ಬೆಂಗಳೂರು : ನಿಮಗೆ ನಿಜವಾಗಿಯೂ ಬದ್ಧತೆ ಹಾಗೂ ಎದೆಗಾರಿಕೆ ಇದ್ದರೆ ವಿಶೇಷ ಅಧಿವೇಶನ ಕರೆದು ಒಳ ಮೀಸಲಾತಿ ನಿರ್ಣಯ ಮಾಡಿ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ.
ಬಿಜೆಪಿ ಕಚೇರಿಯಲ್ಲಿಂದು ಮಾಜಿ ಸಚಿವ ಗೋವಿಂದ ಕಾರಜೋಳ, ಪರಿಷತ್ ಸದಸ್ಯ ಛಲವಾದಿ ನಾರಯಣಸ್ವಾಮಿ ಹಾಗೂ ಮಾಜಿ ಸಚಿವ ಹಾಲಪ್ಪ ಆಚಾರ್ ಜೊತೆಗೂಡಿ ಜಂಟಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, "ಸಿದ್ದರಾಮಯ್ಯನವರು ಚುನಾವಣಾ ಪೂರ್ವದ ಸಭೆಯಲ್ಲಿ ನಾವು ಒಳ ಮೀಸಲಾತಿಯನ್ನ ಮಾಡಿಯೇ ತೀರುತ್ತೇವೆ ಎಂದಿದ್ರು. ನಂತರ ಒಳ ಮೀಸಲಾತಿ ಮಾಡಲ್ಲ, ಹಿಂದೆಯೂ ಮಾಡಿಲ್ಲ ಅಂದಿದ್ದಾರೆ. ಬೇಗ ಕಾಂತರಾಜ್ ಆಯೋಗದ ವರದಿ ಜಾರಿ ಮಾಡಿ ಒಳ ಮೀಸಲಾತಿ ನಿರ್ಣಯ ಮಾಡಿ ಎಂದು ಟೀಕಿಸಿದರು.
ಸಂಸತ್ನಲ್ಲಿ ಚರ್ಚೆ ಆಗುವಾಗ ಒಬ್ಬ ಮಂತ್ರಿಯಾಗಿ ಏನು ಉತ್ತರ ಕೊಡಬೇಕೋ ಅದನ್ನು ಅಲ್ಲಿ ಕೊಟ್ಟಿದ್ದೇನೆ. ನರಸಿಂಹರಾಜು ಎಂಬ ಲೋಕಸಭೆ ಸದಸ್ಯರು ಒಳ ಮೀಸಲಾತಿ ಬಗ್ಗೆ ಪ್ರಶ್ನೆ ಕೇಳಿದ್ರು. ಅದಕ್ಕೆ ಸಂವಿಧಾನ ಏನು ಹೇಳುತ್ತದೆ ಎಂಬುದಕ್ಕೆ ನಾನು ಉತ್ತರ ಕೊಟ್ಟಿದ್ದೇನೆ. ಸಂವಿಧಾನವನ್ನು ತಿರುಚಿ ಹೇಳುವ ಹಾಗಿಲ್ಲ. ಈವಾಗಿನ 341 ಆರ್ಟಿಕಲ್ ಏನು ಹೇಳುತ್ತೆ ಎಂದು ಆ ಸದಸ್ಯರಿಗೆ ಉತ್ತರ ಕೊಟ್ಟಿದ್ದೇನೆ. ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಸದಾಶಿವ ಆಯೋಗದ ವರದಿ ಅಧ್ಯಯನ ಮಾಡಿ, ಆ ವರದಿ ಆಧಾರದ ಮೇಲೆ ಒಳ ಮೀಸಲಾತಿ ಮಾಡಬೇಕಿದೆ ಎಂದಿದ್ದರು. ಅದರಂತೆ ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಈ ದಿಕ್ಕಿನಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ ಎಂದು ವಿವರಿಸಿದರು.
ಸಿದ್ದರಾಮಯ್ಯ ಬಿಜೆಪಿಯ ಬೂಟಾಟಿಕೆ ಬಯಲಾಗಿದೆ ಎಂದಿದ್ದಾರೆ. ಸಿದ್ದರಾಮಯ್ಯನವರು ಸ್ವಯಂ ಘೋಷಿತ ಹಿಂದುಳಿದ ವರ್ಗಗಳ ನಾಯಕರು ಹಾಗೂ ವಕೀಲರು. ಒಳ ಮೀಸಲಾತಿಗೆ ಸರ್ಕಾರ ಬದ್ಧವಿದೆ ಎಂದು ದೇಶದ ಗೃಹ ಸಚಿವರೇ ಹೇಳಿದ್ದಾರೆ. ಒಳ ಮೀಸಲಾತಿಯನ್ನು ರಾಜ್ಯ ಬಿಜೆಪಿ ಸರ್ಕಾರ ಒಪ್ಪಿಕೊಂಡಿತ್ತು. ಮಾಧುಸ್ವಾಮಿ ಸಮಿತಿ ಕೊಟ್ಟ ವರದಿ ಮೇಲೆ ಒಳ ಮೀಸಲಾತಿ ನೀಡಿದ್ದೇವೆ. ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಮೀಸಲಾತಿ ಪರಿಷ್ಕರಣೆ ಆಗಬೇಕಿದೆ. ನಿಜವಾಗಿಯೂ ಶೋಷಿತರಿಗೆ ಮೀಸಲಾತಿ ಸಿಕ್ಕಿಲ್ಲ. ಇಷ್ಟು ಹೇಳಿ ವಿಸ್ತೃತ ಪೀಠಕ್ಕೆ ಅರ್ಜಿ ವರ್ಗಾಯಿಸಿತ್ತು. ನನ್ನ ಉತ್ತರದಲ್ಲಿ ಇದನ್ನು ಪ್ರಸ್ತಾಪ ಮಾಡಿದ್ದೇನೆ. ಇದು ಗೊತ್ತಿಲ್ಲದೇ ಸಿದ್ದರಾಮಯ್ಯ ನಮ್ಮ ಬದ್ಧತೆ ಬಗ್ಗೆ ಪ್ರಶ್ನೆ ಮಾಡ್ತಿದ್ದಾರೆ ಎಂದು ಟೀಕಿಸಿದರು.