ಬೆಂಗಳೂರು : ಬರೋಬ್ಬರಿ 23 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಆವರಣದಲ್ಲಿ ನಿರ್ಮಾಣವಾಗಿರುವ ಪವರ್ ಗ್ರಿಡ್ ವಿಶ್ರಾಮ ಸದನವನ್ನು ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್ ಕೆ ಸಿಂಗ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವರ್ಚುವಲ್ ಮೂಲಕ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸಚಿವ ಡಾ.ಮನ್ಸುಖ್ ಮಾಂಡವೀಯ ಉಪಸ್ಥಿತರಿದ್ದರು. ಅಲ್ಲದೆ, ಕರ್ನಾಟಕ ರಾಜ್ಯ ಇಂಧನ ಸಚಿವ ಕೆ ಜೆ ಜಾರ್ಜ್, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಪವರ್ ಗ್ರಿಡ್ ನಿರ್ದೇಶಕ ಡಾ. ಯತೀಂದ್ರ ದ್ವಿವೇದಿ, ಬೆಂಗಳೂರು ನಿಮ್ಹಾನ್ಸ್ ನಿರ್ದೇಶಕರಾದ ಡಾ. ಪ್ರತಿಮಾ ಮೂರ್ತಿ ಮತ್ತು ಪವರ್ ಗ್ರಿಡ್ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪವರ್ ಗ್ರಿಡ್ ವಿಶ್ರಾಮ ಸದನ ಉದ್ಘಾಟನೆ ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಆರ್.ಕೆ.ಸಿಂಗ್, "ದೂರದ ಊರುಗಳಿಂದ ಬರುವ ಬಡವರಿಗೆ ಈ ಪವರ್ ಗ್ರಿಡ್ ಅನುಕೂಲವಾಗಲಿದೆ. ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ವಿದ್ಯುತ್ ಒದಗಿಸಲು ಭಾರತ ಸರ್ಕಾರ ಗಮನಾರ್ಹ ಪ್ರಯತ್ನಗಳನ್ನು ಕೈಗೊಂಡಿದೆ" ಎಂದು ತಿಳಿಸಿದರು.
23 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಎರಡು ಅಂತಸ್ತಿನ ವಿಶ್ರಾಮ ಸದನವು 270 ಹಾಸಿಗೆಗಳನ್ನು ಹೊಂದಿದೆ. 55 ಕೋಣೆಗಳಿರುವ ಈ ಸದನದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಮತ್ತು ರೋಗಿಗಳ ಸಹಾಯಕರಿಗೆ ಗರಿಷ್ಟ ಪ್ರಮಾಣದಲ್ಲಿ ಸಾಧ್ಯವಾಗುವ ಎಲ್ಲಾ ರೀತಿಯ ಆರಾಮ ಒದಗಿಸಲಾಗುವುದು ಎಂದರು.
ಪವರ್ ಗ್ರಿಡ್ ವಿಶ್ರಾಮ ಸದನ ಉದ್ಘಾಟನೆ ಇದನ್ನೂ ಓದಿ :ಪವರ್ ಗ್ರಿಡ್ ಕಂಪನಿಯ ವಿರುದ್ದ ದಲಿತ ಸಂಘಟನೆ ಪ್ರತಿಭಟನೆ
ಕಾರ್ಪೊರೇಟ್ ಹಾಗೂ ಸಾಮಾಜಿಕ ಹೊಣೆ ಹೊತ್ತಿರುವ ಪವರ್ ಗ್ರಿಡ್ ಸಂಸ್ಥೆ ನವದೆಹಲಿಯ ಏಮ್ಸ್, ಪಾಟ್ನಾದ ಐಜಿಐಎಂಎಸ್, ದರ್ಬಂಗಾದ ಡಿಎಂಸಿಹೆಚ್, ಲಕ್ನೋದ ಗುವಾಹಟಿ ಮತ್ತು ವಡೋದರಾದ ಕೆಜಿಎಂಯುಗಳಲ್ಲಿ ಈಗಾಗಲೇ ಇದೇ ರೀತಿಯ ವಿಶ್ರಾಮ ಸದನಗಳನ್ನು ನಿರ್ಮಿಸಿದೆ. ರಾಂಚಿ ಮತ್ತು ಝಾನ್ಸಿಯಲ್ಲೂ ಪವರ್ ಗ್ರಿಡ್‌ನಿಂದ ಇಂತಹ ವಿಶ್ರಾಮ ಸದನಗಳನ್ನು ನಿರ್ಮಿಸಲಾಗುತ್ತಿದೆ. ಪವರ್ ಗ್ರಿಡ್ ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಕೌಶಲ್ಯಾಭಿವೃದ್ಧಿ, ಪರಿಸರ, ಕುಡಿಯುವ ನೀರು, ಜಲ ಸಂರಕ್ಷಣೆ ಮತ್ತು ನೈರ್ಮಲ್ಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಆ ಮೂಲಕ ದೇಶಾದ್ಯಂತ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸುಮಾರು 1000 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಕ್ರಮ ಕೈಗೊಂಡಿದೆ ಎಂದು ಹೇಳಿದರು.