ಬೆಂಗಳೂರು:ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಪಿಎಫ್‌ಐ ಸಂಘಟನೆ ನಿಷೇಧ ಮಾಡುವ ಮೂಲಕ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡವರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ರಾಷ್ಟ್ರೀಯ ಸುರಕ್ಷತೆಯೇ ಸರ್ವೋಚ್ಛ ಆದ್ಯತೆಯಾಗಿದೆ. ಸಂಘಟನೆಯ ನಿಷೇಧದಿಂದ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಗೆ ಅಪಾಯಕಾರಿಯಾಗಿದ್ದ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ. ನಮ್ಮ ದೇಶ ಸುರಕ್ಷತೆಗೆ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ.
ಪಿಎಸ್ಐ ಅಕ್ರಮ ಚಟುಟಿಕೆಗಳ ಬಗ್ಗೆ ಈ ಹಿಂದೆಯೇ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಪಿಎಫ್‌ಐ ಕೈವಾಡ ಇರುವ ಬಗ್ಗೆ ಆರೋಪಿಸಿದ್ದರು. ಈ ಬಗ್ಗೆ ಸಿಎಂ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ, ಪ್ರಕರಣದಲ್ಲಿ ಪಿಎಫ್‌ಐ ಸಂಘಟನೆ ಕೈವಾಡವಿರುವ ಕುರಿತು ತನಿಖೆ ತೀವ್ರಗೊಳಿಸುವಂತೆ ಸೂಚಿಸಿದ್ದರು. ಪಿಎಫ್‌ಐ, ಎಸ್ಡಿಪಿಐ ಸಂಘಟನೆಗಳು ದೇಶ ವಿರೋಧಿ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಕೇಂದ್ರ ಸರ್ಕಾರಕ್ಕಿರುವ ಮಾಹಿತಿಗಳ ಬಗ್ಗೆ ಸಿಎಂ ಬೊಮ್ಮಾಯಿ ಜೊತೆ ಹಂಚಿಕೊಂಡಿದ್ದರು.