರಾಧಿಕಾರ ರಚನೆ ಮಾಡಲೇಬೇಕು: ನಿರ್ಮಲಾನಂದನಾಥ ಸ್ವಾಮೀಜಿ
ಕ್ರೀಡಾ ಮತ್ತು ಸಂಸ್ಕೃತಿ ಸಚಿವರಾಗಿ ಹೊಸ ವರ್ಷವನ್ನು ಸ್ವಾಗತಿಸಲು ಸಾಮೂಹಿಕವಾಗಿ “ಒಂದೇ ಮಾತರಂ” ಹಾಡುವ ಪರಿಪಾಠವನ್ನು ಆರಂಭಿಸಿದ್ದು ಅವರೇ. ಇದನ್ನು ಇಂದಿಗೂ ಮುಂದುವರಿಸಿಕೊಂಡು ಬರುತ್ತಿರುವ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಮತ್ತವರ ಬಳಗಕ್ಕೆ ಅಭಿನಂದನೆಗಳನ್ನು ತಿಳಿಸಿದರು.
ಅನಂತ ಕುಮಾರ ಅವರು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದಾಗ ಯೂರಿಯಾ ಗೊಬ್ಬರಕ್ಕೆ ಬೇವು ಲೇಪನ ಮಾಡುವ ಕೆಲಸ ಆರಂಭಿಸಲಾಯಿತು. ಇದರಿಂದ ಯೂರಿಯಾ ದುರುಪಯೋಗ, ಕಾಳಸಂತೆ ನಿಂತಿತು. ಕೈಗಾರಿಕೆ ಮುಂತಾದ ಉದ್ದೇಶಗಳಿಗೆ ಬಳಸಿಕೊಳ್ಳುವುದು ತಪ್ಪಿತು. ಹಾಗಾಗಿ ರೈತರಿಗೆ ಗೊಬ್ಬರ ಪೂರೈಕೆ ಸರಾಗಗೊಂಡಿತು ಎಂದು ತಿಳಿಸಿದರು.
ನನ್ನ ಮತ್ತು ಅನಂತ ಕುಮಾರ ಅವರ ಒಡನಾಟ ತುಂಬಾ ಹಳೆಯದು. ಎಬಿವಿಪಿಯಲ್ಲಿ ಆರಂಭವಾಗಿ ಮೋದಿಯವರ ಸಂಪುಟದಲ್ಲಿ ಇಬ್ಬರೂ ಸಹಪಾಠಿಗಳಾಗುವ ತನಕವೂ ಮುಂದುವರಿಯಿತು. ಕಾಕತಾಳಿಯವೋ ಏನೋ? ಅನಂತ ಜೀ ಅವರು ಅಲಂಕರಿಸಿದ ಕೆಲವು ಹುದ್ದೆಗಳನ್ನು ನಾನೂ ನಿರ್ಹಹಿಸಬೇಕಾಗಿ ಬಂತು. ಬಿಜೆಪಿ 40 ರ ಆಸುಪಾಸಿನಲ್ಲಿ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುತ್ತಿತ್ತು. ಆದರೆ ಅನಂತ್ ಜೀ ಅಧ್ಯಕ್ಷರಾದ ಮೇಲೆ ಸಂಖ್ಯೆ ದುಪ್ಪಟ್ಟಾಯಿತು. 2004ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 79 ಸ್ಥಾನಗಳನ್ನು ಗೆದ್ದು ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ನಂತರ ನಾನು ರಾಜ್ಯ ಘಟಕದ ಅಧ್ಯಕ್ಷನಾದೆ, 2008ರಲ್ಲಿ ಪಕ್ಷವು ಅಧಿಕಾರಕ್ಕೂ ಬಂತು. ಇದಕ್ಕೆ ಅನಂತ್ ಜೀ ಅವರು ಪಕ್ಷಕ್ಕೆ ಅಂದು ಹಾಕಿದ ಭದ್ರ ಬುನಾದಿಯೇ ಕಾರಣವಾಗಿದೆ ಎಂದು ನಿಶ್ಚಿತವಾಗಿ ಹೇಳುತ್ತೇನೆ ಎಂದು ಸದಾನಂದ ಗೌಡ ಹೇಳಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಅವರು ಆರಂಭಿಸಿದ ಜನೌಷಧಿಯೂ ದಿನೇ ದಿನೇ ಜನಪ್ರಿಯಗೊಳ್ಳುತ್ತಿದೆ. ದೇಶದಲ್ಲಿ ಜನೌಷಧಿ ಮಾರಾಟ ಮಳಿಗೆಗಳ ಸಂಖ್ಯೆ ಇಂದು 7500 ದಾಟಿದೆ. ಕರ್ನಾಟಕ ರಾಜ್ಯವೊಂದರಲ್ಲಿಯೇ 850 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸತ್ತಿವೆ. ಶ್ರೀಸಾಮಾನ್ಯರಿಗೆ ವಿಶೇಷವಾಗಿ ಆರ್ಥಿಕವಾಗಿ ದುರ್ಬಲರಾದವರಿಗೆ ಕಡಿಮೆ ದರದಲ್ಲಿ ಔಷಧ ದೊರಕಿಸಿಕೊಡಬೇಕೆಂಬುದು ಅವರ ಕನಸಾಗಿತ್ತು. ಜನೌಷಧಿ ಅದನ್ನು ನನಸಾಗಿಸಿದೆ ಎಂದರು.
ಇದನ್ನೂ ಓದಿ:ಸಿಎಂ ಪುತ್ರನಿಂದ ಬೆನ್ನುತಟ್ಟಿಸಿಕೊಂಡವ ಹಿಂಗ್ ಮಾಡೋದಾ.. ಅಂದು ಜಾಲಿ ರೈಡ್, ಇಂದು ಜೈಲಿನೊಳಗೆ..
ಬೆಂಗಳೂರು ಮೆಟ್ರೋ, ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರವಾಗಿದೆ. ಪಕ್ಷ ಸಂಘಟನೆಯಲ್ಲಿಯೂ ಅವರು ಎತ್ತಿದ ಕೈ. ಅಗಾಧ ನೆನಪಿನ ಶಕ್ತಿ. ಹಾಗೆಯೇ ಅವರ ಹಾಸ್ಯಪ್ರಜ್ಞೆ, ಸಮಯ ಪ್ರಜ್ಞೆಯೂ ಮೆಚ್ಚುವಂತದ್ದೇ. ಎಂತಹದೇ ಬಿಗುವಿನ ವಾತಾವರಣವಿರಲಿ ಅದನ್ನು ತಮ್ಮ ಮಾತಿನ ಮೂಲಕವೇ ತಿಳಿಗೊಳಿಸುತ್ತಿದ್ದರು. ಅನಂತ್ ಜೀ ಇದ್ದಲ್ಲಿ ಲವಲವಿಕೆ ತುಂಬಿರುತ್ತಿತ್ತು. ಇಂದು ಅವರನ್ನು ನಾವು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎನ್ನುತ್ತ ಸದಾನಂದ ಗೌಡರು ಭಾವುಕರಾದರು.
ಅನಂತ ಕುಮಾರ ಅವರ ಕನಸುಗಳನ್ನು ನನಸಾಗಿಸಲು ಅನಂತ ಪ್ರತಿಷ್ಠಾನವು ಪ್ರಯತ್ನಿಸುತ್ತಿದೆ. ಹಾಗೆಯೇ ಈ ಪ್ರತಿಷ್ಠಾನದ ಮೂಲಕ ಅವರ ಚಿಂತನೆಗಳು, ಸಂದೇಶಗಳನ್ನು ಜನರಿಗೆ ತಲುಪಿಸಲು “ಅನಂತ ಪಥ” ಎಂಬ ಮಾಸಪತ್ರಿಕೆಯನ್ನು ಹೊರ ತರುತ್ತಿರುವುದು ಅತ್ಯಂತ ಸಮಂಜಸವಾಗಿದೆ. “ಅನಂತ ಪಥ” ಪತ್ರಿಕೆಯ 8ನೇ ಸಂಚಿಕೆಯನ್ನು ಅತ್ಯಂತ ಸಂತೋಷದಿಂದ ಬಿಡುಗಡೆಗೊಳಿಸುತ್ತಿದ್ದೇನೆ. ಇದಕ್ಕೆ ಕಾರಣೀಕರ್ತರಾದ ತೇಜಸ್ವಿನಿ ಅನಂತಕುಮಾರ್ ಮತ್ತವರ ತಂಡಕ್ಕೆ ಮತ್ತೊಮ್ಮೆ ಹಾರ್ದಿಕ ಅಭಿನಂದನೆಗಳು. “ಅನಂತ ಪಥ” ಮನೆ-ಮನೆ ತಲುಪಲಿ. ಮನೆ ಮಾತಾಗಲಿ. ಎಲ್ಲರಿಗೂ ಶುಭವಾಗಲಿ ಎಂದು ಸದಾನಂದ ಗೌಡ ಹರಸಿದರು.